

ರೋಮ್: ಕರೊನಾ ಹಾವಳಿಯಿಂದಾಗಿ ಕಳೆದ ಸರಿಸುಮಾರು 5 ತಿಂಗಳಿನಿಂದ ಸ್ತಬ್ಧಗೊಂಡಿರುವ ವೃತ್ತಿಪರ ಟೆನಿಸ್ ಚಟುವಟಿಕೆಗೆ ಸೋಮವಾರ ಮರುಚಾಲನೆ ಸಿಗಲಿದೆ. ಇಟಲಿಯ ಪಲೆಮೋರ್ ಓಪನ್ ಮಹಿಳಾ ಟೆನಿಸ್ ಟೂರ್ನಿಯ ಮೂಲಕ ವೃತ್ತಿಪರ ಟೆನಿಸ್ ಪುನರಾರಂಭ ಕಾಣಲಿದೆ.
ಕ್ಲೇ-ಕೋರ್ಟ್ನಲ್ಲಿ ನಡೆಯುವ ಈ ಟೂರ್ನಿ ಸಾಮಾನ್ಯವಾಗಿ ಅಂಥ ಸ್ಟಾರ್ ಆಟಗಾತಿರ್ಯರಿಂದ ಕೂಡಿರುತ್ತಿರಲಿಲ್ಲ. ಆದರೆ ಈ ಬಾರಿ ಕಳೆದ ಮಾರ್ಚ್ ಬಳಿಕ ಪುರುಷ ಅಥವಾ ಮಹಿಳಾ ಟೆನಿಸ್ನಲ್ಲಿ ನಡೆಯಲಿರುವ ಮೊದಲ ವೃತ್ತಿಪರ ಟೂರ್ನಿ ಇದಾಗಿರುವ ಕಾರಣ ಹೆಚ್ಚಿನ ಆಕರ್ಷಣೆ ಪಡೆದಿದೆ. ಅಲ್ಲದೆ, ಇಬ್ಬರು ಗ್ರಾಂಡ್ ಸ್ಲಾಂ ಆಟಗಾರ್ತಿಯರು, ಕಳೆದ ವರ್ಷದ ಫ್ರೆಂಚ್ ಓಪನ್ ರನ್ನರ್ಅಪ್ ಮತ್ತು ಅಗ್ರ 20 ರಾಂಕಿಂಗ್ನೊಳಗಿನ ಹಲವು ಆಟಗಾರ್ತಿಯರು ಈ ಬಾರಿ ಕಣಕ್ಕಿಳಿಯಲಿದ್ದಾರೆ.
ಟೂರ್ನಿಗೆ ಪೂರ್ವಭಾವಿಯಾಗಿ ನಡೆದ ಕರೊನಾ ಪರೀಕ್ಷೆಯಲ್ಲಿ ಓರ್ವ ಆಟಗಾರ್ತಿಗೆ ಪಾಸಿಟಿವ್ ಬಂದಿದೆ. ಆಕೆಯನ್ನು ಕೈಬಿಟ್ಟು ಟೂರ್ನಿಯನ್ನು ನಿಗದಿಯಂತೆಯೇ ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ. ಟೂರ್ನಿಯಲ್ಲಿ ಆಡಲಿರುವ ಎಲ್ಲ ಆಟಗಾರ್ತಿಯರು ಒಂದೇ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ಆಟಗಾತಿರ್ಯರು ಯುರೋಪ್ನವರೇ ಆಗಿದ್ದಾರೆ.
ಇದನ್ನೂ ಓದಿ: ನವೆಂಬರ್ 1ರಿಂದ 10ರವರೆಗೆ ಮಹಿಳೆಯರ ಐಪಿಎಲ್
ಟೂರ್ನಿಯಲ್ಲಿ ಆಡಲಿರುವ ಪ್ರಮುಖ ಆಟಗಾತಿರ್ಯರು: ರೊಮೇನಿಯಾದ ಸಿಮೋನಾ ಹಲೆಪ್, 2017ರ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ತಾಪೆಂಕೊ, ಫ್ರೆಂಚ್ ಓಪನ್ ರನ್ನರ್ಅಪ್ ಜೆಕ್ ಗಣರಾಜ್ಯದ ಮರ್ಕೆಟ ವೊಂಡ್ರೌಸೋವಾ, ಫ್ರಾನ್ಸ್ನ ಕ್ರಿಸ್ಟಿನಾ ಮ್ಲಾಡೆನೋವಿಕ್, ಕ್ರೊವೇಷಿಯಾದ ಪೆಟ್ರಾ ಮಾಟಿರ್ಕ್, ಡೊನ್ನಾ ವೆಕಿಕ್, ಗ್ರೀಸ್ನ ಮರಿಯಾ ಸಕ್ಕರಿ.
ಹೊಸ ಹೊಸ ನಿಯಮಗಳು
ಕರೊನಾ ಕಾಲದ ಮೊದಲ ಟೆನಿಸ್ ಟೂರ್ನಿಗೆ ಕೆಲ ಹೊಸ ನಿಯಮಗಳನ್ನು ಅಳವಡಿಸಲಾಗಿದೆ. ಅದರಂತೆ ಆಟಗಾರ್ತಿಯರು ತಮ್ಮ ಟವೆಲ್ಗಳನ್ನು ತಾವೇ ನಿಭಾಯಿಸಬೇಕು. ಬಾಲ್ ಕಿಡ್ಗಳು ಅದನ್ನು ತಂದುಕೊಡುವುದಿಲ್ಲ. ಪಂದ್ಯದ ಬಳಿಕ ಆಟಗಾರ್ತಿಯರು ಪರಸ್ಪರ ಹ್ಯಾಂಡ್ ಶೇಕ್ ಮಾಡಿಕೊಳ್ಳುವಂತಿಲ್ಲ. ಅಭಿಮಾನಿಗಳ ಜತೆಗೆ ಫೋಟೋ ತೆಗೆಸಿಕೊಳ್ಳುವಂತಿಲ್ಲ ಮತ್ತು ಹಸ್ತಾಕ್ಷರವನ್ನೂ ನೀಡುವಂತಿಲ್ಲ. ಕ್ರೀಡಾಂಗಣದ ಸ್ನಾನಕ್ಕೆ ಅವಕಾಶ ಇರುವುದಿಲ್ಲ. ಪ್ರತಿ 4 ದಿನಕ್ಕೊಮ್ಮೆ ಎಲ್ಲರ ಕರೊನಾ ಪರೀಕ್ಷೆ ನಡೆಯಲಿದೆ.
ಪಲೆರ್ಮೊದಲ್ಲಿ ಕರೊನಾ ನಿಯಂತ್ರಣ
ಕಳೆದ ಮಾರ್ಚ್ನಲ್ಲಿ ಇಟಲಿಯಲ್ಲಿ ಕರೊನಾ ವೈರಸ್ ಹಾವಳಿ ಜೋರಾಗಿತ್ತು. ಸುಮಾರು 35 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದರ ನಡುವೆಯೂ ವೃತ್ತಿಪರ ಟೆನಿಸ್ ಆಯೋಜನೆಗೆ ಇಟಲಿ ಅಷ್ಟು ಬೇಗ ಸಜ್ಜಾಯಿತೇ ಎಂಬ ಅನುಮಾನ ಬೇಡ. ಇಟಲಿಯ ಭಾಗವಾಗಿರುವ ದ್ವೀಪ ಸಿಸಿಲಿಯಲ್ಲಿ ಪಲೆರ್ಮೊ ನಗರವಿದೆ. ಇಲ್ಲಿ ಇದುವರೆಗೆ 163 ಕರೊನಾ ಪ್ರಕರಣಗಳಷ್ಟೇ ದಾಖಲಾಗಿವೆ. ಹೀಗಾಗಿ ಪಂದ್ಯಗಳನ್ನು ವೀಕ್ಷಿಸಲು ಸಣ್ಣ ಸಂಖ್ಯೆಯ ಪ್ರೇಕ್ಷಕರಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪಂದ್ಯಕ್ಕೆ 280 ಪ್ರೇಕ್ಷಕರಿಗೆ ಅವಕಾಶ ಸಿಗಲಿದೆ. ಒಂದೂವರೆ ಸಾವಿರ ಆಸನ ವ್ಯವಸ್ಥೆ ಇರುವ ಕ್ರೀಡಾಂಗಣದಲ್ಲಿ ಆಟಗಾರ್ತಿಯರ ಸಹಿತ ಕೇವಲ 327 ಜನರು ಹಾಜರಿರಲಿದ್ದಾರೆ. ಪಂದ್ಯ ವೀಕ್ಷಿಸಲು ಬಯಸುವ ಪ್ರೇಕ್ಷಕರೂ ಕರೊನಾ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದೆ.
ಬಹುಮಾನ ಮೊತ್ತ ಕಡಿತ
ಟಿಕೆಟ್ ಮಾರಾಟ ಕಡಿಮೆ ಇರುವುದರಿಂದ ಟೂರ್ನಿಯ ಬಹುಮಾನ ಮೊತ್ತವನ್ನೂ ಕಡಿತ ಮಾಡಲಾಗುತ್ತಿದೆ. 2019ರಲ್ಲಿ ಒಟ್ಟು 1.87 ಕೋಟಿ ರೂ. ಬಹುಮಾನ ವಿತರಿಸಲಾಗಿದ್ದರೆ, ಈ ಬಾರಿ ಟೂರ್ನಿಯ ಬಹುಮಾನ 1.66 ಕೋಟಿ ರೂ. ಆಗಿದೆ. ಆದರೆ ಆಟಗಾತಿರ್ಯರು ಬಹುಮಾನ ಮೊತ್ತ ಕಡಿತದ ಬೇಸರಕ್ಕಿಂತ ಮರಳಿ ಕೋರ್ಟ್ಗೆ ಇಳಿಯುವ ಸಂಭ್ರಮವನ್ನೇ ಹೆಚ್ಚು ಹೊಂದಿದ್ದಾರೆ.