ಬೆಂಗಳೂರು ಐಟಿಎಫ್​ ಟೂರ್ನಿಯಲ್ಲಿ ಸಾನಿಯಾ ಮಿರ್ಜಾ ಸಾಧನೆ ಸರಿಗಟ್ಟಿದ ವೈಷ್ಣವಿ!

ಬೆಂಗಳೂರು ಐಟಿಎಫ್​ ಟೂರ್ನಿಯಲ್ಲಿ ಸಾನಿಯಾ ಮಿರ್ಜಾ ಸಾಧನೆ ಸರಿಗಟ್ಟಿದ ವೈಷ್ಣವಿ!
ಬೆಂಗಳೂರು ಐಟಿಎಫ್​ ಟೂರ್ನಿಯಲ್ಲಿ ಸಾನಿಯಾ ಮಿರ್ಜಾ ಸಾಧನೆ ಸರಿಗಟ್ಟಿದ ವೈಷ್ಣವಿ!
Published on
ಬೆಂಗಳೂರು: ಉದ್ಯಾನನಗರಿಯಲ್ಲಿ ಕನಸಿನ ಓಟವನ್ನು ಮುಂದುವರಿಸಿರುವ ಭಾರತದ ಯುವ ಆಟಗಾರ್ತಿ ವೈಷ್ಣವಿ ಅಡ್ಕರ್​ (Vaishnavi Adkar) ಅವರು ಕೆಪಿಬಿ ಟ್ರಸ್ಟ್​ ಐಟಿಎಫ್​​ ವುಮೆನ್ಸ್​ ಓಪನ್​ ಡಬ್ಲ್ಯು100 ಬೆಂಗಳೂರು ಟೆನಿಸ್​ ಟೂರ್ನಿಯ (KPB Trust ITF Women’s Open W100 Bengaluru 2026) ಸಿಂಗಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೇರಿದ್ದಾರೆ. ಈ ಮೂಲಕ ಕಳೆದ 17 ವರ್ಷಗಳಲ್ಲಿ ಮೊದಲ ಬಾರಿ ಅಂದರೆ, ಸಾನಿಯಾ ಮಿರ್ಜಾ ಬಳಿಕ ಡಬ್ಲ್ಯು100 ಟೂರ್ನಿಯಲ್ಲಿ ಫೈನಲ್​ಗೇರಿದ ಮೊದಲ ಭಾರತೀಯರೆನಿಸಿದ್ದಾರೆ.

ಟೂರ್ನಿಗೆ ವೈಲ್ಡ್​ಕಾರ್ಡ್​ ಪ್ರವೇಶ ಪಡೆದಿದ್ದ ವಿಶ್ವ ನಂ. 690 ವೈಷ್ಣವಿ, ಫೈನಲ್​ ಹಾದಿಯಲ್ಲಿ ಅಗ್ರ 150ರೊಳಗಿನ ಇಬ್ಬರು ಮತ್ತು ಅಗ್ರ 250ರೊಳಗಿನ ಆಟಗಾರ್ತಿಯನ್ನು ಮಣಿಸಿದ್ದಾರೆ. ಎಸ್​. ಎಂ. ಕೃಷ್ಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ ನಡೆದ ಸೆಮಿಫೈನಲ್​ನಲ್ಲಿ ಪುಣೆಯ 21 ವರ್ಷದ ವೈಷ್ಣವಿ 2ನೇ ಶ್ರೇಯಾಂಕಿತೆ ಥಾಯ್ಲೆಂಡ್​ನ ಲಾನ್​ಲನಾ ತಾರಾರುದೀ ವಿರುದ್ಧ 6-3, 6-3 ನೇರಸೆಟ್​ಗಳಿಂದ ಗೆದ್ದು ಇತಿಹಾಸ ಬರೆದರು. ವಿಶ್ವ ನಂ. 126 ತಾರಾರುದೀ ವಿರುದ್ಧ ವೈಷ್ಣವಿ 66 ನಿಮಿಷಗಳಲ್ಲೇ ಗೆದ್ದರು. 2009ರ ಪಟ್ಟಾಯ ಡಬ್ಲ್ಯುಟಿಎ ಟೂರ್ನಿಯಲ್ಲಿ ಫೈನಲ್​ಗೇರಿದ್ದ ಸಾನಿಯಾ ಮಿರ್ಜಾ (
Sania Mirza) ಈ ಸಾಧನೆ ಮಾಡಿದ ಕೊನೆಯ ಭಾರತೀಯರಾಗಿದ್ದರು.

ವೈಷ್ಣವಿ ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ 3ನೇ ಶ್ರೇಯಾಂಕಿತೆ ಹಾಗೂ ವಿಶ್ವ ನಂ. 124 ಬೆಲ್ಜಿಯಂನ ಹನ್ನೆ ವಂದೆವಿಂಕೆಲ್​ ವಿರುದ್ಧ ಸೆಣಸಲಿದ್ದಾರೆ.
"ನಾನು ನಾಳೆ ಫೈನಲ್​ ಆಡಲಿದ್ದೇನೆ ಎಂಬುದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಲಿತಾಂಶದ ಬಗ್ಗೆ ಚಿಂತಿಸದೆ ಆಡುತ್ತಿದ್ದೇನೆ' ಎಂದು ವೈಷ್ಣವಿ ಗೆಲುವಿನ ಬಳಿಕ ಹೇಳಿದರು.
ರನ್ನರ್​ಅಪ್​ಗೆ ತೃಪ್ತಿಪಟ್ಟ ಅಂಕಿತಾ ರೈನಾ ಜೋಡಿ
ಭಾರತದ ಅನುಭವಿ ಆಟಗಾರ್ತಿ ಅಂಕಿತಾ ರೈನಾ ಮತ್ತು ಇಂಡೋನೇಷ್ಯಾದ ಪ್ರಿಸ್ಕಾ ಮ್ಯಾಡೆಲಿನ್​ ನುಗ್ರೋಹೊ ಜೋಡಿ ಟೂರ್ನಿಯ ಡಬಲ್ಸ್​ ವಿಭಾಗದಲ್ಲಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದೆ. 3ನೇ ಶ್ರೇಯಾಂಕಿತ ಅಂಕಿತಾ ರೈನಾ-ಪ್ರಿಸ್ಕಾ ಜೋಡಿ ಫೈನಲ್​ ಪಂದ್ಯದಲ್ಲಿ ಜಪಾನ್​ನ ಮಿಸಕಿ ಮತ್ಸುಡ ಮತ್ತು ಇರಿ ಶಿಮಿಜು ಜೋಡಿಯ ಎದುರು 4-6, 6-3, 5-10ರಿಂದ ಪರಾಭವಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net