

RCB: ಕಳೆದ ವರ್ಷ ನ.24 ಮತ್ತು 25ರಂದು ನಡೆದ ಐಪಿಎಲ್ ಹರಾಜಿನಲ್ಲಿ ಯುವ ಆಟಗಾರರ ಜತೆ ಆಲ್ರೌಂಡ್ ಕ್ರಿಕೆಟಿಗರನ್ನೇ ಖರೀದಿಸಿದ ಫ್ರಾಂಚೈಸಿಗಳು, ನಾ ಮುಂದು ತಾ ಮುಂದು ಎಂದು ಬಿಡ್ಡಿಂಗ್ನಲ್ಲಿ ಪೈಪೋಟಿ ಕೊಟ್ಟು ತಂಡಕ್ಕೆ ಅಗತ್ಯವಿದ್ದ ಆಟಗಾರರನ್ನು ಕರೆದುಕೊಳ್ಳುವಲ್ಲಿ ಯಶಸ್ವಿಯಾಯಿತು. 10 ತಂಡಗಳ ಪೈಕಿ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಅಭಿಮಾನಿಗಳ ವ್ಯಾಪಕ ಟೀಕೆ, ಅಸಮಾಧಾನಕ್ಕೆ ಗುರಿಯಾಗಿತ್ತು. ಆದರೆ, ಎರಡನೇ ದಿನದ ಹರಾಜಿನಲ್ಲಿ ಖರೀದಿ ಮಾಡಿದ ಆಟಗಾರರನ್ನು ನೋಡಿ ಫ್ಯಾನ್ಸ್ ಕೊಂಚ ನಿರಾಳವಾಗಿದ್ದರು. ಆಯ್ಕೆಗಳು ಉತ್ತಮ ಅನಿಸಿದ್ದೇ ಆದರೂ ಐಪಿಎಲ್ನಲ್ಲಿ ಹುಬ್ಬೇರಿಸುವ ಪ್ರದರ್ಶನ ನೀಡ್ತಾರಾ? ಎಂಬ ಭರವಸೆ ಫ್ರಾಂಚೈಸಿಯ ಫ್ಯಾನ್ಸ್ಗಳಿಗಿಲ್ಲ. ಆದರೆ, ನಿನ್ನೆ ನಡೆದ ಇಂಗ್ಲೆಂಡ್ ಮತ್ತು ಭಾರತ ನಡುವಿನ 3ನೇ ಟಿ20 ಪಂದ್ಯದ ಬಳಿಕ ಈ ಭರವಸೆ ಕೊಂಚ ಗಟ್ಟಿಯಾಗಿದೆ.
ನಿನ್ನೆ (ಜ.28) ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಆಂಗ್ಲರ ಪಡೆ 26 ರನ್ಗಳ ಅಂತರದಲ್ಲಿ ಜಯ ಸಾಧಿಸಿತು. 2-1 ಅಂತರದಲ್ಲಿ ಸಾಗಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೂರನೇ ಮ್ಯಾಚ್ ಗೆಲುವು ಇಂಗ್ಲೆಂಡ್ ಪಾಲಾಯಿತು. ಈ ಪಂದ್ಯದಲ್ಲಿ ಭಾರತ ಸೋಲುಂಡಿತು ಎಂಬ ಬೇಸರ ಒಂದೆಡೆಯಾದರೆ, ಅದೇ ಮ್ಯಾಚ್ನಲ್ಲಿ ಆರ್ಸಿಬಿ ಖರೀದಿಸಿದ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ರ ಅಬ್ಬರದ ಆಟ ಮತ್ತೊಂದೆಡೆ. ಸದ್ಯ ಇದು ಅಭಿಮಾನಿಗಳ ಈ ಸಲ ಕಪ್ ನಮ್ದೇ ಎನ್ನುವ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಮೂರನೇ ಟಿ20 ಪಂದ್ಯದಲ್ಲಿ ಭಾರತದ ಎದುರು ತನ್ನ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿದ ಲಿವಿಂಗ್‌ಸ್ಟೋನ್, ಕೇವಲ 24 ಎಸೆತಗಳಲ್ಲಿ 43 ರನ್ಗಳನ್ನು (4 ಸಿಕ್ಸರ್ ಮತ್ತು 1 ಬೌಂಡರಿ ) ಸಿಡಿಸಿದರು. ಇದು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಲಿವಿಂಗ್‌ಸ್ಟೋನ್ ಬ್ಯಾಟಿಂಗ್ ವೈಖರಿಯನ್ನು ಗಮನಿಸಿದ ಕ್ರಿಕೆಟ್ ಪ್ರೇಮಿಗಳು, ಈ ಬಾರಿಯ ಐಪಿಎಲ್ 18ನೇ ಆವೃತ್ತಿಯಲ್ಲಿಯೂ ಇದೇ ರೀತಿಯ ಸಖತ್ ಪ್ರದರ್ಶನ ನೀಡುತ್ತಾರೆ ಎಂಬ ಅಪಾರ ನಿರೀಕ್ಷೆಗಳನ್ನು ಹೊಂದಿದ್ದಾರೆ. 8.75 ಕೋಟಿ ರೂ. ಕೊಟ್ಟು ಖರೀದಿ ಮಾಡಿರುವ ಆರ್ಸಿಬಿಗೆ ಲಿಯಾಮ್ ಲಿವಿಂಗ್‌ಸ್ಟೋನ್ ವರವಾಗಲಿದ್ದಾರಾ? ಈ ಸಲ ಕಪ್ ನಮ್ದೇ ಎಂದು ಹೇಳಲು ಅತ್ಯುತ್ತಮ ಕೊಡುಗೆ ನೀಡಲಿದ್ದಾರಾ? ಎಂಬ ಪ್ರಶ್ನೆಗಳಿಗೆ ಮಾರ್ಚ್ 21ರ ನಂತರದಲ್ಲಿ ಉತ್ತರ ಕಂಡುಕೊಳ್ಳಬೇಕಿದೆ.
1. ಲಿಯಾಮ್ ಲಿವಿಂಗ್‌ಸ್ಟೋನ್: 8.75 ಕೋಟಿ ರೂ.
2. ಫಿಲ್ ಸಾಲ್ಟ್ – 11.50 ಕೋಟಿ ರೂ.
3. ಜಿತೇಶ್ ಶರ್ಮಾ – 11 ಕೋಟಿ ರೂ.
4. ಜೋಶ್ ಹ್ಯಾಜಲ್‌ವುಡ್ – 12.5 ಕೋಟಿ ರೂ.
5. ರಾಸಿಖ್ ದಾರ್ – 6 ಕೋಟಿ ರೂ.
6. ಸುಯಶ್ ಶರ್ಮಾ – 2.6 ಕೋಟಿ ರೂ.
7. ಕೃನಾಲ್ ಪಾಂಡ್ಯ – 5.75 ಕೋಟಿ ರೂ.
8. ಭುವನೇಶ್ವರ್ ಕುಮಾರ್ – 10.75 ಕೋಟಿ ರೂ.
9. ಸ್ವಪ್ನಿಲ್ ಸಿಂಗ್: 50 ಲಕ್ಷ ರೂ.
10. ಟಿಮ್ ಡೇವಿಡ್: 3 ಕೋಟಿ ರೂ.
11. ರೊಮಾರಿಯೋ ಶೆಫರ್ಡ್: 1.50 ಕೋಟಿ ರೂ.
12. ನುವಾನ್ ತುಷಾರ: 1.60 ಕೋಟಿ ರೂ.
13. ಜಾಕೋಬ್ ಬೆಥೆಲ್: 2.60 ಕೋಟಿ ರೂ.
14. ದೇವದತ್ ಪಡಿಕ್ಕಲ್: 2 ಕೋಟಿ ರೂ.
15. ಸ್ವಸ್ತಿಕ್ ಚಿಕಾರ: 30 ಲಕ್ಷ ರೂ.