

ಕೋಲ್ಕತ: ತವರಿನ ಏಕದಿನ ವಿಶ್ವಕಪ್ನಲ್ಲಿ ಸತತ 7 ಗೆಲುವಿನೊಂದಿಗೆ ಅಜೇಯವಾಗಿ ಮುನ್ನುಗ್ಗುತ್ತಿರುವ ಭಾರತ ತಂಡ ಈಡನ್ ಗಾರ್ಡನ್ಸ್ನಲ್ಲಿ ಭಾನುವಾರ ನಡೆಯಲಿರುವ ತನ್ನ 8ನೇ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಬಲಿಷ್ಠ ನಿರ್ವಹಣೆಯನ್ನೇ ತೋರುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಈ ಕಾದಾಟ, ಟೂರ್ನಿಯಲ್ಲಿ ಭಾರತಕ್ಕೆ ಇದುವರೆಗಿನ ಸವಾಲಿನ ಪಂದ್ಯವೆನಿಸುವ ಸಾಧ್ಯತೆ ಇದೆ. ಹರಿಣಗಳ ವಿರುದ್ಧವೂ ಗೆದ್ದು ಅಜೇಯವಾಗಿಯೇ ಪ್ರಶಸ್ತಿಯತ್ತ ಧಾವಿಸುವುದು ಭಾರತದ ತವಕವಾಗಿದೆ.
ಭಾರತಕ್ಕೆ ಈ ಪಂದ್ಯ ಅಜೇಯ ಪಟ್ಟವನ್ನು ಉಳಿಸಿಕೊಳ್ಳಲು ಮತ್ತು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲೂ ನಿರ್ಣಾಯಕವೆನಿಸಿದೆ. ಭಾರತ ಕೊನೇ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಆಡಲಿದೆ. ಹೀಗಾಗಿ ಆಫ್ರಿಕಾ ವಿರುದ್ಧ ಗೆದ್ದರೆ ಭಾರತಕ್ಕೆ ನಂತರ ಸೆಮೀಸ್ ಹಾದಿಯಲ್ಲಿ ಅಜೇಯ ಪಟ್ಟಕ್ಕೆ ಹೆಚ್ಚಿನ ಸವಾಲು ಎದುರಾಗುವ ಸಾಧ್ಯತೆಗಳಿಲ್ಲ. ಇನ್ನು ಟೆಂಬಾ ಬವುಮಾ ಪಡೆ ಸದ್ಯ ಭಾರತಕ್ಕಿಂತ ಉತ್ತಮ ರನ್ರೇಟ್ ಹೊಂದಿದೆ. ಹೀಗಾಗಿ ಈ ಪಂದ್ಯ ಸೋತರೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನೂ ಬಿಟ್ಟುಕೊಡಬೇಕಾಗುತ್ತದೆ ಮತ್ತು ಲೀಗ್ ಅಭಿಯಾನ ಮುಗಿಸುವ ಮುನ್ನ ಅಗ್ರಸ್ಥಾನವನ್ನು ಮರಳಿ ಪಡೆಯುವ ಖಚಿತತೆ ಇರುವುದಿಲ್ಲ.
2011ರಲ್ಲಿ ಆಫ್ರಿಕಾ ಕಾಡಿತ್ತು
ಭಾರತ ತಂಡ 2011ರಲ್ಲಿ ತವರಿನಲ್ಲೇ ಕೊನೆಯದಾಗಿ ಮತ್ತು ಒಟ್ಟಾರೆ 2ನೇ ಬಾರಿ ವಿಶ್ವಕಪ್ ಎತ್ತಿ ಹಿಡಿದಾಗ ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ ಸೋಲು ಕಂಡಿತ್ತು. ನಾಗ್ಪುರದಲ್ಲಿ ನಡೆದ ಆ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಶತಕದ ಬಲದಿಂದ ಭಾರತ 296 ರನ್ ಪೇರಿಸಿತ್ತು. ಆದರೆ ಕೊನೇ ಓವರ್ನಲ್ಲಿ 13 ರನ್ ಬೇಕಿದ್ದಾಗ ಆಶಿಸ್ ನೆಹ್ರಾರ 4 ಎಸೆತಗಳಲ್ಲೇ 14 ರನ್ ಕಸಿದು ರಾಬಿನ್ ಪೀಟರ್ಸನ್ ಹರಿಣಗಳನ್ನು ಗೆಲ್ಲಿಸಿದ್ದರು. ನಂತರ 2015 ಮತ್ತು 2019ರ ವಿಶ್ವಕಪ್ ಮುಖಾಮುಖಿಗಳಲ್ಲಿ ಭಾರತವೇ ಗೆದ್ದಿತ್ತು.
ಟೀಮ್ ನ್ಯೂಸ್:
ಭಾರತ: ಹಾರ್ದಿಕ್ ಪಾಂಡ್ಯ ವಿಶ್ವಕಪ್ನಿಂದ ಹೊರಬಿದ್ದಿರುವ ಕಾರಣ ಭಾರತ ತಂಡ ಹಾಲಿ ಕಾಂಬಿನೇಷನ್ ಉಳಿಸಿಕೊಳ್ಳಲಿದೆ. ಹಾರ್ದಿಕ್ ಹೊರಬಿದ್ದಾಗ ಒಳಬಂದ ಶಮಿ-ಸೂರ್ಯ ಯಶಸ್ಸು ಕಂಡಿದ್ದರೂ, ಭಾರತದ 6ನೇ ಬೌಲರ್ ಕೊರತೆ ಮುಂದುವರಿಯಲಿದೆ. ಎದುರಾಳಿ ತಂಡ ಇದರ ಲಾಭವೆತ್ತಲು ಪ್ರಯತ್ನಿಸದಿರುವ ಮತ್ತು ಬೌಲರ್ಗೆ ಗಾಯದ ಸಮಸ್ಯೆ ಕಾಡದಿರುವವರೆಗೆ ಇದುವೇ ಸೂಕ್ತ ತಂಡ ಸಂಯೋಜನೆ ಎನಿಸಿದೆ.
ದಕ್ಷಿಣ ಆಫ್ರಿಕಾ: ಭಾರತದಂತೆ ದಕ್ಷಿಣ ಆಫ್ರಿಕಾ ಕೂಡ ಟೂರ್ನಿಯುದ್ದಕ್ಕೂ ಆಡುವ 11ರ ಬಳಗದಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಿಲ್ಲ. ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ತಬರೇಜ್ ಶಮ್ಸಿಯನ್ನು ಆಡಿಸಿ ಉಳಿದ ಪಂದ್ಯಗಳಲ್ಲಿ ಓರ್ವ ವೇಗಿಗೆ ವಿಶ್ರಾಂತಿ ನೀಡಿದೆ. ಈ ಬಾರಿ ಕಳೆದ ಪಂದ್ಯದ ಕಾಂಬಿನೇಷನ್ ಉಳಿಸಿಕೊಳ್ಳುವ ನಿರೀೆ ಇದೆ.
ಇಂಡಿಯನ್ ಬೌಲಿಂಗ್ V/s ಆಫ್ರಿಕನ್ ಬ್ಯಾಟಿಂಗ್
ಭಾರತ ತಂಡ ಇದುವರೆಗೆ ಯಾವ ತಂಡಕ್ಕೂ 280ರ ಗಡಿ ದಾಟಲು ಬಿಟ್ಟಿಲ್ಲ. ಅತ್ತ ದಕ್ಷಿಣ ಆಫ್ರಿಕಾ 7ರಲ್ಲಿ 5 ಪಂದ್ಯಗಳಲ್ಲಿ 300 ಪ್ಲಸ್, ಅದರಲ್ಲೂ 4ರಲ್ಲಿ 350 ಪ್ಲಸ್ ಮೊತ್ತ ಪೇರಿಸಿದೆ. ಹೀಗಾಗಿ ಭಾರತದ ಬಲಿಷ್ಠ ಬೌಲಿಂಗ್ ವಿಭಾಗ ಮತ್ತು ಹರಿಣಗಳ ಸ್ಫೋಟಕ ಬ್ಯಾಟಿಂಗ್ ವಿಭಾಗದ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ. ಮೊಹಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮದ್ ಸಿರಾಜ್, ರವೀಂದ್ರ ಜಡೇಜಾ ಭರ್ಜರಿ ಫಾರ್ಮ್ನಲ್ಲಿದ್ದರೆ, ಅತ್ತ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್, ವಾನ್ ಡರ್ ಡುಸೆನ್, ಹೆನ್ರಿಕ್ ಕ್ಲಾಸೆನ್, ಏಡನ್ ಮಾರ್ಕ್ರಮ್ ರನ್ಮಳೆ ಹರಿಸುತ್ತಿದ್ದಾರೆ. ವಿಶ್ವಕಪ್ನಲ್ಲಿ ಆಫ್ರಿಕಾ ಪರ ಇದುವರೆಗೆ 8 ಶತಕ ದಾಖಲಾಗಿದೆ. ಆದರೆ, ಮೊದಲು ಬ್ಯಾಟಿಂಗ್ ಮಾಡಿದಾಗ ಆರ್ಭಟಿಸುವ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವಿಭಾಗ, ಚೇಸಿಂಗ್ನಲ್ಲಿ ಮುಗ್ಗರಿಸುವ ಚಾಳಿ ಹೊಂದಿದೆ. ಇಬ್ಬನಿ ಸಮಸ್ಯೆಯಿಂದಾಗಿ ಈಡನ್ನಲ್ಲಿ ಚೇಸಿಂಗ್ ಸುಲಭವಾಗಬಹುದು. ಹೀಗಾಗಿ ಉಭಯ ತಂಡಗಳಿಗೂ ಟಾಸ್ ಗೆದ್ದರೆ ಏನನ್ನು ಆಯ್ದುಕೊಳ್ಳುವುದು ಎಂಬ ಗೊಂದಲ ಎದುರಾಗಬಹುದು.
ಏಕದಿನ ಮುಖಾಮುಖಿ: 90
ಭಾರತ: 37, ದಣ ಆಫ್ರಿಕಾ: 50, ರದ್ದು: 3
ವಿಶ್ವಕಪ್ ಮುಖಾಮುಖಿ: 5
ಭಾರತ: 2, ದಣ ಆಫ್ರಿಕಾ: 3
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಶಮಿ ಶೈನಿಂಗ್
ಹಾರ್ದಿಕ್ ಪಾಂಡ್ಯ ಗಾಯಕ್ಕೆ ಎಷ್ಟರ ಮಟ್ಟಿಗೆ ಹೊಡೆತ ನೀಡಿತೋ, ಅದಕ್ಕಿಂತ ಹೆಚ್ಚಾಗಿ ಲಾಭವನ್ನೂ ತಂದಿದೆ. ಯಾಕೆಂದರೆ ಹಾರ್ದಿಕ್ ಗಾಯಗೊಳ್ಳದಿದ್ದರೆ, ವೇಗಿ ಮೊಹಮದ್ ಶಮಿ ಈಗಲೂ 11ರ ಬಳಗದಿಂದ ಹೊರಗುಳಿಯಬೇಕಾಗುತ್ತಿತ್ತು. ಮೂರೇ ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿ ಮಿಂಚಿರುವ ಶಮಿಗೆ ಈಡನ್ ಗಾರ್ಡನ್ಸ್ ತವರು ಮೈದಾನವೂ ಆಗಿದೆ. ಉತ್ತರ ಪ್ರದೇಶ ಮೂಲದವರಾದರೂ, ಶಮಿ ದೇಶೀಯ ಕ್ರಿಕೆಟ್ನಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಾರೆ.