ಟೀಮ್​ ಇಂಡಿಯಾಗೆ ಅಜೇಯವಾಗಿ ವಿಶ್ವಕಪ್​ ಗೆದ್ದ 3ನೇ ತಂಡವೆನಿಸುವ ಅವಕಾಶ!

ind web
Published on

ಕೋಲ್ಕತ: ಭಾರತ ತಂಡ ಏಕದಿನ ವಿಶ್ವಕಪ್​ನಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಇದರಲ್ಲಿ ಗೆದ್ದರೆ ಅಜೇಯವಾಗಿ ಪ್ರಶಸ್ತಿ ಎತ್ತುವ ಆಸೆಯೂ ಹೆಚ್ಚಲಿದೆ.

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ ಓಟ ಮುಂದುವರಿಸಿದರೆ ವಿಶ್ವಕಪ್​ನಲ್ಲಿ ವಿಶೇಷ ದಾಖಲೆ ಮಾಡುವ ಅವಕಾಶವನ್ನು ಹೊಂದಿದೆ. ಏಕದಿನ ವಿಶ್ವಕಪ್​ನಲ್ಲಿ ಇದುವರೆಗೆ 2 ತಂಡಗಳು ಅಜೇಯವಾಗಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿವೆ. ರೋಹಿತ್​ ಶರ್ಮ ಪಡೆಗೆ 3ನೇ ತಂಡವಾಗಿ ಈ ದಾಖಲೆ ಬರೆಯುವ ಅವಕಾಶವಿದೆ.

1975 ಮತ್ತು 1979ರಲ್ಲಿ (ಒಂದು ಪಂದ್ಯ ಮಳೆಗೆ ರದ್ದು) ವೆಸ್ಟ್​ ಇಂಡೀಸ್​ ಹಾಗೂ 2003 ಮತ್ತು 2007ರಲ್ಲಿ ಆಸ್ಟ್ರೆಲಿಯಾ ತಂಡ ಅಜೇಯವಾಗಿ ವಿಶ್ವಕಪ್​ ಜಯಿಸಿತ್ತು. 48 ವರ್ಷಗಳ ಇತಿಹಾಸ ಹೊಂದಿರುವ ಏಕದಿನ ವಿಶ್ವಕಪ್​ನ ಕಳೆದ 12 ಆವೃತ್ತಿಗಳಲ್ಲಿ ಒಟ್ಟು 5 ತಂಡಗಳು ಪ್ರಶಸ್ತಿ ಗೆದ್ದಿವೆ. ಆದರೆ ಈ ಪೈಕಿ ವಿಂಡೀಸ್​, ಆಸೀಸ್​ ಬಿಟ್ಟರೆ ಬೇರೆ ತಂಡಗಳು ಅಜೇಯವಾಗಿ ಈ ಸಾಧನೆ ಮಾಡಿಲ್ಲ. ಭಾರತವೂ 1983 ಮತ್ತು 2011ರಲ್ಲಿ ವಿಶ್ವಕಪ್​ ಗೆದ್ದಾಗ ಲೀಗ್​ ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿತ್ತು. 2011ರಲ್ಲಿ ತವರಿನಲ್ಲೇ ನಡೆದ ವಿಶ್ವಕಪ್​ನಲ್ಲಿ ಭಾರತ ಪ್ರಶಸ್ತಿ ಗೆದ್ದಾಗ ಲೀಗ್​ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿತ್ತು. ನಂತರ ಭಾರತ 2015ರಲ್ಲಿ ಲೀಗ್​ ಹಂತದಲ್ಲಿ 6 ಪಂದ್ಯ ಗೆದ್ದು ಅಜೇಯವಾಗಿಯೇ ಉಳಿದಿದ್ದರೂ, ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಎದುರು ನಿರಾಸೆ ಅನುಭವಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net