ವಿಂಬಲ್ಡನ್​ ಫೈನಲ್​ಗೇರಿದ ಸಿನ್ನರ್, ಜ್ವೆರೇವ್; ಮತ್ತೊಮ್ಮೆ ಸೆಮೀಸ್​ನಲ್ಲೇ ಹೊರಬಿದ್ದ ಜೋಕೊವಿಕ್​!

ವಿಂಬಲ್ಡನ್​ ಫೈನಲ್​ಗೇರಿದ ಸಿನ್ನರ್, ಜ್ವೆರೇವ್; ಮತ್ತೊಮ್ಮೆ ಸೆಮೀಸ್​ನಲ್ಲೇ ಹೊರಬಿದ್ದ ಜೋಕೊವಿಕ್​!
ವಿಂಬಲ್ಡನ್​ ಫೈನಲ್​ಗೇರಿದ ಸಿನ್ನರ್, ಜ್ವೆರೇವ್; ಮತ್ತೊಮ್ಮೆ ಸೆಮೀಸ್​ನಲ್ಲೇ ಹೊರಬಿದ್ದ ಜೋಕೊವಿಕ್​!
Published on
ಲಂಡನ್​: ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್​ ಇಟಲಿಯ ಯಾನಿಕ್​ ಸಿನ್ನರ್​ ಮತ್ತು ಫ್ರೆಂಚ್​ ಓಪನ್​ ಹಾಲಿ ಚಾಂಪಿಯನ್​ ಜರ್ಮನಿಯ ಅಲೆಕ್ಸಾಂಡರ್​ ಜ್ವೆರೇವ್​ ಪ್ರತಿಷ್ಠಿತ ವಿಂಬಲ್ಡನ್ (Wimbledon)​ ಗ್ರಾಸ್​ ಕೋರ್ಟ್​ ಗ್ರಾಂಡ್​ ಸ್ಲಾಂ ಟೂರ್ನಿಯ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ್ದು, ಭಾನುವಾರ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಮಾಜಿ ವಿಶ್ವ ನಂ. 1 ಸೆರ್ಬಿಯಾ ತಾರೆ ನೊವಾಕ್​ ಜೋಕೊವಿಕ್​ ಅವರ 25ನೇ ಗ್ರಾಂಡ್​ ಸ್ಲಾಂ ಗೆಲುವಿನ ಕನಸು ಮತ್ತೊಮ್ಮೆ ಭಗ್ನಗೊಂಡಿತು.

ಆಲ್​ ಇಂಗ್ಲೆಂಡ್​ ಕ್ಲಬ್​ನ ಸೆಂಟರ್​ ಕೋರ್ಟ್​ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಸಿನ್ನರ್​ 6-4, 6-4, 6-4 ನೇರಸೆಟ್​ಗಳಿಂದ 7ನೇ ಶ್ರೇಯಾಂಕಿತ ಜೋಕೊವಿಕ್​ ವಿರುದ್ಧ ಗೆಲುವು ದಾಖಲಿಸಿದರು. ಸಿನ್ನರ್​ 2 ಗಂಟೆ, 20 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡು ಸತತ 2ನೇ ಬಾರಿ ಫೈನಲ್​ ಪ್ರವೇಶಿಸಿದರು. 7ನೇ ಬಾರಿ ಗ್ರಾಂಡ್​ ಸ್ಲಾಂ ಫೈನಲ್​ಗೇರಿರುವ 24 ವರ್ಷದ ಸಿನ್ನರ್​ 5ನೇ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.

7 ಬಾರಿ ವಿಂಬಲ್ಡನ್​ ಗೆದ್ದಿರುವ 39 ವರ್ಷದ ಜೋಕೋವಿಕ್​ 2023ರ ಯುಎಸ್​ ಓಪನ್​ನಲ್ಲಿ ಕೊನೇ ಬಾರಿ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆದ್ದ ಬಳಿಕ 6ನೇ ಬಾರಿ ಉಪಾಂತ್ಯದಲ್ಲೇ ಮುಗ್ಗರಿಸಿದ್ದಾರೆ.

ಸತತ 2ನೇ ಫೈನಲ್​ಗೇರಿದ ಜ್ವೆರೇವ್: ಕಳೆದ ಫ್ರೆಂಚ್​ ಓಪನ್​ನಲ್ಲಿ ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ ಒಲಿಸಿಕೊಂಡಿದ್ದ ಜರ್ಮನಿಯ ತಾರೆ ಅಲೆಕ್ಸಾಂಡರ್​ ಜ್ವೆರೇವ್​ ಇದೀಗ ವಿಂಬಲ್ಡನ್​ ಗ್ರಾಸ್​ ಕೋರ್ಟ್​ ಟೂರ್ನಿಯಲ್ಲೂ ಫೈನಲ್​ ಪ್ರವೇಶಿಸಿದ್ದಾರೆ. 29 ವರ್ಷದ ಜ್ವೆರೇವ್​ ಶುಕ್ರವಾರ ನಡೆದ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಬ್ರಿಟನ್​ನ ವೈಲ್ಡ್​ ಕಾರ್ಡ್​ ಪ್ರವೇಶಿಗ ಆರ್ಥರ್​ ಫೆರಿ ಅವರ ಕನಸಿನ ಓಟವನ್ನು ಕೊನೆಗೊಳಿಸಿದರು. ಈ ಮೂಲಕ ಜ್ವೆರೇವ್​ ಸತತ 2ನೇ ಮತ್ತು ಒಟ್ಟಾರೆ 5ನೇ ಗ್ರಾಂಡ್​ ಸ್ಲಾಂ ಫೈನಲ್​ ಪ್ರವೇಶಿಸಿದರು. ವಿಂಬಲ್ಡನ್​ನಲ್ಲಿ ಅವರು 4ನೇ ಸುತ್ತಿಗಿಂತ ಮೇಲೇರಿದ್ದು ಇದೇ ಮೊದಲಾಗಿದೆ.

2ನೇ ಶ್ರೇಯಾಂಕಿತ ಜ್ವೆರೇವ್​ ಏಕಪಯ ಉಪಾಂತ್ಯದಲ್ಲಿ 23 ವರ್ಷದ ಫೆರಿ ವಿರುದ್ಧ 7-6, 6-2, 6-4 ನೇರಸೆಟ್​ಗಳಿಂದ 2 ಗಂಟೆ, 14 ನಿಮಿಷಗಳಲ್ಲೇ ಗೆದ್ದರು. ವಿಶ್ವ ನಂ. 1 ಯಾನಿಕ್​ ಸಿನ್ನರ್​ ಮತ್ತು ಸೆರ್ಬಿಯಾ ದಿಗ್ಗಜ ನೊವಾಕ್​ ಜೋಕೊವಿಕ್​ ನಡುವಿನ 2ನೇ ಸೆಮೀಸ್​ ವಿಜೇತರ ವಿರುದ್ಧ ಜ್ವೆರೇವ್​ ಭಾನುವಾರ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದ್ದಾರೆ.

ಜ್ವೆರೇವ್​ ಮುಕ್ತ ಟೆನಿಸ್​ ಯುಗದಲ್ಲಿ ಬೋರಿಸ್​ ಬೆಕರ್​ ಮತ್ತು ಮೈಕೆಲ್​ ಸ್ಟಿಚ್​ ಬಳಿಕ ವಿಂಬಲ್ಡನ್ ಫೈನಲ್​ಗೇರಿದ 3ನೇ ಜರ್ಮನಿ ಆಟಗಾರರಾಗಿದ್ದಾರೆ. ಜ್ವೆರೇವ್​ ಒಂದೇ ವರ್ಷದಲ್ಲಿ ಫ್ರೆಂಚ್​ ಓಪನ್​-ವಿಂಬಲ್ಡನ್​ ಗೆದ್ದ 7ನೇ ಆಟಗಾರ ಎನಿಸುವ ಅವಕಾಶ ಹೊಂದಿದ್ದಾರೆ. ರಾಡ್​ ಲೆವರ್​, ಬೋರ್ನ್​ ಬೋರ್ಗ್​, ರಾಫೆಲ್​ ನಡಾಲ್​, ರೋಜರ್ ಫೆಡರರ್​, ನೊವಾಕ್​ ಜೋಕೊವಿಕ್​ ಮತ್ತು ಕಾಲೋರ್ಸ್​ ಅಲ್ಕರಾಜ್​ ಹಿಂದಿನ ಸಾಧಕರು.

"ಈ ಗ್ರಾಂಡ್​ ಸ್ಲಾಂನಲ್ಲಿ ನಾನು ಈ ಹಿಂದೆ ಯಾವಾಗಲೂ ಪರದಾಡುತ್ತಿದ್ದೆ. ಈ ಬಾರಿ ಫೈನಲ್​ಗೇರಿರುವುದು ಅಪಾರ ಸಂತಸ ತಂದಿದೆ' ಎಂದು ಜ್ವೆರೇವ್​ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net