

ಮಲಗ (ಸ್ಪೇನ್): ಕ್ಲೇಕೋರ್ಟ್ ಕಿಂಗ್ ಎಂದೇ ಹೆಸರಾದ ಸ್ಪೇನ್ ದಿಗ್ಗಜ ರಾಫೆಲ್ ನಡಾಲ್ 20 ವರ್ಷಗಳ ವೃತ್ತಿಪರ ಟೆನಿಸ್ ಬದುಕಿಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ. ಮಂಗಳವಾರದಿಂದ ತವರಿನಲ್ಲೇ ನಡೆಯಲಿರುವ ಡೇವಿಸ್ ಕಪ್ ಫೈನಲ್ಸ್ ಟೂರ್ನಿಯಲ್ಲಿ ಕೊನೆಯದಾಗಿ ಆಡಿ 38 ವರ್ಷದ ನಡಾಲ್ ನಿವೃತ್ತಿ ಹೊಂದಲಿದ್ದಾರೆ. ಆದರೆ ಈ ಟೀಮ್ ಚಾಂಪಿಯನ್ಷಿಪ್ನಲ್ಲಿ 22 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ನಡಾಲ್ ಸಿಂಗಲ್ಸ್ ಅಥವಾ ಡಬಲ್ಸ್ ಪಂದ್ಯದಲ್ಲಿ ಆಡುವ ಪಡೆಯುವರೇ ಎಂಬುದು ಮಾತ್ರ ಸೋಮವಾರದವರೆಗೂ ಸ್ಪಷ್ಟವಾಗಿಲ್ಲ.
ಒಳಾಂಗಣ ಹಾರ್ಡ್ ಕೋರ್ಟ್ನಲ್ಲಿ ನಡೆಯಲಿರುವ ಕ್ವಾರ್ಟರ್ಫೈನಲ್ನಲ್ಲಿ ಆತಿಥೇಯ ಸ್ಪೇನ್ ತಂಡ ನೆದರ್ಲೆಂಡ್ ವಿರುದ್ಧ ಆಡಲಿದೆ. ಇದರಲ್ಲಿ ಗೆದ್ದರಷ್ಟೇ ಸ್ಪೇನ್ ತಂಡ ಶುಕ್ರವಾರದ ಸೆಮಿೈನಲ್ಗೆ ಅರ್ಹತೆ ಪಡೆಯಲಿದೆ. ನಂತರ ಭಾನುವಾರ ಫೈನಲ್ ನಿಗದಿಯಾಗಿದೆ. ಆದರೆ ಇನ್ನೂ ಶೇ. 100 ಫಿಟ್ ಆಗಿರದ ನಡಾಲ್ರನ್ನು ಸಿಂಗಲ್ಸ್ ಅಥವಾ ಡಬಲ್ಸ್ನಲ್ಲಿ ಆಡಿಸುವ ಬಗ್ಗೆ ಸ್ಪೇನ್ ತಂಡದ ಆಡದ ನಾಯಕ ಡೇವಿಡ್ ಫೆರರ್ ಗುಟ್ಟುಬಿಟ್ಟುಕೊಟ್ಟಿಲ್ಲ.
ನಡಾಲ್ ಕೂಡ ಗೆಲ್ಲಲು ಸಾಧ್ಯವಿದೆ ಅನಿಸಿದರೆ ಮಾತ್ರ ಸಿಂಗಲ್ಸ್ನಲ್ಲಿ ಆಡುವೆ. ನಾನು ನಿವೃತ್ತಿ ಹೊಂದಲು ಅಲ್ಲ, ತಂಡವನ್ನು ಗೆಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ತಂಡವನ್ನು ಗೆಲ್ಲಿಸುವುದೇ ನನ್ನ ಗುರಿ ಎಂದಿದ್ದಾರೆ. ನಡಾಲ್ ಕಳೆದ ಆಗಸ್ಟ್ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕೊನೆಯದಾಗಿ ಆಡಿದ್ದರು.
ಫ್ರೆಂಚ್ ಓಪನ್ನಲ್ಲಿ ದಾಖಲೆಯ 14 ಬಾರಿ ಪ್ರಶಸ್ತಿ ಗೆದ್ದಿರುವ ನಡಾಲ್, ಯುಎಸ್ ಓಪನ್ನಲ್ಲಿ 4, ವಿಂಬಲ್ಡನ್ನಲ್ಲಿ 2 ಮತ್ತು ಆಸ್ಟ್ರೆಲಿಯನ್ ಓಪನ್ನಲ್ಲಿ 2 ಬಾರಿ ಪ್ರಶಸ್ತಿ ಜಯಿಸಿದ್ದಾರೆ. 2022ರ ಫ್ರೆಂಚ್ ಓಪನ್ ಅವರು ಗೆದ್ದಿರುವ ಕೊನೆಯ ಗ್ರಾಂಡ್ ಸ್ಲಾಂ ಆಗಿದೆ. ನಂತರದಲ್ಲಿ ಗಾಯದಿಂದ ಬಳಲಿರುವ ಅವರು ಕಳೆದ 2 ವರ್ಷಗಳಲ್ಲಿ 25ಕ್ಕೂ ಕಡಿಮೆ ಪಂದ್ಯಗಳಲ್ಲಿ ಆಡಿದ್ದಾರೆ.