

ನವದೆಹಲಿ: ಭಾರತ ತಂಡದ ಮಾಜಿ ಸುನೀಲ್ ಗಾವಸ್ಕರ್, ಕ್ರಿಕೆಟ್ ಆಟದಿಂದ ದೂರ ಉಳಿದರೂ ಅದರ ನಂಟಿನಿಂದ ಮಾತ್ರ ಹೊರಬಂದಿಲ್ಲ. ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 33 ವರ್ಷಗಳೆ ಕಳೆದರೂ ವೀಕ್ಷಕ ವಿವರಣೆಗಾರರಾಗಿ ದಿಗ್ಗಜ ಆಟಗಾರ ಮನೆ ಮಾತಾಗಿದ್ದಾರೆ. ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಕಳೆದ ಎರಡು ದಶಕಗಳಿಂದ ಸುನೀಲ್ ಗಾವಸ್ಕರ್ ‘ದ ಚಾಂಪ್ಸ್’ ಹೆಸರಿನಲ್ಲಿ ಫೌಂಡೇಷನ್ ನಡೆಸುತ್ತಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಾಜಿ ಹಾಕಿ ಆಟಗಾರ 58 ವರ್ಷದ ಮಹಿಂದರ್ ಪಾಲ್ ಸಿಂಗ್ ನೆರವಿಗೆ ಧಾವಿಸಿದ್ದಾರೆ. ಸಿಂಗ್ ಅವರಿಗೆ ಇತ್ತೀಚೆಗಷ್ಟೇ ಕ್ರೀಡಾ ಸಚಿವಾಲಯದಿಂದ ಹಣಕಾಸಿನ ನೆರವು ನೀಡಲಾಗಿತ್ತು.
ಒಲಿಂಪಿಯನ್ ಹಾಗೂ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಜಯಿಸಿದ್ದ ಎಂಪಿ ಸಿಂಗ್ ಸಂಕಷ್ಟದಲ್ಲಿರುವುದನ್ನು ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೆ, ಬಳಿಕ ಮಾಹಿತಿ ಕಲೆಹಾಕಿ ನೆರವು ನೀಡಲು ನಿರ್ಧರಿಸಲಾಯಿತು. ವಿಶೇಷವಾಗಿ ಮುದ್ರಣ ಮಾಧ್ಯಮಕ್ಕೆ ಧನ್ಯವಾದಗಳು ಎಂದು ಗಾವಸ್ಕರ್ ಹೇಳಿದ್ದಾರೆ. ಎಂಪಿ ಸಿಂಗ್ 1988ರ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಭಾಗವಾಗಿದ್ದರು. ಮೊಹಮದ್ ಶಾಹಿದ್, ಎಂಎಂ ಸೊಮಯಾ, ಜೂಡ್ ಫೆಲಿಕ್ಸ್, ಪರ್ಗತ್ ಸಿಂಗ್ ಜತೆಗೂಡಿ ಆಡಿದ್ದರು.
ದ ಚಾಂಪ್ಸ್ ಫೌಂಡೇಷನ್ ಅನ್ನು (ಕೇರಿಂಗ್, ಹೆಲ್ಪಿಂಗ್, ಅಸ್ಸಿಸ್ಟಿಂಗ್, ಮೋಟಿವೇಟಿಂಗ್, ಪ್ರೊಮೊಟಿಂಗ್ ಸ್ಪೋಟ್ಸ್‌ಪರ್ಸನ್ಸ್) 1999ರಲ್ಲಿ ಆರಂಭಿಸಲಾಯಿತು. ಗಾವಸ್ಕರ್ ಭಾವ ಮಾಜಿ ಕ್ರಿಕೆಟಿಗ ಕರ್ನಾಟಕದ ಜಿಆರ್ ವಿಶ್ವನಾಥ್ ಇದರ ಟ್ರಸ್ಟಿಯಾಗಿದ್ದಾರೆ. ಚಾಂಪ್ಸ್ ವತಿಯಿಂದ ಇದುವರೆಗೂ 21 ಕ್ರೀಡಾಪಟುಗಳಿಗೆ ಸಹಾಯ ಮಾಡಲಾಗಿದೆ ಎಂದು ಗಾವಸ್ಕರ್ ಹೇಳಿದ್ದಾರೆ.