ಐಸಿಸಿ ಸಭೆಯಲ್ಲಿ ಮಹತ್ವದ ನಿರ್ಧಾರ: ಭಾರತಕ್ಕೆ ಸಿಗದ ಡಬ್ಲ್ಯುಟಿಸಿ ಫೈನಲ್​ ಆತಿಥ್ಯ ಅವಕಾಶ!

New Project
Published on

ಸಿಂಗಾಪುರ: ಇದುವರೆಗೆ ನಡೆದ ಮೂರು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​ ​ ಪಂದ್ಯಗಳು ಕ್ರಿಕೆಟ್​ ಜನಕರ ಆತಿಥ್ಯದಲ್ಲೇ ನಡೆದಿದ್ದರೆ, ಇದೀಗ ಮುಂದಿನ ಮೂರು ಆವೃತ್ತಿಗಳ ಫೈನಲ್​ ​ ಪಂದ್ಯವನ್ನೂ ಇಂಗ್ಲೆಂಡ್​ನಲ್ಲೇ ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಇದರೊಂದಿಗೆ 2031ರವರೆಗೆ ಡಬ್ಲ್ಯುಟಿಸಿ ಫೈನಲ್​ ​ ಪಂದ್ಯ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಯ (ಇಸಿಬಿ) ಆತಿಥ್ಯದಲ್ಲೇ ನಡೆಯುವುದು ಖಚಿತಗೊಂಡಿದೆ.

ಭಾರತ ಮುಂದಿನ 2027ರ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್​​ ಪಂದ್ಯದ ಆತಿಥ್ಯಕ್ಕೆ ಆಸಕ್ತಿ ತೋರಿತ್ತು. ಆದರೆ ಇದುವರೆಗೆ ನಡೆದಿರುವ ಮೂರು ಆವೃತ್ತಿಗಳ ಫೈನಲ್​​ ಕೂಡ ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಂಡಿರುವುದರಿಂದ ಮುಂದಿನ ಮೂರು ಫೈನಲ್​​ಗಳನ್ನೂ ಆಂಗ್ಲರ ನೆಲದಲ್ಲೇ ನಡೆಸಲು, ಭಾನುವಾರ ಮುಕ್ತಾಯಗೊಂಡ 4 ದಿನಗಳ ಐಸಿಸಿಯ ವಾರ್ಷಿಕ ಮಹಾಸಭೆಯಲ್ಲಿ ರ್ನಿಣಯ ಕೈಗೊಳ್ಳಲಾಗಿದೆ. ಇದರೊಂದಿಗೆ 2027, 2029 ಮತ್ತು 2031ರ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್​​ ಆಂಗ್ಲರ ನೆಲದಲ್ಲೇ ನಡೆಯುವುದು ಖಚಿತಗೊಂಡಿದೆ.

ಮೊದಲ 3 ಆವೃತ್ತಿಗಳ ಫೈನಲ್​​ ಇಂಗ್ಲೆಂಡ್​ನ ಸೌಥಾಂಪ್ಟನ್​ (2021), ಓವಲ್​ (2023) ಮತ್ತು ಲಾರ್ಡ್ಸ್​ನಲ್ಲಿ (2025) ನಡೆದಿವೆ. ಈ ಪಂದ್ಯಗಳಲ್ಲಿ ಆತಿಥೇಯ ದೇಶ ಆಡದಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಿಯ ಪ್ರೇಕ್ಷಕರು ಹಾಜರಾಗಿದ್ದರು ಮತ್ತು ಸ್ಪರ್ಧಾತ್ಮಕ ಪಿಚ್​ ಕೂಡ ನಿರ್ಮಿಸಲಾಗಿತ್ತು.

ಡಬ್ಲ್ಯುಟಿಸಿ ಫೈನಲ್​​ ಪಂದ್ಯ ಯಾವಾಗಲೂ ಜೂನ್​ನಲ್ಲಿ ಆಯೋಜನೆಗೊಳ್ಳುತ್ತದೆ. ಆ ಸಮಯದಲ್ಲಿ ಇತರ ಪ್ರಮುಖ ಟೆಸ್ಟ್​ ದೇಶಗಳಲ್ಲಿ ಮಳೆಗಾಲವಾಗಿರುತ್ತದೆ. ಹೀಗಾಗಿ ಡಬ್ಲ್ಯುಟಿಸಿ ಫೈನಲ್​​ ಆಯೋಜನೆಗೆ ಇಂಗ್ಲೆಂಡ್​ನ ವಾತಾವರಣವೇ ಸೂಕ್ತ ಎಂದೂ ಐಸಿಸಿ ಪರಿಗಣಿಸಿದೆ.

ಡಬ್ಲ್ಯುಟಿಸಿ ಫೈನಲ್​​ ಆತಿಥ್ಯ ಪಡೆದರೆ, ಆಗ ಭಾರತವೂ ಫೈನಲ್ ​ಗೇರಿದರಷ್ಟೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಒಂದು ವೇಳೆ ಭಾರತ ಫೈನಲ್​ಗೆ ಅರ್ಹತೆ ಪಡೆದರೆ ಆಗ ಪ್ರೇಕ್ಷಕರ ಕೊರತೆ ಉಂಟಾಗಬಹುದು. ಈ ಕಾರಣಕ್ಕಾಗಿ ಭಾರತಕ್ಕೆ ಡಬ್ಲ್ಯುಟಿಸಿ ಫೈನಲ್​ ​ ಆತಿಥ್ಯ ನೀಡಲು ಐಸಿಸಿ ನಿರಾಕರಿಸಿದೆ ಎನ್ನಲಾಗಿದೆ.

ಮಹಿಳಾ ಕ್ರಿಕೆಟ್​ಗೆ ಬೆಂಬಲ

ತಾಲಿಬಾನ್​ ಆಡಳಿತದ ನಂತರ ಸಂಪೂರ್ಣವಾಗಿ ಅಸಡ್ಡೆಗೆ ಒಳಗಾಗಿರುವ ಅಫ್ಘಾನಿಸ್ತಾನದ ಮಹಿಳಾ ಕ್ರಿಕೆಟ್​ ತಂಡಕ್ಕೂ ಪ್ರೋತ್ಸಾಹ ನೀಡಲು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಭಾರತ, ಇಂಗ್ಲೆಂಡ್​ ಮತ್ತು ಆಸ್ಟ್ರೆಲಿಯಾದ ಸಹಕಾರದೊಂದಿಗೆ  ಮಹಿಳಾ ಕ್ರಿಕೆಟ್​ ಅಭಿವೃದ್ಧಿಗೆ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರನ್ವಯ ಆಫ್ಘನ್​ ಮಹಿಳಾ ಕ್ರಿಕೆಟಿಗರಿಗೆ ಈ ದೇಶಗಳ ದೇಶೀಯ ಕ್ರಿಕೆಟ್​ನಲ್ಲಿ ಆಡುವ ಅವಕಾಶ ಲಭಿಸಲಿದೆ. ಜತೆಗೆ ಹಾಲಿ ವರ್ಷದ ಏಕದಿನ ವಿಶ್ವಕಪ್​ ಮತ್ತು ಮುಂದಿನ ವರ್ಷದ ಟಿ20 ವಿಶ್ವಕಪ್​ ವೇಳೆಯೂ ಒಳಗೊಳ್ಳುವಂಥ ವಿಶೇಷ ಅವಕಾಶಗಳನ್ನು ನೀಡಲಾಗುವುದು.

ಜಂಬಿಯಾ, ಟಿಮೋರ್​ಗೆ ಐಸಿಸಿ ಸದಸ್ಯತ್ವ

ಎರಡು ದೇಶಗಳನ್ನು ಐಸಿಸಿ ಸದಸ್ಯರಾಗಿ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಈ ಹಿಂದೆ ಸದಸ್ಯತ್ವ ಹೊಂದಿದ್ದರೂ 2019ರಲ್ಲಿ ಅಮಾನತುಗೊಂಡಿದ್ದ ಜಂಬಿಯಾ ಮತ್ತು ಕೇವಲ 13.8 ಲಕ್ಷ ಜನಸಂಖ್ಯೆ ಹೊಂದಿರುವ ಈಸ್ಟ್​ ಟಿಮೋರ್​ ದೇಶಕ್ಕೆ ಐಸಿಸಿ ಸದಸ್ಯತ್ವ ನೀಡಲಾಗಿದೆ. ಇದರಿಂದ ಐಸಿಸಿ ಸದಸ್ಯ ದೇಶಗಳ ಸಂಖ್ಯೆ 108ರಿಂದ 110ಕ್ಕೆ ಏರಿಕೆಯಾಗಲಿದೆ. ಜಂಬಿಯಾ ಐಸಿಸಿ ಸದಸ್ಯತ್ವ ಪಡೆದ 22ನೇ ಆಫ್ರಿಕನ್​ ದೇಶವಾಗಿದೆ. ಈಸ್ಟ್​ ಟಿಮೋರ್​ ಪೂರ್ವ ಏಷ್ಯಾ ಪೆಸಿಫಿಕ್​ನ 10ನೇ ದೇಶವಾಗಿ ಐಸಿಸಿ ಸದಸ್ಯತ್ವ ಪಡೆದಿದೆ.

ಮುಂದಿನ 9 ಐಸಿಸಿ ಟೂರ್ನಿಗಳ ಆತಿಥೇಯರು

2026ರ ಟಿ20 ವಿಶ್ವಕಪ್​: ಭಾರತ, ಶ್ರೀಲಂಕಾ

2027ರ ಡಬ್ಲ್ಯುಟಿಸಿ ಫೈನಲ್​​: ಇಂಗ್ಲೆಂಡ್​

2027ರ ಏಕದಿನ ವಿಶ್ವಕಪ್​: ದ. ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ.

2028ರ ಟಿ20 ವಿಶ್ವಕಪ್​: ಆಸ್ಟ್ರೆಲಿಯಾ, ನ್ಯೂಜಿಲೆಂಡ್​

2029ರ ಡಬ್ಲ್ಯುಟಿಸಿ ಫೈನಲ್​​: ಇಂಗ್ಲೆಂಡ್​

2029ರ ಚಾಂಪಿಯನ್ಸ್​ ಟ್ರೋಫಿ: ಭಾರತ

2030ರ ಟಿ20 ವಿಶ್ವಕಪ್​: ಇಂಗ್ಲೆಂಡ್​, ಐರ್ಲೆಂಡ್​, ಸ್ಕಾಟ್ಲೆಂಡ್​

2031ರ ಡಬ್ಲ್ಯುಟಿಸಿ ಫೈನಲ್​​: ಇಂಗ್ಲೆಂಡ್​

2031ರ ಏಕದಿನ ವಿಶ್ವಕಪ್​: ಭಾರತ, ಬಾಂಗ್ಲಾದೇಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net