ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ತಂದ ಗೊಂದಲಗಳು…; ಗಂಭೀರ್​-ಅಗರ್ಕರ್​ ಜೋಡಿಯ ದಿಟ್ಟ ನಡೆಯೇ? ಎಡವಟ್ಟೇ?

web selection
Published on

ಬೆಂಗಳೂರು: ಗೌತಮ್​ ಗಂಭೀರ್​ ಟೀಮ್​ ಇಂಡಿಯಾ ಕೋಚ್​ ಆಗಿ ಹೊಸ ಅಧ್ಯಾಯ ಆರಂಭಿಸಲು ಸಿದ್ಧರಾಗಿದ್ದಾರೆ. ಆದರೆ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಅಜಿತ್​ ಅಗರ್ಕರ್​ ಸಾರಥ್ಯದ ಆಯ್ಕೆ ಸಮಿತಿಯ ಜತೆಗೂಡಿ ಅವರು ಆರಿಸಿರುವ ತಂಡ ಹಲವು ಗೊಂದಲ ಮತ್ತು ಪ್ರಶ್ನೆಗಳನ್ನು ಸೃಷ್ಟಿಸಿವೆ. ಇದು ಗಂಭೀರ್​&ಅಗರ್ಕರ್​ ಜೋಡಿಯ ದಿಟ್ಟ ಹೆಜ್ಜೆಯೇ ಅಥವಾ ಎಡವಟ್ಟೇ ಎಂಬುದಕ್ಕೆ ಭವಿಷ್ಯವೇ ಉತ್ತರ ಮತ್ತು ಸ್ಪಷ್ಟತೆಯನ್ನು ನೀಡಬೇಕಾಗಿದೆ.

ಸೂರ್ಯ ಇನ್ನು ಟಿ20ಗೆ ಸೀಮಿತ?

ಸೂರ್ಯಕುಮಾರ್​ಗೆ ಟಿ20 ತಂಡದ ನಾಯಕತ್ವ ನೀಡಿರುವ ಜತೆಗೆ ಏಕದಿನ ಕ್ರಿಕೆಟ್​ನಿಂದ ಅವರನ್ನು ಕಡೆಗಣಿಸಿರುವ ಸೂಚನೆಯೂ ಕಾಣಿಸಿದೆ. ಟಿ20ಯಲ್ಲಿ ವಿಶ್ವ ನಂ. 1 ಬ್ಯಾಟರ್​ ಎನಿಸಿದ್ದರೂ ಸೂರ್ಯಕುಮಾರ್​ ಏಕದಿನ ಕ್ರಿಕೆಟ್​ನಲ್ಲಿ 37 ಪಂದ್ಯಗಳಲ್ಲಿ ಕೇವಲ 4 ಅರ್ಧಶತಕ ಬಾರಿಸಿದ್ದು, 25.76 ಸರಾಸರಿಯಲ್ಲಿ 773 ರನ್​ ಮಾತ್ರ ಗಳಿಸಿದ್ದಾರೆ. ಹೀಗಾಗಿ ಅವರನ್ನು ಇನ್ನು ಟಿ20 ಕ್ರಿಕೆಟ್​ಗೆ ಸೀಮಿತಗೊಳಿಸುವಂತಿದೆ.

ಜಡೇಜಾ ಏಕದಿನಕ್ಕಿಲ್ಲ?

ಟಿ20 ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ರೋಹಿತ್​, ಕೊಹ್ಲಿ ಜತೆಗೆ ಚುಟುಕು ಕ್ರಿಕೆಟ್​ಗೆ ವಿದಾಯ ಘೋಷಿಸಿದ ಆಲ್ರೌಂಡರ್​ ರವೀಂದ್ರ ಜಡೇಜಾ ಇನ್ನು ಟೆಸ್ಟ್​ಗೆ ಸೀಮಿತವಾಗುವ ಲಕ್ಷಣ ಕಾಣಿಸಿದೆ. ಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗದ ಜಡೇಜಾ, ಮುಂದಿನ ವರ್ಷದ ಚಾಂಪಿಯನ್ಸ್​ ಟ್ರೋಫಿಗೂ ಆಯ್ಕೆಯಾಗುವುದು ಅನುಮಾನವೆನಿಸಿದೆ. 35 ವರ್ಷದ ಜಡೇಜಾ ಸ್ಥಾನ ತುಂಬಲು ಅಕ್ಷರ್​ ಪಟೇಲ್​&ವಾಷಿಂಗ್ಟನ್​ ಸುಂದರ್​ ನಡುವೆ ಪೈಪೋಟಿಯೂ ಶುರುವಾದಂತಿದೆ. ಆದರೆ ಮುಂಬರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಅರ್ಹತೆ ದೃಷ್ಟಿಯಿಂದ ಜಡೇಜಾ ಟೆಸ್ಟ್​ ತಂಡದಲ್ಲಿ ಈಗಲೂ ಪ್ರಮುಖ ಆಟಗಾರರೆನಿಸಿದ್ದಾರೆ.

ಉಪನಾಯಕ ಯಾಕೆ ನಾಯಕನಾಗಲಿಲ್ಲ?

ಭಾರತ ತಂಡ 2011-12ರಲ್ಲಿ ಇಂಗ್ಲೆಂಡ್​-ಆಸೀಸ್​ನಲ್ಲಿ ಟೆಸ್ಟ್​ ಸರಣಿಗಳನ್ನು ಸೋತಾಗ ನಾಯಕ ಧೋನಿ ಹುದ್ದೆ ಉಳಿಸಿಕೊಂಡರೂ, ಉಪನಾಯಕ ಸ್ಥಾನಕ್ಕೆ ಗಂಭೀರ್​ ಬದಲಿಗೆ ಕೊಹ್ಲಿ ಬಂದಿದ್ದರು. ತಂಡದ ವೈಲ್ಯಕ್ಕೆ ಉಪನಾಯಕನನ್ನು ಹೊಣೆ ಮಾಡುತ್ತ ಬಂದಿದ್ದಕ್ಕೆ ಗಂಭೀರ್​ ಆಗಾಗ ಟೀಕಿಸುತ್ತಲೇ ಬಂದಿದ್ದರು. ಈ ನಡುವೆ ಟಿ20 ವಿಶ್ವಕಪ್​ ವಿಜೇತ ತಂಡದ ಉಪನಾಯಕರಾಗಿದ್ದ ಹೊರತಾಗಿಯೂ ಹಾರ್ದಿಕ್​ ಪಾಂಡ್ಯಗೆ ಈಗ ನಾಯಕನ ಸ್ಥಾನ ನೀಡದಿರುವ ಬಗ್ಗೆ ಗಂಭೀರ್​ ಯಾವ ರೀತಿಯ ವಿವರಣೆ ನೀಡುವರು ಎಂಬ ಕುತೂಹಲವಿದೆ. ಲಂಕಾ ಸರಣಿಗೆ ರೋಹಿತ್​ ಗೈರಾದರೆ ಕೆಎಲ್​ ರಾಹುಲ್​ ಹಂಗಾಮಿ ನಾಯಕರಾಗುವರೆಂಬ ಸುದ್ದಿ ಇತ್ತು. ಆದರೆ ಈಗ ಅವರಿಗೆ ಉಪನಾಯಕನ ಸ್ಥಾನವನ್ನೂ ನೀಡದಿರುವುದು ಅಚ್ಚರಿ ಎನಿಸಿದೆ.

ಏಕದಿನ-ಟಿ20 ತಂಡಗಳಿಗೆ ಪ್ರತ್ಯೇಕ ನಾಯಕ ಈಗ ಓಕೇನಾ?

2021ರಲ್ಲಿ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ್ದರು. ಆಗ ಅವರು ಟೆಸ್ಟ್​&ಏಕದಿನ ತಂಡದ ನಾಯಕರಾಗಿ ಮುಂದುವರಿಯಲು ಬಯಸಿದ್ದರು. ಆದರೆ ಟಿ20&ಏಕದಿನ ಕ್ರಿಕೆಟ್​ ತಂಡಗಳಿಗೆ ಪ್ರತ್ಯೇಕ ನಾಯಕನ ಆಯ್ಕೆಯನ್ನು ಬಿಸಿಸಿಐ ವಿರೋಧಿಸಿತು. ಸೀಮಿತ ಓವರ್​ ತಂಡಗಳಿಗೆ ಪ್ರತ್ಯೇಕ ನಾಯಕ ಬೇಡ ಎಂದು, ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದಲೂ ವಜಾಗೊಳಿಸಿತ್ತು. ಆದರೆ ಈಗ ಟಿ20ಗೆ ಸೂರ್ಯ, ಏಕದಿನಕ್ಕೆ ರೋಹಿತ್​ ನಾಯಕರಾಗಿದ್ದಾರೆ. ಹಾಗಾದರೆ 3 ವರ್ಷಗಳಲ್ಲಿ ಬಿಸಿಸಿಐ ನಿಲುವು ಬದಲಾಗಿದ್ದು ಹೇಗೆ ಎಂಬ ಪ್ರಶ್ನೆಯೂ ಎದ್ದಿದೆ.

ಚಾಹಲ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕು ಮುಕ್ತಾಯ?

ಟಿ20 ವಿಶ್ವಕಪ್​ ವಿಜೇತ ತಂಡದಲ್ಲಿದ್ದರೂ, ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಒಂದೂ ಪಂದ್ಯ ಆಡಿರಲಿಲ್ಲ. ಇದೀಗ ಶ್ರೀಲಂಕಾ ಪ್ರವಾಸದ ಟಿ20&ಏಕದಿನ ಎರಡೂ ತಂಡಗಳಿಂದ ಅವರು ಹೊರಬಿದ್ದಿದ್ದಾರೆ. ಹಾಗಾದರೆ, 2023ರ ಆಗಸ್ಟ್​ನಲ್ಲಿ ಭಾರತ ಪರ ಕೊನೆಯದಾಗಿ ಪಂದ್ಯವೊಂದನ್ನು (ಟಿ20) ಆಡಿರುವ 33 ವರ್ಷದ ಚಾಹಲ್​ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕು ಇಲ್ಲಿಗೆ ಕೊನೆಗೊಂಡಿತೇ ಎಂಬ ಪ್ರಶ್ನೆ ಎದ್ದಿದೆ.

ಗಿಲ್​ ಭವಿಷ್ಯದ ನಾಯಕನೇ?

ಕೆಎಲ್​ ರಾಹುಲ್​, ಜಸ್​ಪ್ರೀತ್​ ಬುಮ್ರಾ, ರಿಷಭ್​ ಪಂತ್​, ಹಾರ್ದಿಕ್​ ಪಾಂಡ್ಯ ಕಳೆದ ಕೆಲ ಸಮಯದಿಂದ ಭಾರತ ತಂಡದ ಉಪನಾಯಕರಾಗಿದ್ದರು ಮತ್ತು ಕೆಲ ಸರಣಿಗಳಲ್ಲಿ ಹಂಗಾಮಿ ನಾಯಕರೂ ಆಗಿದ್ದರು. ಆದರೆ ಈಗ ಅವರೆಲ್ಲರನ್ನೂ ಕಡೆಗಣಿಸಿ ಶುಭಮಾನ್​ ಗಿಲ್​ಗೆ ಟಿ20 ಜತೆಗೆ ಏಕದಿನ ತಂಡದಲ್ಲೂ ಉಪನಾಯಕನ ಸ್ಥಾನ ನೀಡಲಾಗಿದೆ. ಹಾಗಾದರೆ ಬಿಸಿಸಿಐ ಅವರನ್ನು ಭವಿಷ್ಯದ ನಾಯಕರಾಗಿ ಬೆಳೆಸುವುದೇ ಎಂಬ ಕುತೂಹಲ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net