Davis Cup: ದಕ್ಷಿಣೇಶ್ವರ್​ಗೆ ಅಮೋಘ ಗೆಲುವು; ಭಾರತ 1-1 ಸಮಬಲ

Davis Cup: ದಕ್ಷಿಣೇಶ್ವರ್​ಗೆ ಅಮೋಘ ಗೆಲುವು; ಭಾರತ 1-1 ಸಮಬಲ
Davis Cup: ದಕ್ಷಿಣೇಶ್ವರ್​ಗೆ ಅಮೋಘ ಗೆಲುವು; ಭಾರತ 1-1 ಸಮಬಲ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭಾರತದ ಯುವ ಆಟಗಾರ ದಕ್ಷಿಣೇಶ್ವರ್​ ಸುರೇಶ್​ (Dhakshineswar Suresh) ಡೇವಿಸ್​ ಕಪ್​ (Davis Cup) ಕ್ವಾಲಿಫೈಯರ್​ ಮೊದಲ ಸುತ್ತಿನಲ್ಲಿ ನೆದರ್ಲೆಂಡ್​ನ ನಂ. 1 ಆಟಗಾರ ಜೆಸ್ಪರ್​ ಡಿ ಜಾಂಗ್​ ಎದುರು ಅಮೋಘ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಆತಿಥೇಯ ಭಾರತ ತಂಡ ತನ್ನ ನಂ. 1 ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ಸೋಲಿನ ನಡುವೆ ಮೊದಲ ದಿನ 1-1 ಸಮಬಲ ಸಾಧಿಸಿದೆ. ಈ ಮುಖಾಮುಖಿಯ 2ನೇ ಹಾಗೂ ಅಂತಿಮ ದಿನವಾದ ಭಾನುವಾರ ಡಬಲ್ಸ್​ ಮತ್ತು 2 ರಿವರ್ಸ್​ ಸಿಂಗಲ್ಸ್​ ಪಂದ್ಯಗಳು ನಡೆಯಲಿವೆ.

ಕಬ್ಬನ್​ ಪಾರ್ಕ್​ನ ಎಸ್​ಎಂ ಕೃಷ್ಣ ಟೆನಿಸ್​ ಸ್ಟೇಡಿಯಂನಲ್ಲಿ ಟೂರ್ನಿಯ ಮೊದಲ ದಿನವಾದ ಶನಿವಾರ ನಡೆದ 2ನೇ ಸಿಂಗಲ್ಸ್​ ಪಂದ್ಯದಲ್ಲಿ ವಿಶ್ವ ನಂ. 465 ದಕ್ಷಿಣೇಶ್ವರ್​ ವಿಶ್ವ ನಂ. 88 ಜೆಸ್ಪರ್​ ಡಿ ಜಾಂಗ್​ಗೆ 6-4, 7-5 ನೇರಸೆಟ್​ಗಳಿಂದ ಆಘಾತಕಾರಿ ಸೋಲುಣಿಸಿದರು. ಈ ಮೂಲಕ ಭಾರತಕ್ಕೆ ಕ್ವಾಲಿಫೈಯರ್​ 2ನೇ ಸುತ್ತಿಗೆ ಪ್ರವೇಶಿಸುವ ಆಸೆ ಹೆಚ್ಚಿಸಿದರು.

6.5 ಅಡಿ ಎತ್ತರದ ದಣೇಶ್ವರ್​ ಅವರ ಬಲಿಷ್ಠ ಸರ್ವ್​ಗಳ ಎದುರು ಜೆಸ್ಪರ್​ ಪರದಾಡಿದರು. ಕಳೆದ ಬಾರಿ ಸ್ವಿರ್ಜಲೆಂಡ್​ ವಿರುದ್ಧದ ಕಾದಾಟದಲ್ಲೂ 25 ವರ್ಷದ ದಕ್ಷಿಣೇಶ್ವರ್​ ತನಗಿಂತ ಉನ್ನತ ಶ್ರೇಯಾಂಕಿತ ವಿರುದ್ಧ ಗೆದ್ದಿದ್ದರು.

ಇದಕ್ಕೆ ಮುನ್ನ ನಡೆದ ಮೊದಲ ಸಿಂಗಲ್ಸ್​ ಪಂದ್ಯದಲ್ಲಿ ವಿಶ್ವ ನಂ. 281 ಸುಮಿತ್​ ನಗಾಲ್​, ವಿಶ್ವ ನಂ. 160 ಗೈ ಡೆನ್​ ಔಡೆನ್​ ಎದುರು 0-6, 6-4, 3-6ರಿಂದ ವೀರೋಚಿತ ಸೋಲು ಅನುಭವಿಸಿದರು. ಇದರಿಂದ ಭಾರತ 0-1 ಆರಂಭಿಕ ಹಿನ್ನಡೆ ಕಂಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net