

ಓಕ್ಲ್ಯಾಂಡ್: ನ್ಯೂಜಿಲೆಂಡ್ನ ಫಿನ್ ಅಲೆನ್ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್ಸಿ) ಟಿ20 ಲೀಗ್ನಲ್ಲಿ ಸ್ಯಾನ್ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡದ ಪರ ಒಂದೇ ಇನಿಂಗ್ಸ್ನಲ್ಲಿ 19 ಸಿಕ್ಸರ್ ಸಿಡಿಸುವ ಮೂಲಕ ನೂತನ ವಿಶ್ವದಾಖಲೆ ಬರೆದಿದ್ದಾರೆ. ಎಂಎಲ್ಸಿ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಫಿನ್ ಅಲೆನ್ 51 ಎಸೆತಗಳಲ್ಲಿ 5 ಬೌಂಡರಿ, 19 ಸಿಕ್ಸರ್ ಸಹಿತ 151 ರನ್ ಸಿಡಿಸಿದರು. ಈ ಮೂಲಕ 5 ವಿಕೆಟ್ಗೆ 269 ರನ್ ಕಲೆಹಾಕಿದ ಸ್ಯಾನ್ ಫ್ರಾನ್ಸಿಸ್ಕೋ ತಂಡ ವಾಷಿಂಗ್ಟನ್ ಫ್ರೀಡಂ ವಿರುದ್ಧ 123 ರನ್ಗಳಿಂದ ಗೆದ್ದು ಶುಭಾರಂಭ ಕಂಡಿತು.
2017ರಲ್ಲಿ ಕ್ರಿಸ್ ಗೇಲ್ ಬಾಂಗ್ಲಾ ಪ್ರೀಮಿಯರ್ ಲೀಗ್ನಲ್ಲಿ ಮತ್ತು ಈಸ್ಟೋನಿಯಾದ ಸಾಹಿಲ್ ಚೌಹಾಣ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಲಾ 18 ಸಿಕ್ಸರ್ ಸಿಡಿಸಿದ್ದು, ಟಿ20ಯಲ್ಲಿ ಇದುವರೆಗಿನ ವಿಶ್ವದಾಖಲೆಯಾಗಿತ್ತು. ಅಲೆನ್ 34 ಎಸೆತಗಳಲ್ಲೇ ಶತಕ ಸಿಡಿಸಿದರು. ಇದು ಟಿ20 ಫ್ರಾಂಚೈಸಿ ಲೀಗ್ನಲ್ಲಿ 2ನೇ ಅತಿವೇಗದ ಶತಕವೆನಿಸಿದೆ. 2013ರಲ್ಲಿ ಕ್ರಿಸ್ ಗೇಲ್ ಆರ್ಸಿಬಿ ಪರ 30 ಎಸೆತಗಳಲ್ಲೇ ಶತಕ ಸಿಡಿಸಿರುವುದು ದಾಖಲೆ.
ಅಲೆನ್ 49 ಎಸೆತಗಳಲ್ಲೇ 150 ರನ್ ಪೂರೈಸಿದರು. ಇದು ಟಿ20ಯಲ್ಲಿ ಅತಿವೇಗದ 150 ರನ್ ಸಾಧನೆಯಾಗಿದೆ. 2022ರಲ್ಲಿ ಡಿವಾಲ್ಡ್ ಬ್ರೆವಿಸ್ 52 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದು ಹಿಂದಿನ ದಾಖಲೆ.
ನ್ಯೂಜಿಲೆಂಡ್ನ ಫಿನ್ ಅಲೆನ್ ಅವರನ್ನು 2022ರ ಐಪಿಎಲ್ ಮಿನಿ ಹರಾಜಿನಲ್ಲಿ 80 ಲಕ್ಷ ರೂಪಾಯಿ ನೀಡಿ ಆರ್ಸಿಬಿ ತಂಡ ಖರೀದಿಸಿತ್ತು. ಆದರೆ ಐಪಿಎಲ್ 2 ಆವೃತ್ತಿಗಳಲ್ಲಿ ಪದಾರ್ಪಣೆಯ ಅವಕಾಶವೇ ದೊರೆಯಲಿಲ್ಲ.