

ಸಿಂಗಾಪುರ: ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಬರೋಬ್ಬರಿ 12 ವರ್ಷಗಳ ಬಳಿಕ ಮುಂದಿನ ವರ್ಷ ಸೆಪ್ಟೆಂಬರ್ನಲ್ಲಿ ಪುನರಾರಂಭಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಸಿಂಗಾಪುರದಲ್ಲಿ ನಡೆದ ಐಸಿಸಿ ವಾರ್ಷಿಕ ಮಹಾಸಭೆಯಲ್ಲಿ ಟೂರ್ನಿ ಮರು ಆಯೋಜಿಸಲು ಪ್ರಮುಖ ಸದಸ್ಯ ದೇಶಗಳು ಒಲವು ತೋರಿವೆ.
ವಿವಿಧ ದೇಶಗಳ ಫ್ರಾಂಚೈಸಿ ಲೀಗ್ಗಳ ವಿಜೇತ ಮತ್ತು ಕೆಲ ರನ್ನರ್ಅಪ್ ತಂಡಗಳು ಆಡುವ ಟೂರ್ನಿ ಚಾಂಪಿಯನ್ಸ್ ಲೀಗ್ ಆಗಿದ್ದು, 2008ರಲ್ಲಿ ಇದರ ಮೊದಲ ಆವೃತ್ತಿ ನಡೆದಿತ್ತು. ಟೂರ್ನಿಯ 6ನೇ ಹಾಗೂ ಕೊನೇ ಆವೃತ್ತಿ 2014ರಲ್ಲಿ ನಡೆದಿತ್ತು. ನಂತರದಲ್ಲಿ ಪ್ರಾಯೋಜಕರ ಕೊರತೆ ಮತ್ತು ಟಿವಿ ನೇರಪ್ರಸಾರದಲ್ಲಿ ಆರ್ಥಿಕ ನಷ್ಟ ಆಗಿದ್ದರಿಂದ ಟೂರ್ನಿ ಸ್ಥಗಿತಗೊಂಡಿತ್ತು.
ಚಾಂಪಿಯನ್ಸ್ ಲೀಗ್ನಲ್ಲಿ ಈ ಹಿಂದೆ ಕ್ರಿಕೆಟ್ ಆಸ್ಟ್ರೆಲಿಯಾ, ಬಿಸಿಸಿಐ ಮತ್ತು ಕ್ರಿಕೆಟ್ ದಣ ಆಫ್ರಿಕಾ ಪ್ರಮುಖ ಪಾಲುದಾರ ಮತ್ತು ಸಂಟಕ ಆಗಿತ್ತು. ಇತ್ತೀಚೆಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೂ, ಫಿಫಾ ಕ್ಲಬ್ ವಿಶ್ವಕಪ್ನಿಂದ ಸ್ಫೂರ್ತಿ ಪಡೆದು ಚಾಂಪಿಯನ್ಸ್ ಲೀಗ್ ಪುನರಾರಂಭದ ಆಸಕ್ತಿ ತೋರಿತ್ತು. ಇದೀಗ ಫ್ರಾಂಚೈಸಿ ಟಿ20 ಲೀಗ್ ವಿಶ್ವದೆಲ್ಲೆಡೆ ನಡೆಯುತ್ತಿದ್ದು, ಚಾಂಪಿಯನ್ಸ್ ಲೀಗ್ನಲ್ಲಿ ಆಡಲು ಹೆಚ್ಚಿನ ತಂಡಗಳು ಆಸಕ್ತಿ ತೋರಬಹುದು. ವಿಶ್ವದ ಕೆಲ ಪ್ರಮುಖ ಟಿ20 ಆಟಗಾರರು, ವಿವಿಧ ದೇಶಗಳ ಟಿ20 ಲೀಗ್ಗಳಲ್ಲಿ ಆಡುತ್ತಿದ್ದು, 4-5 ತಂಡಗಳ ಸದಸ್ಯರೂ ಆಗಿದ್ದಾರೆ. ಹೀಗಾಗಿ ಅವರು ಚಾಂಪಿಯನ್ಸ್ ಲೀಗ್ನಲ್ಲಿ ಆಡಲು ಯಾವುದಾದರು ಒಂದು ತಂಡವನ್ನು ಆಯ್ದುಕೊಳ್ಳುವ ಆಯ್ಕೆಯನ್ನು ನೀಡಬಹುದು. ಹೊಸ ಚಾಂಪಿಯನ್ಸ್ ಲೀಗ್ನ ಸ್ವರೂಪ ಮತ್ತು ಆದಾಯ ಹಂಚಿಕೆಯ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ವರದಿಯಾಗಿದೆ.
ಟೆಸ್ಟ್ ಕ್ರಿಕೆಟ್ ಭವಿಷ್ಯ ವರ್ಷಾಂತ್ಯದೊಳಗೆ ತೀರ್ಮಾನ
ಟೆಸ್ಟ್ ಕ್ರಿಕೆಟ್ ಅನ್ನು ಎರಡು ಹಂತಗಳಲ್ಲಿ ವಿಭಜಿಸುವ ಬಗ್ಗೆ ನಿರ್ಧರಿಸುವ ಹೊಣೆಯನ್ನು ಐಸಿಸಿ ಈಗಾಗಲೆ ಕಾರ್ಯಪಡೆಗೆ ವಹಿಸಿದ್ದು, ವರ್ಷಾಂತ್ಯದೊಳಗೆ ಈ ಬಗ್ಗೆ ತೀರ್ಮಾನ ಹೊರಬೀಳುವ ನಿರೀೆ ಇದೆ. 2027ರಿಂದ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಈ ಹೊಸ ಸ್ವರೂಪ ಜಾರಿಗೆ ಬರಲಿದೆ. ಎಂಟು ಸದಸ್ಯರ ಕಾರ್ಯಪಡೆ ಹಾಲಿ ವರ್ಷಾಂತ್ಯಕ್ಕೆ ತನ್ನ ಶಿಾರಸುಗಳನ್ನು ಐಸಿಸಿ ಚೇರ್ಮನ್ ಜಯ್ ಷಾಗೆ ಸಲ್ಲಿಸಲಿದೆ ಎನ್ನಲಾಗಿದೆ.
ನೇಪಾಳ, ಅಮೆರಿಕ, ಭೂತಾನ್ಗೆ
ಐಸಿಸಿ ಡೆವಲಪ್ಮೆಂಟ್ ಪ್ರಶಸ್ತಿ
ದಣ ಏಷ್ಯಾದ ದೇಶಗಳಾದ ನೇಪಾಳ, ಭೂತಾನ್ ಜತೆಗೆ ಅಮೆರಿಕ ಸಹಿತ 8 ದೇಶಗಳು ಐಸಿಸಿಯ ಡೆವಲಪ್ಮೆಂಟ್ ಪ್ರಶಸ್ತಿಗೆ ಭಾಜನವಾಗಿವೆ. ಐಸಿಸಿ ವಾರ್ಷಿಕ ಮಹಾಸಭೆಯಲ್ಲಿ ಈ ಗೌರವವನ್ನು ನೀಡಲಾಗಿದೆ. ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿ ಸೂಪರ್&8 ಪ್ರವೇಶಿಸಿದ ಸಾಧನೆಗಾಗಿ ಅಮೆರಿಕಕ್ಕೆ ವರ್ಷದ ಅತ್ಯುತ್ತಮ ನಿರ್ವಹಣೆಯ ಪ್ರಶಸ್ತಿ ನೀಡಲಾಗಿದೆ. ನೇಪಾಳದ ಕ್ರಿಕೆಟ್ ಪ್ರೇಮಿಗಳು ಡಿಜಿಟಲ್ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮತ್ತು ಭೂತಾನ್ನಲ್ಲಿ ಶಾಲಾ ಬಾಲಕಿಯರ ಕ್ರಿಕೆಟ್ ಟೂರ್ನಿ ಆರಂಭಿಸುವ ಮೂಲಕ ಮಹಿಳಾ ಕ್ರಿಕೆಟ್ಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಕ್ಕಾಗಿ ಪ್ರಶಸ್ತಿ ವಿತರಿಸಲಾಗಿದೆ. ಇಂಡೋನೇಷ್ಯಾ, ನಮೀಬಿಯಾ, ಸ್ಕಾಟ್ಲೆಂಡ್, ತಂಜಾನಿಯಾ ಮತ್ತು ವನೌತು ಐಸಿಸಿ ಡೆವಲಪ್ಮೆಂಟ್ ಪ್ರಶಸ್ತಿ ಪಡೆದಿರುವ ಇತರ ದೇಶಗಳಾಗಿವೆ.