

ನವದೆಹಲಿ: ಕಳೆದ ವಿಶ್ವಕಪ್ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್ ಫ್ಯಾನ್ ಚಾರುಲತಾ ಪಟೇಲ್ (87) ನಿಧನರಾಗಿದ್ದಾರೆ.
2019ರಲ್ಲಿ ವಿಶ್ವಕಪ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್ ಕ್ಯಾಮರಾಕಣ್ಣಿಗೆ ಬಿದ್ದಿದ್ದರು. ಕ್ರಿಕೆಟ್ ಬಗೆಗಿನ ಅವರ ಉತ್ಸಾಹ ಇಡೀ ಜಗತ್ತಿನ ಗಮನಸೆಳೆದಿತ್ತು. ಬರ್ಮಿಂಗ್ಹ್ಯಾಂನ ಎಜ್ಬಾಸ್ಟನ್ ಮೈದಾನದಲ್ಲಿ ನಡೆದ ಪಂದ್ಯ ನೋಡಲು ಆಗಮಿಸಿದ್ದ ಅಜ್ಜಿ, ಭಾರತ ಧ್ವಜದ ಶಾಲು ಹೊದ್ದು, ಕೆನ್ನೆಮೇಲೆ ಧ್ವಜ ಬಿಡಿಸಿಕೊಂಡು ಕುಳಿತಿದ್ದರು. ಟೀಂ ಇಂಡಿಯಾ ಆಟಗಾರರು ಬೌಂಡರಿ, ಸಿಕ್ಸರ್ ಹೊಡೆದಾಗಲೆಲ್ಲ ಚಿಕ್ಕಮಕ್ಕಳಂತೆ ಸಂಭ್ರಮಿಸಿದ್ದರು. ಅವರು ಟೀಂ ಇಂಡಿಯಾಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಪರಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು.
ಪಂದ್ಯ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಚಾರುಲತಾ ಪಟೇಲ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಚಾರುಲತಾ ಅವರು ಕೊಹ್ಲಿಯ ಕೆನ್ನೆ ಹಿಡಿದು ಆಶೀರ್ವಾದ ಮಾಡಿದ ಫೋಟೋ ಕೂಡ ವೈರಲ್ ಆಗಿತ್ತು.
87 ವರ್ಷದ ವೃದ್ಧೆ ಚಾರುಲತಾ ಅವರ ನಿಧನಕ್ಕೆ ಬಿಸಿಸಿಐ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ.
ಟೀಂ ಇಂಡಿಯಾದ ಸೂಪರ್ಫ್ಯಾನ್ ಚಾರುಲತಾ ಪಟೇಲ್ ಜೀ ಅವರು ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ. ಆಟದ ಬಗ್ಗೆ ಅವರಿಗೆ ಇದ್ದ ಉತ್ಸಾದ ನಮಗೆ ಯಾವಾಗಲೂ ಪ್ರೇರೇಪಣೆ. ಅವರ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದು ಹೇಳಿದೆ. (ಏಜೆನ್ಸೀಸ್)