

ಬೆಂಗಳೂರು: ಉದ್ಯಾನನಗರಿಯ ಹೊರವಲಯದಲ್ಲಿ ಸುಮಾರು 45 ಎಕರೆ ಜಾಗದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 28ರಂದು ನಡೆಯಲಿದೆ. ಸೆಪ್ಟೆಂಬರ್ 29ಕ್ಕೆ ಬೆಂಗಳೂರಿನಲ್ಲಿ ಬಿಸಿಸಿಐನ ವಾರ್ಷಿಕ ಮಹಾಸಭೆ ನಿಗದಿಯಾಗಿದ್ದು, ಅದಕ್ಕೆ ಒಂದು ದಿನ ಮುನ್ನ ಎನ್ಸಿಎ ಲೋಕಾರ್ಪಣೆಯಾಗಲಿದೆ. ಈ ಸಂಬಂಧ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಆಹ್ವಾನ ಕಳುಹಿಸಿದ್ದಾರೆ.
ಹೊಸ ಎನ್ಸಿಎಯಲ್ಲಿ 3 ವಿಶ್ವದರ್ಜೆಯ ಮೈದಾನ, 45 ಅಭ್ಯಾಸ ಪಿಚ್ಗಳು, ಒಳಾಂಗಣ ಪಿಚ್ಗಳು, ಒಲಿಂಪಿಕ್ ಸೈಜ್ ಈಜುಕೊಳ, ಅತ್ಯಾಧುನಿಕ ತರಬೇತಿ ಮತ್ತು ಕ್ರೀಡಾ ವಿಜ್ಞಾನ ಕೇಂದ್ರಗಳು ಇರಲಿವೆ. ಹೊಸ ಎನ್ಸಿಎ ಕಾಂಪ್ಲೆಕ್ಸ್ನಲ್ಲಿ 16 ಸಾವಿರ ಚದರ ಅಡಿಯ ಜಿಮ್ ಮತ್ತು 243 ಕೊಠಡಿಗಳು ಇರಲಿವೆ.
ಕ್ರಿಕೆಟಿಗರು ಮಾತ್ರವಲ್ಲದೆ ದೇಶದ ಇತರ ಪ್ರಮುಖ ಕ್ರೀಡಾಪಟುಗಳ ಬಳಕೆಗೂ ಹೊಸ ಎನ್ಸಿಎ ಲಭ್ಯವಿರಲಿದೆ ಎಂದು ಬಿಸಿಸಿಐ ಈಗಾಗಲೆ ತಿಳಿಸಿದೆ.