

ಶಿವಮೊಗ್ಗ: ಜಿಲ್ಲಾ ಫುಟ್ಬಾಲ್ ಸಂಸ್ಥೆಯು ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಲೀಗ್ ಪಂದ್ಯಾವಳಿಯು ಅಂತಿಮ ಘಟ್ಟ ತಲುಪಿದ್ದು ಜು.2ರಂದು ಸೆಮಿಫೈನಲ್ ಹಾಗೂ 3ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಸಂಸ್ಥೆಯ ವ್ಯವಸ್ಥಾಪನಾ ಸಮಿತಿ ಸದಸ್ಯ ಎಲ್.ವಿಜಯಕುಮಾರ್ ಹೇಳಿದರು.
ಜೂ.24ರಿಂದ ಶಿವಮೊಗ್ಗ ನಗರದ ಎ ವಿಭಾಗದ 9 ಫುಟ್ಬಾಲ್ ಕ್ಲಬ್‌ಗಳು ಲೀಗ್‌ನಲ್ಲಿ ಪಾಲ್ಗೊಂಡಿವೆ. ಇದುವರೆಗೆ ಪಂದ್ಯಾವಳಿ ಯಶಸ್ವಿಯಾಗಿದ್ದು, ಈಗ ಸೆಮಿಫೈನಲ್ಸ್ ಹಂತಕ್ಕೆ ಕಾಲಿಟ್ಟಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 20 ಕ್ಲಬ್ಗಳಿದ್ದು, ಅದರಲ್ಲಿ ಎ ವಿಭಾಗದ 9 ಕ್ಲಬ್‌ಗಳು ಭಾಗಿಯಾಗಿವೆ. ಎಲ್ಲ ಕ್ಲಬ್ಗಳ ಆಟಗಾರರು ಉತ್ತಮ ಆಟ ಪ್ರದರ್ಶಿಸಿರುವುದು ಜಿಲ್ಲೆಯಲ್ಲಿ ಕ್ರೀಡೆ ಬೆಳವಣಿಗೆಗೆ ಆಶಾದಾಯಕವೆನಿಸಿದೆ. ಎ ವಿಭಾಗದಲ್ಲಿ ನೋವಾ ಎಫ್‌ಸಿ, ಪ್ರಮೋದ್ ಎಫ್‌ಸಿ, ದಯಾ ಎಫ್‌ಸಿ, ಶಿವಮೊಗ್ಗ ಯುನೈಟೆಡ್ ಎಫ್‌ಸಿ, ಮಜೆಂಟ್ ಎಫ್‌ಸಿ, ಜೈನ್ ಎಫ್‌ಸಿ, ಮಲ್ನಾಡ್ ಕಿಕರ್ಸ್, ಮೊಹಮೊಡನ್ ಸ್ಪೋರ್ಟಿಂಗ್ ಹಾಗೂ ಜೆಎಂಎಫ್‌ಸಿ ತಂಡಗಳು ಭಾಗಿಯಾಗಿವೆ ಎಂದರು.
ಫೈನಲ್ ಪಂದ್ಯಕ್ಕೆ ಅತಿಥಿಗಳಾಗಿ ಶಾಸಕ ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ್, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಆಗಮಿಸಲಿದ್ದಾರೆ ಎಂದರು. ಸಂಸ್ಥೆ ಜಿಲ್ಲಾಧ್ಯಕ್ಷ ಎಸ್.ಆರ್.ಶ್ರೀನಾಥ್, ಖಜಾಂಚಿ ಸೂಲಯ್ಯ(ಸುರೇಶ್), ಉಪಾಧ್ಯಕ್ಷ ಆರಿಫ್ ಅಹಮದ್ ಅಬಿದ್, ಹಿರಿಯ ಆಟಗಾರ ನಾದನ್, ಕೆ.ಹರ್ಷ ಭೋವಿ ಸುದ್ದಿಗೋಷ್ಠಿಯಲ್ಲಿದ್ದರು.