ಆರ್​ಸಿಬಿ ಖರೀದಿಗೆ 6 ಕಂಪನಿಗಳ ಪೈಪೋಟಿ! ರೇಸ್​ನಲ್ಲಿ ಜೆಎಸ್​ಡಬ್ಲ್ಯು, ಅದಾನಿ ಗ್ರೂಪ್​

web rcb sale
Published on

ನವದೆಹಲಿ: ಕೊನೆಗೂ 18 ವರ್ಷಗಳ ಬಳಿಕ ಐಪಿಎಲ್​ ಟ್ರೋಫಿ ಗೆಲುವಿನ ಕನಸು ನನಸಾಗಿಸಿಕೊಂಡ ಆರ್​ಸಿಬಿ ತಂಡವನ್ನು ಮಾರಾಟಕ್ಕೆ ಇಡಲಾಗಿರುವುದು ಈಗಾಗಲೆ ಸುದ್ದಿಯಾಗಿದೆ. ಐಪಿಎಲ್​ನಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ತಂಡದ ಖರೀದಿಗೆ 6 ಕಂಪನಿಗಳು ಪೈಪೋಟಿಯಲ್ಲಿವೆ ಎಂಬ ಅಂಶವೂ ಇದೀಗ ಬೆಳಕಿಗೆ ಬಂದಿದೆ.

ಆರ್​ಸಿಬಿ ಫ್ರಾಂಚೈಸಿಯ ಒಡೆತನ ಹೊಂದಿರುವ ಮಾತೃ ಸಂಸ್ಥೆಯಾದ "ಡಿಯಾಜಿಯೋ ಗ್ರೇಟ್​ ಬ್ರಿಟನ್​' ಜತೆಗೆ ಸದ್ಯ 6 ಆಸಕ್ತರು ಮಾತುಕತೆ ನಡೆಸುತ್ತಿದ್ದಾರೆ. ಮಾರಾಟ ಪ್ರಕ್ರಿಯೆಯ ಬಗ್ಗೆ ಮುಂದಿನ ವಾರದ ವೇಳೆ ಹೆಚ್ಚಿನ ಸ್ಪಷ್ಟತೆ ಸಿಗಬಹುದು ಎಂದು ವರದಿಯಾಗಿದೆ.

ಉದ್ಯಮಿ ಅದರ್​ ಪೂನಾವಾಲ ಅವರ ಸೆರಮ್​ ಇನ್​ಸ್ಟಿಟ್ಯೂಟ್​ ಈಗಾಗಲೆ ಆರ್​ಸಿಬಿ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿತ್ತು. ಇದೀಗ ಜೆಎಸ್​ಡಬ್ಲ್ಯು ಗ್ರೂಪ್​ ಮತ್ತು ಅದಾನಿ ಗ್ರೂಪ್​, ದೆಹಲಿಯ ಜನಪ್ರಿಯ ಉದ್ಯಮಿಯೊಬ್ಬರು ಮತ್ತು ಅಮೆರಿಕ ಮೂಲದ 2 ಕಂಪನಿಗಳೂ ರೇಸ್​ನಲ್ಲಿರುವುದು ಬಹಿರಂಗಗೊಂಡಿದೆ.

ಅದರ್​ ಪೂನವಾಲ ಅವರ ತಂದೆ ಸೈರಸ್​ 2010ರಲ್ಲೇ ಐಪಿಎಲ್​ ತಂಡದ ಖರೀದಿಗಾಗಿ ಟೆಂಡರ್​ ದಾಖಲೆಪತ್ರಗಳನ್ನು ಖರೀದಿಸಿದ್ದರು. ಆದರೆ ಆಗ ಪುಣೆ, ಕೊಚ್ಚಿ ತಂಡಗಳು ಅವರಿಗೆ ಒಲಿದಿರಲಿಲ್ಲ. ಇದೀಗ ಆರ್​ಸಿಬಿ ಮೂಲಕ ಐಪಿಎಲ್​ ತಂಡದ ಒಡೆತನದ ಕನಸನ್ನು ನನಸು ಮಾಡಲು ಅವರ ಪುತ್ರ ಮುಂದಾಗಿದ್ದಾರೆ.

ಇನ್ನು ಜೆಎಸ್​ಡಬ್ಲ್ಯು ಗ್ರೂಪ್​ ಮಾಲೀಕ ಪಾರ್ಥ ಜಿಂದಾಲ್​ ಈಗಾಗಲೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಶೇ. 50 ಷೇರು ಹೊಂದಿದ್ದಾರೆ. ಇದೀಗ ಆರ್​ಸಿಬಿ ಮೂಲಕ ಐಪಿಎಲ್​ ತಂಡದ ಪೂರ್ಣ ಒಡೆತನ ಪಡೆಯಲು ಮುಂದಾಗಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾದರೆ, ಡೆಲ್ಲಿ ತಂಡದ ಷೇರನ್ನು ಮಾರಾಟ ಮಾಡಬೇಕಾಗುತ್ತದೆ. ಯಾಕೆಂದರೆ ಐಪಿಎಲ್​ ನಿಯಮಾವಳಿ ಪ್ರಕಾರ, ಏಕಕಾಲದಲ್ಲಿ 2 ತಂಡಗಳ ಒಡೆತನ ಹೊಂದುವಂತಿಲ್ಲ.

ಅದಾನಿ ಗ್ರೂಪ್​ 2022ರಲ್ಲೇ ಐಪಿಎಲ್​ ತಂಡವನ್ನು ಖರೀದಿಸಲು ಮುಂದಾಗಿತ್ತು ಮತ್ತು ಅಹಮದಾಬಾದ್​ ತಂಡದ ಒಡೆತನ ಸ್ವಲ್ಪದರಲ್ಲೇ ತಪ್ಪಿತ್ತು. ಇದೀಗ ಆರ್​ಸಿಬಿ ಮೂಲಕ ಉದ್ಯಮಿ ಗೌತಮ್​ ಅದಾನಿ ಅವರು ಐಪಿಎಲ್​ ತಂಡದ ಒಡೆಯರಾಗಲು ಮತ್ತೊಮ್ಮೆ ಪ್ರಯತ್ನಿಸುತ್ತಿದ್ದಾರೆ.

2 ಬಿಲಿಯನ್​ ಡಾಲರ್​ ಮೌಲ್ಯ!

ಆರ್​ಸಿಬಿ ತಂಡದ ಮೂಲಬೆಲೆ ಎರಡು ಶತಕೋಟಿ ಡಾಲರ್​ (17,598 ಕೋಟಿ ರೂ.) ಎಂದು ಡಿಯಾಜಿಯೋ ಕಂಪನಿ, ಮಾರಾಟ ಮೌಲ್ಯ ನಿಗದಿಪಡಿಸಿದೆ. ಆದರೆ ತಂಡದ ಖರೀದಿಗೆ ಮುಂದಾಗಿರುವವರು ಈ ಮೌಲ್ಯದ ಬಗ್ಗೆ ಅನುಮಾನ ಹೊಂದಿದ್ದಾರೆ ಮತ್ತು ಇಷ್ಟು ಮೊತ್ತ ನೀಡಬಹುದೇ ಎಂಬ ಬಗ್ಗೆ ಪ್ರಶ್ನೆಯೂ ಎದ್ದಿದೆ. ಜಿಯೋ&ಸ್ಟಾರ್​ ಒಂದಾದ ಬಳಿಕ ಐಪಿಎಲ್​ ಟೂರ್ನಿಯ ಪ್ರಸಾರ ಹಕ್ಕಿನ ಮೌಲ್ಯ ಕುಸಿಯುವ ಸಾಧ್ಯತೆ ಕಾಣಿಸಿದೆ. ಆನ್​ಲೈನ್​ ಗೇಮಿಂಗ್​ ಆ್ಯಪ್​ಗಳ ನಿಷೇಧವೂ ಐಪಿಎಲ್​ಗೆ ಪ್ರಾಯೋಜಕರ ಪೈಪೋಟಿ ಕುಗ್ಗಿಸಲಿದೆ. ಹೀಗಾಗಿ ಆರ್​ಸಿಬಿ ಅಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಬಹುದೇ ಎಂಬ ಬಗ್ಗೆ ಅನುಮಾನ ಹೆಚ್ಚಿದೆ. ಅಲ್ಲದೆ ಕಾಲ್ತುಳಿತ ದುರಂತದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್​ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ, ಆರ್​ಸಿಬಿಯ ತವರು ಮೈದಾನದ ಬಗ್ಗೆಯೂ ಗೊಂದಲವಿದೆ.

ಮಾರಾಟಕ್ಕೂ ಹಿಂದೇಟು?

ಬ್ರಿಟಿಷ್​ ಮದ್ಯದ ಕಂಪನಿ ಡಿಯಾಜಿಯೋ, ಆರ್​ಸಿಬಿ ಫ್ರಾಂಚೈಸಿಯ ಒಡೆತನ ಹೊಂದಿರುವ ಮಾತೃಸಂಸ್ಥೆಯಾಗಿದೆ. ಅದರ ಮೂಲ ಉದ್ಯಮ ಸ್ಪಿರಿಟ್​ ಮಾರಾಟವಾಗಿದ್ದು, ಐಪಿಎಲ್​ ತಂಡದ ಒಡೆಯರಾಗಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ. ಆದರೆ, ಭಾರತದಲ್ಲಿ ಕಾರ್ಯನಿರ್ವಹಿಸುವ ಅದರ ಅಂಗಸಂಸ್ಥೆಯಾಗಿರುವ "ಡಿಯಾಜಿಯೋ ಇಂಡಿಯಾ'ಗೆ ಆರ್​ಸಿಬಿ ತಂಡವನ್ನು ಮಾರಾಟ ಮಾಡಲು ಮನಸ್ಸಿಲ್ಲ. ಹೀಗಾಗಿ ಅದರ ಅಧಿಕಾರಿಗಳು ಇತ್ತೀಚೆಗೆ ಬ್ರಿಟನ್​ಗೆ ತೆರಳಿ, ಆರ್​ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡದಂತೆ ಮಾತೃಸಂಸ್ಥೆಯ ಅಧಿಕಾರಿಗಳ ಮನವೊಲಿಸುವ ಪ್ರಯತ್ನವನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿಯ ಮಾರಾಟ ಯೋಜನೆಯನ್ನೇ ಕೊನೇಕ್ಷಣದಲ್ಲಿ ಕೈಬಿಟ್ಟರೂ ಅಚ್ಚರಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net