ವಾರದ ಹಿಂದೆ ಹೋಟೆಲ್ ಬಿಲ್ ಕಟ್ಟಲೂ ದುಡ್ಡಿಲ್ಲದ ಆಟಗಾರ್ತಿ ಈಗ ಫ್ರೆಂಚ್ ಓಪನ್ ಫೈನಲ್‌ಗೆ! | Maja Chwalinska

Maja Chwalinska
Maja Chwalinska
Published on
ಪ್ಯಾರಿಸ್: ಕ್ರೀಡಾಲೋಕದಲ್ಲಿ ನಂಬಲಸಾಧ್ಯವಾದ ರೋಚಕ ಕಥೆಗಳು ಆಗಾಗ ಸೃಷ್ಟಿಯಾಗುತ್ತಿರುತ್ತವೆ. ಅದಕ್ಕೆ ಲೇಟೆಸ್ಟ್ ಉದಾಹರಣೆ, ಸದ್ಯ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಪೋಲೆಂಡ್‌ನ 24 ವರ್ಷದ ಟೆನಿಸ್ ಆಟಗಾರ್ತಿ ಮಾಯಾ ಚ್ವಾಲಿನ್ಸ್ಕಾ (Maja Chwalinska).
ಕೇವಲ ಒಂದು ವಾರದ ಹಿಂದೆ ಪ್ಯಾರಿಸ್‌ನ ಹೋಟೆಲ್ ರೂಮ್ ಬಿಲ್ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದ ಈ ಯುವತಿ, ಇಂದು ಸಂಜೆ ನಡೆಯುವ ವಿಶ್ವಪ್ರಸಿದ್ಧ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಹೋಟೆಲ್ ಬಿಲ್ ಕಟ್ಟಲು ಕಷ್ಟವಿತ್ತು!

ಕಳೆದ ವಾರ ಮಾಯಾ ಚ್ವಾಲಿನ್ಸ್ಕಾ ಪ್ಯಾರಿಸ್‌ಗೆ ಬಂದಾಗ ಜಗತ್ತಿನ ಶ್ರೇಯಾಂಕದಲ್ಲಿ (Rank) ಅವರು 114ನೇ ಸ್ಥಾನದಲ್ಲಿದ್ದರು. ಕೈಯಲ್ಲಿ ಯಾವುದೇ ಪ್ರಾಯೋಜಕರು (Sponsors) ಇರಲಿಲ್ಲ, ಯಾವುದೇ ಖಚಿತ ಆದಾಯವೂ ಇರಲಿಲ್ಲ. ಟೂರ್ನಿಯಲ್ಲಿ ಭಾಗವಹಿಸಿ ಗೆದ್ದರೆ ಮಾತ್ರ ಕೊನೆಯಲ್ಲಿ ಬಹುಮಾನದ ಹಣ ಸಿಗುತ್ತದೆ. ಅಲ್ಲಿಯವರೆಗೆ ಹೋಟೆಲ್‌ನಲ್ಲಿ ಇರಲು ಹಣವಿಲ್ಲದಿದ್ದಾಗ, ಪೋಲೆಂಡ್‌ನ ಸ್ಪೋರ್ಟ್ಸ್ ಡ್ರಿಂಕ್ ಕಂಪನಿಯೊಂದು ಸದ್ದಿಲ್ಲದೆ ಇವರ ಹೋಟೆಲ್ ಬಿಲ್ ಪಾವತಿಸಿ ಸಹಾಯ ಮಾಡಿತ್ತು. ಮುಖ್ಯ ಸುತ್ತಿಗೆ (Main Draw) ಪ್ರವೇಶ ಪಡೆಯಲು ಇವರು ಕಠಿಣವಾದ ಮೂರು ಕ್ವಾಲಿಫೈಯಿಂಗ್ ಪಂದ್ಯಗಳನ್ನು ಗೆಲ್ಲಬೇಕಾಗಿತ್ತು.

ಖಿನ್ನತೆ, ಸರ್ಜರಿ ಮೆಟ್ಟಿನಿಂತು ಬಂದ ಚಾಂಪಿಯನ್

ಮಾಯಾ ಅವರ ಇಲ್ಲಿಯವರೆಗಿನ ಜೀವನ ಸುಲಭದ್ದಾಗಿರಲಿಲ್ಲ. ಈ ಟೂರ್ನಿಗೂ ಮುನ್ನ ಅವರು ತಮ್ಮ ಇಡೀ ಕರಿಯರ್‌ನಲ್ಲಿ ಗೆದ್ದಿದ್ದು ಕೇವಲ ಒಂದೇ ಒಂದು ಗ್ರ್ಯಾಂಡ್ ಸ್ಲಾಮ್ ಪಂದ್ಯವನ್ನು ಮಾತ್ರ! 2021ರಲ್ಲಿ ಅವರು ತೀವ್ರವಾದ ಖಿನ್ನತೆಗೆ (Depression) ಒಳಗಾಗಿದ್ದರು. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ ಅವರಿಗೆ ಹಾಸಿಗೆಯಿಂದ ಎದ್ದೇಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಇದರ ಬೆನ್ನಲ್ಲೇ 2022ರಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ (Knee Surgery) ಒಳಗಾದರು. ಆರ್ಥಿಕವಾಗಿ ಬದುಕಿ ಉಳಿಯಲು ಯುರೋಪ್‌ನ ಸಣ್ಣಪುಟ್ಟ ಟೂರ್ನಿಗಳಲ್ಲಿ ಆಡುತ್ತಾ ವರ್ಷಗಟ್ಟಲೆ ಹೋರಾಟ ನಡೆಸಿದ್ದರು.

ಸತತ 9 ಪಂದ್ಯಗಳ ಗೆಲುವಿನ ಇತಿಹಾಸ

ಪ್ಯಾರಿಸ್‌ಗೆ ಬಂದ ನಂತರ ಮಾಯಾ ಅವರ ಅದೃಷ್ಟವೇ ಬದಲಾಯಿತು. ಮೊದಲು ಮೂರು ಕ್ವಾಲಿಫೈಯಿಂಗ್ ಪಂದ್ಯಗಳನ್ನು ಗೆದ್ದ ಅವರು, ನಂತರ ಟೆನಿಸ್ ಜಗತ್ತಿನ ದೈತ್ಯ ಆಟಗಾರ್ತಿಯರಾದ ಝೆಂಗ್ ಕ್ವಿನ್ವೆನ್, ಎಲಿಸ್ ಮೆರ್ಟೆನ್ಸ್, ಮರಿಯಾ ಸಕ್ಕಾರಿ ಮತ್ತು ಡಯಾನಾ ಶ್ನೈಡರ್ ಅವರಂತಹ ಘಟಾನುಘಟಿಗಳನ್ನು ಮಣ್ಣು ಮುಕ್ಕಿಸಿದರು. ಸತತ 9 ಪಂದ್ಯಗಳನ್ನು ಗೆದ್ದಿರುವ ಅವರು, ಇಡೀ ಟೂರ್ನಿಯಲ್ಲಿ ಕಳೆದುಕೊಂಡಿದ್ದು ಕೇವಲ ಒಂದೇ ಒಂದು ಸೆಟ್ ಮಾತ್ರ! ಈ ಮೂಲಕ ಫ್ರೆಂಚ್ ಓಪನ್ ಇತಿಹಾಸದಲ್ಲೇ ಫೈನಲ್ ತಲುಪಿದ ಮೊದಲ "ಕ್ವಾಲಿಫೈಯರ್" ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2021ರ ಯುಎಸ್ ಓಪನ್‌ನಲ್ಲಿ ಎಮ್ಮಾ ರಾಡುಕಾನು ಈ ಸಾಧನೆ ಮಾಡಿ ಚಾಂಪಿಯನ್ ಆಗಿದ್ದರು.

ಕೋಟ್ಯಧಿಪತಿಯಾದ ಆಟಗಾರ್ತಿ!

ಕೇವಲ ಒಂದು ವಾರದ ಹಿಂದೆ ಕಡುಬಡತನದಲ್ಲಿದ್ದ ಮಾಯಾ, ಈಗ ಫೈನಲ್ ತಲುಪುವ ಮೂಲಕ ತಮ್ಮ ಇಡೀ ಜೀವನದ ಒಟ್ಟು ಗಳಿಕೆಗಿಂತ ಹೆಚ್ಚಿನ ಹಣವನ್ನು ಒಂದೇ ಟೂರ್ನಿಯಲ್ಲಿ ಗಳಿಸಿದ್ದಾರೆ. ಇಂದು ನಡೆಯುವ ಫೈನಲ್‌ನಲ್ಲಿ ಅವರು ರನ್ನರ್-ಅಪ್ (ಸೋತರೂ ಸಹ) ಆದರೂ ಅವರಿಗೆ ಬರೋಬ್ಬರಿ 1.6 ಮಿಲಿಯನ್ ಡಾಲರ್ (ಸುಮಾರು 13.3 ಕೋಟಿ ರೂಪಾಯಿ) ಸಿಗಲಿದೆ. ಒಂದು ವೇಳೆ ಗೆದ್ದು ಚಾಂಪಿಯನ್ ಆದರೆ 3.25 ಮಿಲಿಯನ್ ಡಾಲರ್ (ಸುಮಾರು 27 ಕೋಟಿ ರೂಪಾಯಿ) ಮನೆಗೆ ಕೊಂಡೊಯ್ಯಲಿದ್ದಾರೆ. ಸಾಧಿಸಬೇಕೆಂಬ ಹಠವಿದ್ದರೆ ಬಡತನ ಹಾಗೂ ಕಾಯಿಲೆಯನ್ನು ಗೆದ್ದು ಇತಿಹಾಸ ಬರೆಯಬಹುದು ಎಂಬುದಕ್ಕೆ ಮಾಯಾ ಅವರೇ ಸಾಕ್ಷಿ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net