ಕುತೂಹಲ ಮೂಡಿಸಿದೆ ಐಪಿಎಲ್​ ಪ್ಲೇಆಫ್​ ರೇಸ್​; ಯಾರಿಗೆ ಚಾನ್ಸ್​? ಇಲ್ಲಿದೆ ಎಲ್ಲ 10 ತಂಡಗಳ ಲೆಕ್ಕಾಚಾರ...

web ipl play off1
Published on

ಬೆಂಗಳೂರು: ರನ್​-ಸಿಕ್ಸರ್​ ಮಳೆಯಿಂದ ಸದ್ದು ಮಾಡುತ್ತಿರುವ ಐಪಿಎಲ್​ 17ನೇ ಆವೃತ್ತಿ ಈಗ ನಿರ್ಣಾಯಕ ಹಂತಕ್ಕೆ ಬಂದಿದೆ. ಲೀಗ್​ ಹಂತದ 70 ಪಂದ್ಯಗಳ ಪೈಕಿ 51 ಪಂದ್ಯಗಳು ಮುಕ್ತಾಯಗೊಂಡಿದ್ದು, ಇನ್ನು 19 ಪಂದ್ಯಗಳು ಮಾತ್ರ ಬಾಕಿ ಇದೆ. ಆದರೆ ಇದುವರೆಗೆ ಯಾವ ತಂಡಕ್ಕೂ ಪ್ಲೇಆಫ್​​ ಪ್ರವೇಶ ಖಚಿತಗೊಂಡಿಲ್ಲ ಮತ್ತು ಯಾವ ತಂಡವೂ ಅಧಿಕೃತವಾಗಿ ರೇಸ್​ನಿಂದ ಹೊರಬಿದ್ದಿಲ್ಲ. ಆದರೆ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ಪ್ಲೇಆಫ್​​ಗೆ ಪ್ರವೇಶ ಬಹುತೇಕ ಖಾತ್ರಿಪಡಿಸಿಕೊಂಡಿದ್ದರೆ, ಕೊನೇ 2 ಸ್ಥಾನದಲ್ಲಿರುವ ಮುಂಬೈ, ಆರ್​ಸಿಬಿ ತಂಡಗಳು ಬಹುತೇಕ ನಿರ್ಗಮನ ಬಾಗಿಲಲ್ಲಿವೆ. ಉಳಿದ 3 ಪ್ಲೇಆಫ್​ ಸ್ಥಾನಕ್ಕೆ ಸದ್ಯ ಕೆಕೆಆರ್​, ಲಖನೌ, ಸನ್​ರೈಸರ್ಸ್​, ಸಿಎಸ್​ಕೆ ನೆಚ್ಚಿನ ತಂಡಗಳಾಗಿವೆ. ಡೆಲ್ಲಿ, ಗುಜರಾತ್​, ಪಂಜಾಬ್​ ಮಾಡು ಇಲ್ಲವೆ ಸ್ಥಿತಿಯಲ್ಲಿದ್ದು, 1 ಪಂದ್ಯ ಸೋತರೂ ನಿರ್ಗಮನ ಬಾಗಿಲಿನತ್ತ ಮುಖ ಮಾಡಲಿವೆ. ಪ್ಲೇಆಫ್​ ಪ್ರವೇಶ ಖಾತ್ರಿ ಪಡಿಸಿಕೊಳ್ಳಲು ಕನಿಷ್ಠ 9 ಜಯ, ಇತರ ಫಲಿತಾಂಶಗಳ ಅನುಕೂಲದೊಂದಿಗೆ ಬಹುತೇಕ ಸ್ಥಾನ ಖಾತ್ರಿಗಾಗಿ ಕನಿಷ್ಠ 8 ಜಯ ಮತ್ತು ಇತರ ಫಲಿತಾಂಶಗಳ ವರದಾನವನ್ನು ಆಶ್ರಯಿಸಲು ಕನಿಷ್ಠ 7 ಜಯ ಅಗತ್ಯ ಎಂಬ ಆಧಾರದಲ್ಲಿ ಎಲ್ಲ 10 ತಂಡಗಳ ಪ್ಲೇಆಫ್​​ ಸಾಧ್ಯತೆಯ ಲೆಕ್ಕಾಚಾರ ಹೀಗಿದೆ...

ರಾಜಸ್ಥಾನ ರಾಯಲ್ಸ್​

ಸಂಜು ಸ್ಯಾಮ್ಸನ್​ ಬಳಗ ಮೊದಲ ತಂಡವಾಗಿ ಪ್ಲೇಆಫ್​​ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಉಳಿದ 4 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಪ್ಲೇಆಫ್​​ ಪ್ರವೇಶಕ್ಕೆ ಅಧಿಕೃತ ಮುದ್ರೆ ಬೀಳಲಿದೆ. 2&3 ಪಂದ್ಯ ಗೆದ್ದರೆ ಅಗ್ರ 2 ತಂಡಗಳ ಪೈಕಿ ಒಂದಾಗಿ ಪ್ಲೇಆಫ್​​ ಪ್ರವೇಶಿಸುವ ಅವಕಾಶವೂ ರಾಜಸ್ಥಾನದ ಮುಂದಿದೆ.

ಬಾಕಿ ಪಂದ್ಯಗಳು: ಮೇ 7: ಡೆಲ್ಲಿ, ಮೇ 12: ಸಿಎಸ್​ಕೆ, ಮೇ 15: ಪಂಜಾಬ್​, ಮೇ 19: ಕೆಕೆಆರ್​.

ಕೋಲ್ಕತ ನೈಟ್​ರೈಡರ್ಸ್​

ಉಳಿದ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದರೂ ಪ್ಲೇಆಫ್​​ ಬಹುತೇಕ ಖಚಿತವಾಗಲಿದ್ದು, 2ರಲ್ಲಿ ಗೆದ್ದರೆ ಅಧಿಕೃತ ಮುದ್ರೆ ಬೀಳಲಿದೆ. ಕೊನೇ 4 ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಕೆಳಸ್ಥಾನದಲ್ಲಿರುವ ಮುಂಬೈ ವಿರುದ್ಧ ಇನ್ನೊಂದು ಪಂದ್ಯ ಆಡುವ ಅನುಕೂಲವಿದೆ. ಅಗ್ರ 2 ತಂಡಗಳ ಪೈಕಿ ಒಂದಾಗಿ ಮೊದಲ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯುವ ಅವಕಾಶವೂ ಕೆಕೆಆರ್​ ತಂಡದ ಮುಂದಿದೆ.

ಬಾಕಿ ಪಂದ್ಯಗಳು: ಮೇ 5: ಲಖನೌ, ಮೇ 11: ಮುಂಬೈ, ಮೇ 13: ಗುಜರಾತ್​, ಮೇ 19: ರಾಜಸ್ಥಾನ.

ಲಖನೌ ಸೂಪರ್​ಜೈಂಟ್ಸ್​

ಆಡಿರುವ 10ರಲ್ಲಿ 6ರಲ್ಲಿ ಗೆದ್ದಿರುವ ಲಖನೌ ತಂಡದ ಪ್ಲೇಆಫ್​​ ಅವಕಾಶ ವೃದ್ಧಿಸಿದೆ. ಉಳಿದ 4ರಲ್ಲಿ 2ರಲ್ಲಿ ಗೆದ್ದರೂ ಪ್ಲೇಆಫ್​​ ಅವಕಾಶವಿರಲಿದೆ. ಆದರೆ ಕೊನೇ 3 ಪಂದ್ಯಗಳನ್ನು ತವರಿನಿಂದ ಹೊರಗೆ ಆಡಲಿರುವುದು ಎಲ್​ಎಸ್​ಜಿಗೆ ಹಿನ್ನಡೆ ಎನಿಸಿದೆ. ಮುಂಬೈ ವಿರುದ್ಧದ ಕಳೆದ ಪಂದ್ಯದ ಗೆಲುವನ್ನು ಕೊನೇ ಪಂದ್ಯದಲ್ಲೂ ಪುನರಾವರ್ತಿಸುವ ಅವಕಾಶವಿದೆ. ಅದಕ್ಕೆ ಮುನ್ನ 1 ಪಂದ್ಯ ಗೆದ್ದುಕೊಳ್ಳುವ ಜತೆಗೆ ರನ್​ರೇಟ್​ ಕೂಡ ತುಸು ಚೇತರಿಕೆ ಕಾಣಬೇಕಾಗಿದೆ. ಉಳಿದ 4ರಲ್ಲಿ 3ರಲ್ಲಿ ಸೋತರೆ ಲಖನೌಗೆ ಬಾಗಿಲು ಬಹುತೇಕ ಬಂದ್​ ಆಗಲಿದೆ.

ಬಾಕಿ ಪಂದ್ಯಗಳು: ಮೇ 5: ಕೆಕೆಆರ್​, ಮೇ 8: ಸನ್​ರೈಸರ್ಸ್​, ಮೇ 14: ಡೆಲ್ಲಿ, ಮೇ 17: ಮುಂಬೈ.

ಸನ್​ರೈಸರ್ಸ್ ಹೈದರಾಬಾದ್​​

ಮೊದಲ 7ರಲ್ಲಿ 5 ಪಂದ್ಯ ಗೆದ್ದು ಸುಸ್ಥಿತಿಯಲ್ಲಿದ್ದ ಸನ್​ರೈಸರ್ಸ್​ ನಂತರ ಆರ್​ಸಿಬಿ, ಸಿಎಸ್​ಕೆ ವಿರುದ್ಧ ಸತತ 2 ಪಂದ್ಯಗಳಲ್ಲಿ ಸೋತು ಸಂಕಷ್ಟಕ್ಕೆ ಸಿಲುಕಿತ್ತು. ರಾಯಲ್ಸ್​ ವಿರುದ್ಧದ 1 ರನ್​ ಜಯದಿಂದ ಮತ್ತೆ ಪ್ಲೇಆಫ್​​ ಅವಕಾಶ ವೃದ್ಧಿಸಿಕೊಂಡಿದೆ. ಉಳಿದ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೂ ಪ್ಲೇಆಫ್​ ಅವಕಾಶವಿರಲಿದೆ. ಈ ಪೈಕಿ ಕೊನೇ 3 ಪಂದ್ಯಗಳನ್ನು ತವರಿನ ಹೈದರಾಬಾದ್​ ಸ್ಟೇಡಿಯಂನಲ್ಲೇ ಆಡಲಿರುವುದು ಪ್ಯಾಟ್​ ಕಮ್ಮಿನ್ಸ್​ ಬಳಗಕ್ಕೆ ಹೆಚ್ಚು ಅನುಕೂಲಕರ ಎನಿಸಿದೆ.

ಬಾಕಿ ಪಂದ್ಯಗಳು: ಮೇ 6: ಮುಂಬೈ, ಮೇ 8: ಲಖನೌ, ಮೇ 16: ಗುಜರಾತ್​, ಮೇ 19: ಪಂಜಾಬ್​.

ಚೆನ್ನೈ ಸೂಪರ್​ಕಿಂಗ್ಸ್​

ಸನ್​ರೈಸರ್ಸ್​ ವಿರುದ್ಧ 78 ರನ್​ಗಳಿಂದ ಗೆದ್ದ ಬೆನ್ನಲ್ಲೇ ಪಂಜಾಬ್​ ವಿರುದ್ಧ ಸೋತಿದ್ದು ಹಿನ್ನಡೆ ತಂದಿದೆ. ಉಳಿದ 4 ಪಂದ್ಯಗಳಲ್ಲಿ 4ರಲ್ಲೂ ಗೆದ್ದರೆ ಪ್ಲೇಆಫ್​ ಖಚಿತ. 3ರಲ್ಲಿ ಗೆದ್ದರೂ ಇತರ ಲೆಕ್ಕಾಚಾರಗಳ ಆಧಾರದಲ್ಲಿ ಅವಕಾಶವಿರಲಿದೆ. ಆದರೆ ಹಾಲಿ ಚಾಂಪಿಯನ್​ ತಂಡ ಕೊನೇ 4ರಲ್ಲಿ 1 ಪಂದ್ಯವನ್ನಷ್ಟೇ ತವರಿನಲ್ಲಿ ಆಡಲಿದೆ.

ಬಾಕಿ ಪಂದ್ಯಗಳು: ಮೇ 5: ಪಂಜಾಬ್​, ಮೇ 10: ಗುಜರಾತ್​, ಮೇ 12: ರಾಜಸ್ಥಾನ, ಮೇ 18: ಆರ್​ಸಿಬಿ.

ಡೆಲ್ಲಿ ಕ್ಯಾಪಿಟಲ್ಸ್​

ಟೂರ್ನಿಯ ಉಳಿದೆಲ್ಲ ತಂಡಗಳಿಗಿಂತ ಮೊದಲಾಗಿ 11 ಪಂದ್ಯ ಆಡಿರುವ ಡೆಲ್ಲಿಗೆ ಇನ್ನು 3 ಪಂದ್ಯಗಳಷ್ಟೇ ಬಾಕಿ ಇದ್ದು, ಈ ಮೂರರಲ್ಲೂ ಗೆದ್ದರಷ್ಟೇ ಪ್ಲೇಆಫ್​​ ಆಸೆ ಇಡಬಹುದಾಗಿದೆ. ಉಳಿದ 3ರಲ್ಲಿ 2 ಪಂದ್ಯಗಳನ್ನು ಅಂಕಪಟ್ಟಿಯಲ್ಲಿ ತನಗಿಂತ ಮೇಲಿನ ಸ್ಥಾನದಲ್ಲಿರುವ ತಂಡಗಳ ವಿರುದ್ಧ ಆಡಲಿದೆ. ಅದರಲ್ಲೂ ಅಗ್ರಸ್ಥಾನಿ ರಾಜಸ್ಥಾನ ವಿರುದ್ಧದ ಮುಂದಿನ ಪಂದ್ಯ ಡೆಲ್ಲಿ ತಂಡದ ಭವಿಷ್ಯವನ್ನು ನಿರ್ಧರಿಸಲಿದೆ.

ಬಾಕಿ ಪಂದ್ಯಗಳು: ಮೇ 7: ರಾಜಸ್ಥಾನ, ಮೇ 12: ಆರ್​ಸಿಬಿ, ಮೇ 14: ಲಖನೌ.

ಗುಜರಾತ್​ ಟೈಟಾನ್ಸ್​

ತಾನಾಡಿದ ಮೊದಲ 2 ಆವೃತ್ತಿಗಳಲ್ಲಿ ಚಾಂಪಿಯನ್​, ರನ್ನರ್​ಅಪ್​ ಆಗಿರುವ ಗುಜರಾತ್​ ಈ ಬಾರಿ ಶುಭಮಾನ್​ ಗಿಲ್​ ಸಾರಥ್ಯದಲ್ಲಿ ಅಸ್ಥಿರ ನಿರ್ವಹಣೆ ತೋರಿದ್ದು, ಪ್ಲೇಆಫ್​ ಪ್ರವೇಶಿಸಲು ಪರದಾಡುತ್ತಿದೆ. 10ರಲ್ಲಿ 4 ಪಂದ್ಯ ಮಾತ್ರ ಗೆದ್ದಿರುವ ಗುಜರಾತ್​, ಕೊನೇ 4 ಪಂದ್ಯದಲ್ಲೂ ಗೆದ್ದರಷ್ಟೇ ಪ್ಲೇಆಫ್​ ಆಸೆ ಇಡಬಹುದಾಗಿದೆ. ಕಳಪೆ ರನ್​ರೇಟ್​ ಕೂಡ ದೊಡ್ಡ ಹಿನ್ನಡೆಯಾಗಿದೆ. ಅಂಕಪಟ್ಟಿಯಲ್ಲಿ ತನಗಿಂತ ಮೇಲಿರುವ 3 ತಂಡಗಳ ವಿರುದ್ಧ ಕೊನೇ 3 ಪಂದ್ಯ ಆಡಲಿರುವುದು ಒತ್ತಡ ಹೆಚ್ಚಿಸಿದೆ.

ಬಾಕಿ ಪಂದ್ಯಗಳು: ಮೇ 4: ಆರ್​ಸಿಬಿ, ಮೇ 10: ಸಿಎಸ್​ಕೆ, ಮೇ 13: ಕೆಕೆಆರ್​, ಮೇ 16: ಸನ್​ರೈಸರ್ಸ್​.

ಪಂಜಾಬ್​ ಕಿಂಗ್ಸ್​

ದಿಟ್ಟ ನಿರ್ವಹಣೆಯ ನಡುವೆ ಕೆಲ ಪಂದ್ಯಗಳನ್ನು ಕೊನೇ ಓವರ್​ನಲ್ಲಿ ರೋಚಕವಾಗಿ ಸೋತಿರುವುದು ಪಂಜಾಬ್​ ಸ್ಥಿತಿ ಬಿಗಡಾಯಿಸಿದೆ. ಉಳಿದ 4 ಪಂದ್ಯಗಳಲ್ಲೂ ಗೆದ್ದರೆ ಪಂಜಾಬ್​ಗೆ ಈಗಲೂ ಪ್ಲೇಆ್​ ಅವಕಾಶವಿದೆ. ಜತೆಗೆ ರನ್​ರೇಟ್​ ಕೂಡ ಸುಧಾರಣೆ ಕಾಣಬೇಕಾದ ಅಗತ್ಯವಿದೆ. ರಾಜಸ್ಥಾನ, ಸನ್​ರೈಸರ್ಸ್​ ವಿರುದ್ಧದ ಕೊನೇ 2 ತವರಿನಿಂದ ಹೊರಗಿನ ಪಂದ್ಯಗಳು ಪಂಜಾಬ್​ ಸವಾಲು ಕಠಿಣಗೊಳಿಸಿದೆ.

ಬಾಕಿ ಪಂದ್ಯಗಳು: ಮೇ 5: ಸಿಎಸ್​ಕೆ, ಮೇ 9: ಆರ್​ಸಿಬಿ, ಮೇ 15: ರಾಜಸ್ಥಾನ, ಮೇ 19: ಸನ್​ರೈಸರ್ಸ್​.

*ಮುಂಬೈ ಇಂಡಿಯನ್ಸ್​

ಟೂರ್ನಿಯ 11 ಪಂದ್ಯಗಳಲ್ಲಿ 8ರಲ್ಲಿ ಸೋತಿದ್ದರೂ, ಗಣಿತಶಾಸ್ತ್ರದ ಪ್ರಕಾರ ಮುಂಬೈ ಇಂಡಿಯನ್ಸ್​ ಇನ್ನೂ ಪ್ಲೇಆಫ್​​ ರೇಸ್​ನಿಂದ ಹೊರಬಿದ್ದಿಲ್ಲ! ಆದರೆ 12 ಅಂಕಗಳೊಂದಿಗೆ ಮುಂಬೈ ಪ್ಲೇಆಫ್​​ಗೆ ಏರಬೇಕಾದರೆ ಪವಾಡವೇ ನಡೆಯಬೇಕು. ಉಳಿದ 3ರಲ್ಲಿ 2 ಪಂದ್ಯ ತವರಿನಲ್ಲಿ ಆಡುವ ಅನುಕೂಲವಿದ್ದರೂ, 5 ಬಾರಿಯ ಚಾಂಪಿಯನ್​ ತಂಡಕ್ಕೆ ಕೊನೇ ಸ್ಥಾನ ತಪ್ಪಿಸಿಕೊಳ್ಳಲು ಹೋರಾಡುವುದು ಒಂದೇ ಸಮಾಧಾನಕರ ಮಾರ್ಗವೆನಿಸಿದೆ.

ಬಾಕಿ ಪಂದ್ಯಗಳು: ಮೇ 6: ಸನ್​ರೈಸರ್ಸ್​, ಮೇ 11: ಕೆಕೆಆರ್​, ಮೇ 17: ಲಖನೌ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು

ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿರುವ ಆರ್​ಸಿಬಿ, ಅಂಕಪಟ್ಟಿಯ ಕೊನೇ ಸ್ಥಾನದಿಂದ ಪುಟಿದೆದ್ದು ಅಗ್ರ 4ರಲ್ಲಿ ಸ್ಥಾನ ಸಂಪಾದಿಸುವುದು ಕಾಗದದ ಮೇಲಿನ ಲೆಕ್ಕಾಚಾರದಲ್ಲಿ ಈಗಲೂ ಸಾಧ್ಯವಿದೆ. ಉಳಿದ 4ರಲ್ಲಿ ಗೆದ್ದು 14 ಅಂಕ ಸಂಪಾದಿಸಿದರೂ, ಲೀಗ್​ ಹಂತ ಮುಕ್ತಾಯಕ್ಕೆ 3ಕ್ಕಿಂತ ಹೆಚ್ಚಿನ ತಂಡಗಳು 14ಕ್ಕಿಂತ ಅಧಿಕ ಅಂಕ ಕಲೆಹಾಕದಿರಲಿ ಎಂದೂ ಆರ್​ಸಿಬಿ ಪ್ರಾರ್ಥಿಸಬೇಕಾಗುತ್ತದೆ. ಅಂದರೆ ರಾಜಸ್ಥಾನ, ಕೆಕೆಆರ್​ 10ಕ್ಕಿಂತ ಹೆಚ್ಚಿನ ಪಂದ್ಯ ಗೆಲ್ಲಬೇಕು ಮತ್ತು ಇತರ 7 ತಂಡಗಳಲ್ಲಿ ಒಂದು ತಂಡ ಮಾತ್ರ 7ಕ್ಕಿಂತ ಅಧಿಕ ಪಂದ್ಯ ಗೆಲ್ಲಬೇಕು. ಕೊನೇ 4ರಲ್ಲಿ 3 ಪಂದ್ಯ ತವರಿನಲ್ಲಿ ಆಡುವ ಅನುಕೂಲವಿದ್ದರೂ, ಕಳಪೆ ರನ್​ರೇಟ್​ ದೊಡ್ಡ ಹಿನ್ನಡೆ ಎನಿಸಿದೆ.

ಬಾಕಿ ಪಂದ್ಯಗಳು: ಮೇ 4: ಗುಜರಾತ್​, ಮೇ 9: ಪಂಜಾಬ್​, ಮೇ 12: ಡೆಲ್ಲಿ, ಮೇ 18: ಸಿಎಸ್​ಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net