

ನವದೆಹಲಿ: ಭಾರತ ತಂಡ ಮುಂಬರುವ ಐಪಿಎಲ್ 18ನೇ ಆವೃತ್ತಿಯ ಬಳಿಕ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಐಪಿಎಲ್ನಲ್ಲಿ ಎರಡು ತಿಂಗಳ ಕಾಲ ವೈಟ್ಬಾಲ್ನಲ್ಲಿ ಆಡಲಿರುವ ಟೀಮ್ ಇಂಡಿಯಾ ಆಟಗಾರರು ಅದರ ಬೆನ್ನಲ್ಲೇ ರೆಡ್ ಬಾಲ್ ಕ್ರಿಕೆಟ್ಗೆ ಹೊಂದಿಕೊಳ್ಳುವುದು ಕಠಿಣ ಸವಾಲು ಎನಿಸಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಭಾರತ ತಂಡದ ಆಟಗಾರರು ಐಪಿಎಲ್ ನಡುವೆಯೂ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ವಿಶೇಷ ಯೋಜನೆಯೊಂದನ್ನು ರೂಪಿಸಿದೆ. ಇದರನ್ವಯ ಐಪಿಎಲ್ ಟೂರ್ನಿಯ ನಡುವೆಯೂ ಆಟಗಾರರು ಕೆಲ ಸಮಯ ರೆಡ್ಬಾಲ್ನಲ್ಲೂ ಅಭ್ಯಾಸ ನಡೆಸಬೇಕೆಂದು ಸೂಚನೆ ನೀಡಲಿದೆ ಎಂದು ವರದಿಯಾಗಿದೆ.
ಐಪಿಎಲ್ 18ನೇ ಆವೃತ್ತಿ ಮೇ 25ರವರೆಗೂ ನಡೆಯಲಿದ್ದರೆ, ಇಂಗ್ಲೆಂಡ್ ಪ್ರವಾಸದ ಮೊದಲ ಟೆಸ್ಟ್ ಪಂದ್ಯ ಜೂನ್ 20ರಿಂದ ನಡೆಯಲಿದೆ. ಈ ಮೂರೂವರೆ ವಾರಗಳ ಅವಧಿಯಲ್ಲಿ ಆಟಗಾರರು ಸ್ವಲ್ಪ ಸಮಯ ಕುಟುಂಬದೊಂದಿಗೂ ಕಾಲ ಕಳೆಯಬೇಕಾಗುತ್ತದೆ. ಹೀಗಾಗಿ ಐಪಿಎಲ್ ಸಮಯದಲ್ಲೂ ಆಟಗಾರರು ರೆಡ್ ಬಾಲ್ ಕ್ರಿಕೆಟ್ ಮರೆಯದಿರಲಿ ಎಂದು ಬಿಸಿಸಿಐ ಕಾರ್ಯತಂತ್ರವನ್ನು ರೂಪಿಸಿದೆ.
ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಬಿಸಿಸಿಐ ಇನ್ನೂ ಕೆಲವು ವಿಶೇಷ ಕಾರ್ಯತಂತ್ರಗಳನ್ನು ಸಿದ್ಧಪಡಿಸಿದೆ. ಆದರೆ ಸದ್ಯಕ್ಕೆ ಅವುಗಳನ್ನು ಗೌಪ್ಯವಾಗಿಟ್ಟಿವೆ. ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಅನುಸರಿಸುವ ಕಾರ್ಯತಂತ್ರಗಳ ಬಗ್ಗೆ ಭಾರತ ತಂಡದ ಮ್ಯಾನೇಜ್ಮೆಂಟ್ ಈಗಾಗಲೆ ಮೊದಲ ಹಂತದ ಸಭೆಯನ್ನು ನಡೆಸಿದೆ. ಇದಲ್ಲದೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಡುವೆ ದುಬೈನಲ್ಲೂ ಬಿಸಿಸಿಐ ಪದಾಧಿಕಾರಿಗಳೊಂದಿಗೆ ಈ ಸಂಬಂಧ ಇನ್ನೊಂದು ಸುತ್ತಿನ ಸಭೆಯೂ ನಡೆಯಲಿದೆ ಎನ್ನಲಾಗಿದೆ.
ಚಾಂಪಿಯನ್ಸ್ ಟ್ರೋಫಿ ಮಾರ್ಚ್ 9ರಂದು ಮುಕ್ತಾಯಗೊಂಡರೆ, ನಂತರ ಎರಡು ವಾರಕ್ಕೂ ಕಡಿಮೆ ಅಂತರದಲ್ಲಿ ಅಂದರೆ ಮಾರ್ಚ್ 22ರಂದು ಐಪಿಎಲ್ ಶುರುವಾಗಲಿದೆ. ಸಾಮಾನ್ಯವಾಗಿ ಬಿಸಿಸಿಐ, ಐಪಿಎಲ್ ಸಮಯದಲ್ಲಿ ಆಟಗಾರರ ಮೇಲೆ ಬೇರೆ ಯಾವ ಜವಾಬ್ದಾರಿಯನ್ನೂ ಹೇರುವುದಿಲ್ಲ ಮತ್ತು ಅವರು ತಮ್ಮ ಫ್ರಾಂಚೈಸಿಗಳ ಪರ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ. ಆದರೆ ಈ ಬಾರಿ ಐಪಿಎಲ್ ನಡುವೆಯೂ ಆಟಗಾರರಿಗೆ ಪದೇ ಪದೆ ಟೆಸ್ಟ್ ಸಿದ್ಧತೆಯ ಬಗ್ಗೆ ಎಚ್ಚರಿಸಲಿದೆ.
ಕಳೆದ ಆಸ್ಟ್ರೆಲಿಯಾ ಪ್ರವಾಸದ ಸೋಲು ಒಂದೆಡೆಯಾದರೆ, ಐಪಿಎಲ್ ಶುರುವಾದ ನಂತರದಲ್ಲಿ ಕೈಗೊಂಡ ಪ್ರತಿ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲೂ ಸೋತಿರುವುದರಿಂದಲೂ ಈ ಬಾರಿ ವಿಶೇಷವಾಗಿ ಎಚ್ಚರಿಕೆ ವಹಿಸಲಾಗಿದೆ. 2011ರ ಇಂಗ್ಲೆಂಡ್ ಪ್ರವಾಸದಲ್ಲಿ 0-4ರಿಂದ ಸೋತಿದ್ದ ಭಾರತ, 2014ರಲ್ಲಿ ಮತ್ತೆ 1-3ರಿಂದ ಸೋತಿತ್ತು. 2018ರಲ್ಲೂ 1-4ರಿಂದ ಪರಾಭವಗೊಂಡಿತ್ತು. 2021ರ ಪ್ರವಾಸದಲ್ಲಿ ಭಾರತ, ಕರೊನಾ ವೈರಸ್ ಕಾಡುವ ವೇಳೆ 2-1ರಿಂದ ಮುನ್ನಡೆ ಸಾಧಿಸಿತ್ತು. ಆದರೆ ಒಂದು ವರ್ಷದ ಬಳಿಕ ನಡೆದ ಸರಣಿಯ ಕೊನೇ ಪಂದ್ಯದಲ್ಲಿ ಸೋತು, 2&2ರಿಂದ ಸಮಬಲ ಕಂಡಿತ್ತು.