ಆಸ್ಟ್ರೇಲಿಯನ್ ಓಪನ್: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಸುತ್ತಿಗೇರಿದ ಸಬಲೆಂಕಾ, ರೈಬಕಿನಾ
ಆಸ್ಟ್ರೇಲಿಯನ್ ಓಪನ್: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಸುತ್ತಿಗೇರಿದ ಸಬಲೆಂಕಾ, ರೈಬಕಿನಾ
Published on:
Copied
Follow Us
ಮೆಲ್ಬೋರ್ನ್: ವಿಶ್ವ ನಂ. 1 ಬೆಲಾರಸ್ ಬೆಡಗಿ ಅರಿನಾ ಸಬಲೆಂಕಾ (Aryna Sabalenka) ಮತ್ತು 5ನೇ ಶ್ರೇಯಾಂಕಿತೆ ಎಲಿನಾ ರೈಬಕಿನಾ (Elena Rybakina) ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೆಲಿಯನ್ ಓಪನ್ನ (Australian Open) ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೇರಿದ್ದಾರೆ. ಸಬಲೆಂಕಾ ಸತತ 4ನೇ ಬಾರಿ ಈ ಸಾಧನೆ ಮಾಡಿದ್ದರೆ, ಕಜಾಕ್ಸ್ತಾನದ ರೈಬಕಿನಾ 2023ರ ಬಳಿಕ ಮತ್ತೆ ಫೈನಲ್ ಪ್ರವೇಶಿಸಿದ್ದಾರೆ. ಸಬಲೆಂಕಾ 5ನೇ ಮತ್ತು ರೈಬಕಿನಾ 2ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಗಾಗಿ ಶನಿವಾರ ಹೋರಾಡಲಿದ್ದಾರೆ.
ರಾಡ್ ಲೆವರ್ ಅರೇನಾದಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್ನಲ್ಲಿ ಎರಡು ಬಾರಿಯ ಚಾಂಪಿಯನ್ ಸಬಲೆಂಕಾ 6-2, 6-3 ನೇರಸೆಟ್ಗಳಿಂದ 12ನೇ ಶ್ರೇಯಾಂಕಿತೆ ಯೂಕ್ರೇನ್ನ ಎಲಿನಾ ಸ್ವಿಟೋಲಿನಾ ವಿರುದ್ಧ ಗೆಲುವು ಸಾಧಿಸಿದರು. 27 ವರ್ಷದ ಸಬಲೆಂಕಾ ಒಂದು ಗಂಟೆ, 16 ನಿಮಿಷಗಳಲ್ಲೇ ಜಯ ಒಲಿಸಿಕೊಂಡರು.
2022ರ ವಿಂಬಲ್ಡನ್ ಚಾಂಪಿಯನ್ ರೈಬಕಿನಾ ಉಪಾಂತ್ಯದಲ್ಲಿ 6ನೇ ಶ್ರೇಯಾಂಕಿತೆ ಅಮೆರಿಕದ ಜೆಸ್ಸಿಕಾ ಪೆಗುಲಾ ಎದುರು 6-3, 7-6 (9-7) ನೇರಸೆಟ್ಗಳಿಂದ ಗೆಲುವು ಸಾಧಿಸಿದರು. ಮೊದಲ ಸೆಟ್ನಲ್ಲಿ ಬೇಗನೆ ಗೆದ್ದ 26 ವರ್ಷದ ರೈಬಕಿನಾ, 2ನೇ ಸೆಟ್ನಲ್ಲಿ ಟೈಬ್ರೇಕರ್ವರೆಗೆ ನಿಕಟ ಪೈಪೋಟಿ ಎದುರಿಸಿದರು.
ಸಬಲೆಂಕಾ-ರೈಬಕಿನಾ ಈ ಮುನ್ನ 2023ರ ಫೈನಲ್ನಲ್ಲೂ ಮುಖಾಮುಖಿಯಾಗಿದ್ದರು. ಆಗಿನ ಸೋಲಿಗೆ ಈಗ ಸೇಡು ತೀರಿಸಿಕೊಳ್ಳುವ ಅವಕಾಶ ರೈಬಕಿನಾ ಮುಂದಿದೆ. ಈ ಬಾರಿ ಇಬ್ಬರೂ ಆಟಗಾರ್ತಿಯರು ಒಂದೂ ಸೆಟ್ ಸೋಲದೆ ಪ್ರಶಸ್ತಿ ಸುತ್ತಿಗೇರಿದ್ದಾರೆ.
ಒಟ್ಟಾರೆ ಮುಖಾಮುಖಿಯಲ್ಲಿ ಸಬಲೆಂಕಾ 8-6 ಜಯ-ಸೋಲಿನ ಮೇಲುಗೈ ಹೊಂದಿದ್ದರೂ, ಕಳೆದ ವರ್ಷದ ಡಬ್ಲ್ಯುಟಿಎ ಫೈನಲ್ಸ್ನಲ್ಲಿ ನಡೆದ ಕೊನೇ ಮುಖಾಮುಖಿಯಲ್ಲಿ ರೈಬಕಿನಾ ಗೆದ್ದ ವಿಶ್ವಾಸ ಹೊಂದಿದ್ದಾರೆ.