ವಿಂಬಲ್ಡನ್​ ಕಿರೀಟ ಗೆದ್ದ ಲಿಂಡಾ ನೋಸ್ಕೋವಾ; ಜೆಕ್​ ಯುವತಾರೆಗೆ ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ

ವಿಂಬಲ್ಡನ್​ ಕಿರೀಟ ಗೆದ್ದ ಲಿಂಡಾ ನೋಸ್ಕೋವಾ; ಜೆಕ್​ ಯುವತಾರೆಗೆ ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ
ವಿಂಬಲ್ಡನ್​ ಕಿರೀಟ ಗೆದ್ದ ಲಿಂಡಾ ನೋಸ್ಕೋವಾ; ಜೆಕ್​ ಯುವತಾರೆಗೆ ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ
Published on
ಲಂಡನ್​: ಜೆಕ್​ ಗಣರಾಜ್ಯದ 21 ವರ್ಷದ ತಾರೆ ಲಿಂಡಾ ನೋಸ್ಕೋವಾ (Linda Noskova) ಪ್ರತಿಷ್ಠಿತ ವಿಂಬಲ್ಡನ್​ ಗ್ರಾಸ್​ ಕೋರ್ಟ್​ (Wimbledon) ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿಯ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಚಾಂಪಿಯನ್​ ಪಟ್ಟಕ್ಕೇರಿದರು. ಅವರಿಗೆ ಇದು ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಾಗಿದೆ. 2022ರಿಂದ ಗ್ರಾಂಡ್​ ಸ್ಲಾಂ ಆಡುತ್ತಿರುವ ನೋಸ್ಕೋವಾ ಹಿಂದಿನ ಯಾವ ಟೂರ್ನಿಯಲ್ಲೂ ಕ್ವಾರ್ಟರ್​ಫೈನಲ್​ ಹಂತ ದಾಟಿರಲಿಲ್ಲ.

ಆಲ್​ ಇಂಗ್ಲೆಂಡ್​ ಕ್ಲಬ್​ನಲ್ಲಿ ಶನಿವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ 9ನೇ ಶ್ರೇಯಾಂಕಿತೆ ನೋಸ್ಕೋವಾ ದೇಶಬಾಂಧವೆ ಕರೋಲಿನಾ ಮುಚೋವಾ ಎದುರು 6-2, 5-7, 6-3 ಸೆಟ್​ಗಳಿಂದ ಸುಲಭ ಗೆಲುವು ದಾಖಲಿಸಿದರು. 2ನೇ ಸೆಟ್​ನಲ್ಲಿ 5 ಮ್ಯಾಚ್​ ಪಾಯಿಂಟ್​ ಕೈಚೆಲ್ಲಿದ ಮುಚೋವಾ, ಪಂದ್ಯ 3ನೇ ಸೆಟ್​ಗೆ ವಿಸ್ತರಿಸಲ್ಪಟ್ಟ ಬಳಿಕ ಮತ್ತೆ ಪುಟಿದೆದ್ದರು. 21 ವರ್ಷ, 224 ದಿನ ವಯಸ್ಸಿನ ನೋಸ್ಕೋವಾ 2011ರ ಬಳಿಕ ವಿಂಬಲ್ಡನ್​ ಗೆದ್ದ ಅತಿ ಕಿರಿಯ ಆಟಗಾರ್ತಿ ಎನಿಸಿದರು.

10ನೇ ಶ್ರೇಯಾಂಕಿತೆ ಮುಚೋವಾ 2ನೇ ಬಾರಿ ಗ್ರಾಂಡ್​ ಸ್ಲಾಂ ಫೈನಲ್​ನಲ್ಲಿ ಮುಗ್ಗರಿಸಿದರು. ಅವರು ಈ ಮುನ್ನ 2023ರ ಫ್ರೆಂಚ್​ ಓಪನ್​ನಲ್ಲೂ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ವಿಂಬಲ್ಡನ್​ನಲ್ಲಿ ಅವರು ಇದೇ ಮೊದಲ ಬಾರಿ ಕ್ವಾರ್ಟರ್​ಫೈನಲ್​ ಹಂತ ದಾಟಿದ್ದರು. ಪ್ರಶಸ್ತಿ ಗೆಲುವಿನೊಂದಿಗೆ ನೋಸ್ಕೋವಾ 46.11 ಕೋಟಿ ರೂ. ಬಹುಮಾನ ಪಡೆದರು. ರನ್ನರ್​ಅಪ್​ ಮುಚೋವಾ 23.05 ಕೋಟಿ ರೂ. ಗಳಿಸಿದರು.

2009ರ ಬಳಿಕ ವಿಂಬಲ್ಡನ್​ನಲ್ಲಿ ಇದೇ ಮೊದಲ ಬಾರಿಗೆ ಒಂದೇ ದೇಶದ ಆಟಗಾರ್ತಿಯರು ಫೈನಲ್​ನಲ್ಲಿ ಮುಖಾಮುಖಿ ಆದರು. ವಿಂಬಲ್ಡನ್​ನಲ್ಲಿ ಕಳೆದ 10 ವರ್ಷಗಳಿಂದಲೂ ಭಿನ್ನ ಆಟಗಾರ್ತಿಯರೇ ಮಹಿಳಾ ಸಿಂಗಲ್ಸ್​ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 2015-16ರಲ್ಲಿ ಕೊನೆಯದಾಗಿ ಸೆರೇನಾ ವಿಲಿಯಮ್ಸ್​ ಸತತ 2 ಬಾರಿ ಚಾಂಪಿಯನ್​ ಪಟ್ಟವೇರಿದ್ದರು. ಕಳೆದ 4 ವಿಂಬಲ್ಡನ್​ಗಳಲ್ಲಿ 3 ಪ್ರಶಸ್ತಿ ಜೆಕ್​ ಗಣರಾಜ್ಯದ ಆಟಗಾರ್ತಿಯರಿಗೇ ಒಲಿದಂತಾಗಿದೆ. ಜೆಕ್​ನ ಮರ್ಕೆಟ ವೊಂಡ್ರೌಸೋವಾ 2023ರಲ್ಲಿ ಮತ್ತು ಬಾರ್ಬೊರಾ ಕ್ರೆಜ್ಸಿಕೋವಾ 2024ರಲ್ಲಿ ಈ ಸಾಧನೆ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net