Wimbledon Grand Slam: ಜೋಕೊವಿಕ್‌ಗೆ ದಾಖಲೆಯ ಜಯ, ಪೆಗುಲಾ ಮುನ್ನಡೆ

ಜೋಕೊವಿಕ್‌ಗೆ ದಾಖಲೆಯ ಜಯ, ಪೆಗುಲಾ ಮುನ್ನಡೆ
ಜೋಕೊವಿಕ್‌ಗೆ ದಾಖಲೆಯ ಜಯ, ಪೆಗುಲಾ ಮುನ್ನಡೆ
Published on
ಲಂಡನ್: ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ ಪ್ರತಿಷ್ಠಿತ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸರ್ವಾಧಿಕ ಪಂದ್ಯ ಜಯಿಸಿದ ಆಟಗಾರ ಎಂಬ ದಾಖಲೆ ಬರೆದರು. ಭಾನುವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ 24 ಗ್ರಾಂಡ್ ಸ್ಲಾಂ ವಿಜೇತ ಜೋಕೊವಿಕ್ 7-6, 6-3, 3-6, 6-3 ರಿಂದ ರಷ್ಯಾದ ರೋಮನ್ ಸಫಿಯುಲ್ಹಿನ್‌ರನ್ನ ಮಣಿಸಿ ಈ ಸಾಧನೆ ಮಾಡಿದರು. ಇದರೊಂದಿಗೆ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ 7 ಬಾರಿಯ ಚಾಂಪಿಯನ್ 39 ವರ್ಷ ಜೋಕೊವಿಕ್, ಅತಿ ಹೆಚ್ಚು ಪಂದ್ಯ ಜಯಿಸಿದ ಸ್ವಿಜರ್ಲೆಂಡ್ ದಿಗ್ಗಜ ರೋಜರ್ ಫೆಡರರ್ ದಾಖಲೆ ಮುರಿದರು.
ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಮಹಿಳಾ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ಫೈನಲ್ನಲ್ಲಿ 4ನೇ ಶ್ರೇಯಾಂಕಿತೆ ಜೆಸ್ಸಿಕಾ ಪೆಗುಲಾ 4-6, 6-3, 6-1 ಮೂರು ಸೆಟ್‌ಗಳ ಹೋರಾಟದಲ್ಲಿ ದೇಶ ಬಾಂಧವೆ ಇವಾ ಜೋವಿಕ್ ಎದುರು ಗೆಲುವು ಒಲಿಸಿಕೊಂಡರು. ಇದರೊಂದಿಗೆ ವಿಂಬಲ್ಡನ್‌ನಲ್ಲಿ ಎರಡನೇ ಬಾರಿಗೆ ಎಂಟರಘಟ್ಟಕ್ಕೇರಿದರು. 16ನೇ ಶ್ರೇಯಾಂಕಿತೆ ಇವಾ ಜೋವಿಕ್ ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದರೂ, 2 ಗಂಟೆ 12 ನಿಮಿಷಗಳ ಹೋರಾಟದಲ್ಲಿ ನಂತರ ಎರಡು ಸೆಟ್‌ನಲ್ಲಿ 32 ವರ್ಷದ ಜೆಸ್ಸಿಕಾ ಪೆಗುಲಾ ಲಯಕ್ಕೆ ಮರಳಿದರು.
ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ 7-5, 5-7, 6-3 ರಿಂದ ದೇಶ ಬಾಂಧವೆ ಹಾಗೂ ಮಾಜಿ ಚಾಂಪಿಯನ್ ಬಾರ್ಬೋರಾ ಕ್ರೆಜ್ಸಿಕೋವಾರನ್ನು ಪರಾಭವಗೊಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಸಿಂಗಲ್ಸ್‌ನಲ್ಲಿ ಹೊಸ ತಾರೆ ವಿಂಬಲ್ಡನ್ ಪ್ರಶಸ್ತಿ ಜಯಿಸುವುದು ಖಾತ್ರಿಗೊಂಡಿತು. ಕರೋಲಿನಾ ಮುಚೋವಾ ಮುಂದಿನ ಸುತ್ತಿನಲ್ಲಿ ವಿಶ್ವ ನಂ.1 ಅರಿನಾ ಸಬಲೆಂಕಾ-ನವೊಮಿ ಒಸಾಕಾ ನಡುವಿನ ವಿಜೇತರನ್ನು ಕ್ವಾರ್ಟರ್‌ಫೈನಲ್ ನಲ್ಲಿ ಎದುರಿಸಲಿದ್ದಾರೆ.
ಅನಿಸಿಮೋವಾ ನಿರ್ಗಮನ: ಕಳೆದ ಬಾರಿಯ ಫೈನಲಿಸ್ಟ್ ಅಮೆರಿಕದ ಅಮಂಡಾ ಅನಿಸಿಮೋವಾ ಮೂರನೇ ಸುತ್ತಿನಲ್ಲಿ 6-3, 2-6, 3-6 ರಿಂದ ಅಮೆರಿಕದವರೇ ಆದ ಮ್ಯಾಡೀಸನ್ ಕೀಯ್ಸ ಎದುರು ಪರಾಭವಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net