

ಮುಂಬೈ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಎರಡು ವರ್ಷಗಳ ಬಳಿಕ ಮತ್ತೆ ತಮ್ಮ ಫೀಲ್ಡ್ಗೆ ಇಳಿದಿದ್ದಾರೆ.
ಅಮ್ಮನಾಗುವ ಸೂಚನೆ ಸಿಕ್ಕ ಬಳಿಕ ಆಟದಿಂದ ದೂರವುಳಿದ್ದ ಅವರು ನಂತರ ಮಗುವನ್ನು ಹೆತ್ತು, ಅದರ ಲಾಲನೆಪಾಲನೆಯೆಲ್ಲ ಸೇರಿ ಎರಡು ವರ್ಷಕ್ಕೂ ಹೆಚ್ಚು ಕಾಲ ವಿರಾಮದಲ್ಲಿದ್ದರು.
ಜನವರಿಯಲ್ಲಿ ನಡೆದ ಹೋಬಾರ್ಟ್ ಡಬ್ಲ್ಯೂಟಿಎ ಅಂತಾರಾಷ್ಟ್ರೀಯ ಕೂಟದ ಡಬಲ್ಸ್ನಲ್ಲಿ ಸಾನಿಯಾ ಗೆದ್ದು ಬೀಗಿದ್ದರು. ಎರಡು ವರ್ಷದ ಬ್ರೇಕ್ ಪಡೆದು ಬಂದ ಮೊದಲ ಪಂದ್ಯದಲ್ಲಿ ನಾದಿಯಾ ಕಿಚೆನಾಕ್ ಅವರೊಂದಿಗೆ ಜತೆಯಾಟವಾಡಿ ಗೆಲುವಿನ ನಗೆ ಬೀರಿದ್ದರು.
ಸದ್ಯ ಸಾನಿಯಾ ಮಿರ್ಜಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿದ್ದಾರೆ. ತಮ್ಮ ಹಳೇ ಫೋಟೋದೊಂದಿಗೆ ಈಗಿನ ಹೊಸ ಫೋಟೋವನ್ನು ಕೊಲ್ಯಾಜ್ ಮಾಡಿ ಹಾಕಿದ್ದಾರೆ. ಅದರಲ್ಲಿ ವಿಶೇಷವೇನೆಂದರೆ ಸಾನಿಯಾ ಮಿರ್ಜಾ ಬರೋಬ್ಬರಿ 26 ಕೆಜಿ ತೂಕವನ್ನು ಬರೀ ನಾಲ್ಕೇ ತಿಂಗಳಲ್ಲಿ ಕಡಿಮೆ ಮಾಡಿಕೊಂಡಿದ್ದು.
80 ಕೆಜಿಯಿಂದ 63 ಕೆಜಿಗೆ ಇಳಿದಿದ್ದೇನೆ. ನಮಗೆಲ್ಲರಿಗೂ ಗುರಿಯೆಂಬುದು ಇದ್ದೇ ಇದೆ. ಕೆಲವರಿದ್ದು ಆ ದಿನದ ಗುರಿಯಾದರೆ ಮತ್ತೊಂದಷ್ಟು ಜನರದ್ದು ದೀರ್ಘಾವಧಿ ಗುರಿ. ಅದೇನೆ ಆಗಿದ್ದರೂ ಸಾಧಿಸಿದಾಗ ಖಂಡಿತ ಹೆಮ್ಮೆಯೆನಿಸುತ್ತದೆ. ಹಾಗೇ ನನಗೆ ನನ್ನ ತೂಕ ಇಳಿಸಿಕೊಳ್ಳಲು, ಮಗು ಹುಟ್ಟಿದ ಮೇಲೆ ಮತ್ತೆ ಫಿಟ್ ಆಗಲು ನಾಲ್ಕು ತಿಂಗಳು ಬೇಕಾಯಿತು. ಇದೇ ನನ್ನ ಗುರಿಯಾಗಿತ್ತು ಎಂದು ಕ್ಯಾಪ್ಷನ್ ಬರೆದಿದ್ದಾರೆ. (ಏಜೆನ್ಸೀಸ್)