ಹೋಳ್ಕರ್​ನಲ್ಲಿ ಟೀಮ್ ಇಂಡಿಯಾ ಜೈಕಾರ

cricket jan 07
Published on

ಇಂದೋರ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಮೇಲುಗೈ ಸಾಧಿಸಿದ ಭಾರತ ತಂಡ ಪ್ರವಾಸಿ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯವನ್ನು 7 ವಿಕೆಟ್​ಗಳಿಂದ ಜಯಿಸಿದೆ. ಭರ್ಜರಿ ಗೆಲುವಿನ ಮೂಲಕ ಹೊಸ ವರ್ಷದಲ್ಲಿ ಶುಭಾರಂಭ ಕಂಡಿತು. ಅದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ.

ಹೋಳ್ಕರ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಶಾರ್ದೂಲ್ (23ಕ್ಕೆ 3) ಮಾರಕ ದಾಳಿಗೆ ನಲುಗಿ 9 ವಿಕೆಟ್​ಗೆ 142 ರನ್ ಕಲೆ ಹಾಕಿತು. ಪ್ರತಿಯಾಗಿ ಈ ಸುಲಭ ಗುರಿ ಬೆನ್ನಟ್ಟಿದ ಭಾರತ ಕನ್ನಡಿಗ ಕೆಎಲ್ ರಾಹುಲ್ (45ರನ್, 32 ಎಸೆತ, 6 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ 17.3 ಓವರ್​ಗಳಲ್ಲಿ 3 ವಿಕೆಟ್​ಗೆ 144 ರನ್​ಗಳಿಸಿ ಜಯದ ನಗೆ ಬೀರಿತು.

ಲಂಕಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ (32ರನ್, 29 ಎಸೆತ, 2 ಬೌಂಡರಿ) ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕ ಗೆಲುವನ್ನು ಸುಲಭವಾಗಿಸಿತು. ಗಾಯದ ಸಮಸ್ಯೆಯಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ತಪ್ಪಿಸಿಕೊಂಡಿದ್ದ ಧವನ್ ಮಂದಗತಿಯಲ್ಲೇ ಆರಂಭ ಪಡೆದರು. ದೆಹಲಿಯ ಅನುಭವಿ ಆಟಗಾರ ಒಂಟಿರನ್​ಗಳಿಗೆ ಒತ್ತು ನೀಡುತ್ತಿದ್ದರೆ, ರಾಹುಲ್ ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದರು. ವಾನಿಂದು ಹಸರಂಗ ಎಸೆತದಲ್ಲಿ ಮುನ್ನುಗ್ಗಿ ಆಡಲು ಯತ್ನಿಸಿದ ರಾಹುಲ್ ವಂಚಿಸಿದ ಚೆಂಡು ನೇರವಾಗಿ ವಿಕೆಟ್​ಗೆ ಬಡಿಯಿತು. ಮೊದಲ ವಿಕೆಟ್​ಗೆ ರಾಹುಲ್-ಧವನ್ ಜೋಡಿ ಎದುರಿಸಿದ 55 ಎಸೆತಗಳಲ್ಲಿ 71 ರನ್ ಕಲೆಹಾಕಿತು. ರಾಹುಲ್ ನಿರ್ಗಮನದ ಕೆಲ ಹೊತ್ತಿನಲ್ಲೇ ಶಿಖರ್ ಧವನ್ ಕೂಡ ವಾನಿಂದು ಹಸರಂಗ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು.-ಪಿಟಿಐ/ಏಜೆನ್ಸೀಸ್

ಕೊಹ್ಲಿ ದಾಖಲೆ

ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್​ಮನ್ ಎನ್ನುವ ದಾಖಲೆಯನ್ನು ಕೊಹ್ಲಿ ಮಾಡಿದರು. ಕೊಹ್ಲಿ 77 ಪಂದ್ಯಗಳಿಂದ 2663 ರನ್ ಬಾರಿಸಿದ್ದಾರೆ. 2633 ರನ್ ಬಾರಿಸಿರುವ ರೋಹಿತ್ ಶರ್ಮ 2ನೇ ಸ್ಥಾನದಲ್ಲಿದ್ದಾರೆ.

ಗೆಲುವಿನ ದಡ ಸೇರಿಸಿದ ಶ್ರೇಯಸ್-ಕೊಹ್ಲಿ

ಆರಂಭಿಕರ ನಿರ್ಗಮನದ ಬಳಿಕ ಜತೆಯಾದ ಶ್ರೇಯಸ್ ಅಯ್ಯರ್ (34ರನ್, 26 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ವಿರಾಟ್ ಕೊಹ್ಲಿ (30*ರನ್, 17 ಎಸೆತ, 1 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು. ರಾಹುಲ್ ಔಟಾದ ಬಳಿಕ ಕೊಹ್ಲಿ ಬದಲಿಗೆ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಶ್ರೇಯಸ್ ಅಯ್ಯರ್ ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದರು. 2ನೇ ವಿಕೆಟ್​ಗೆ ಧವನ್ ಜತೆಗೂಡಿ 15ರನ್ ಜತೆಯಾಟವಾಡಿದ ಶ್ರೇಯಸ್, ಬಳಿಕ ನಾಯಕನಿಂದ ಅಗತ್ಯ ಸಾಥ್ ಪಡೆದರು. ಶ್ರೇಯಸ್-ಕೊಹ್ಲಿ ಜೋಡಿ 3ನೇ ವಿಕೆಟ್​ಗೆ 51 ರನ್ ಪೇರಿಸಿತು. ತಂಡದ ಗೆಲುವಿಗೆ ಕೇವಲ 6 ರನ್ ಬೇಕಿದ್ದ ವೇಳೆ ಶ್ರೇಯಸ್ ಅಯ್ಯರ್ ಲಹಿರು ಕುಮಾರಗೆ ವಿಕೆಟ್ ನೀಡಿದರು. ಅಂತಿಮವಾಗಿ ಕೊಹ್ಲಿ ಹಾಗೂ ರಿಷಭ್ ಪಂತ್ ಗೆಲುವು ತಂದರು. ಇನ್ನು 15 ಎಸೆತಗಳು ಬಾಕಿ ಇರುವಂತೆಯೇ ಭಾರತ ಗೆಲುವಿನ ದಡ ಸೇರಿತು.

ಲಂಕಾ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ

ಟಾಸ್ ಜಯಿಸಿ ಬೌಲಿಂಗ್ ಆಯ್ಕೆ ಮಾಡಿಕೊಂಡ ವಿರಾಟ್ ಕೊಹ್ಲಿ ನಿರ್ಣಯವನ್ನು ಲಂಕಾ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹಾಕುವ ಮೂಲಕ ಭಾರತೀಯ ಬೌಲರ್​ಗಳು ಸಮರ್ಥಿಸಿಕೊಂಡರು. ಆರಂಭಿಕರಾದ ಧನುಷ್ಕಾ ಗುಣತಿಲಕ (20ರನ್, 21 ಎಸೆತ, 3 ಬೌಂಡರಿ) ಹಾಗೂ ಒಶದ ಫೆರ್ನಾಂಡೊ (22ರನ್, 16 ಎಸೆತ, 5 ಬೌಂಡರಿ) ಈ ಜೋಡಿ ಆರಂಭಿಕ ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಪಡೆಯಲು ಯತ್ನಿಸಿತು. ಉತ್ತಮ ಲಯದಲ್ಲಿದ್ದ ಈ ಜೋಡಿಗೆ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಬ್ರೇಕ್ ಹಾಕಿದರು. ಈ ಜೋಡಿ ಎದುರಿಸಿದ 29 ಎಸೆತಗಳಲ್ಲಿ 38 ರನ್ ಪೇರಿಸಿ ಬೇರ್ಪಟ್ಟಿತು. ಸುಂದರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಫೆರ್ನಾಂಡೊ ಮಿಡ್​ಆನ್​ನಲ್ಲಿದ್ದ ನವದೀಪ್ ಸೈನಿಗೆ ಕ್ಯಾಚ್ ನೀಡಿದರು. ಇದರೊಂದಿಗೆ ಲಂಕಾ ಪತನ ಕೂಡ ಆರಂಭ ಕಂಡಿತು. ಬಳಿಕ ಭಾರತೀಯ ಬೌಲರ್​ಗಳು ಹಂತಹಂತವಾಗಿ ಲಂಕಾ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹಾಕಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವಿ ಕುಸಲ್ ಪೆರೇರಾ (34) ಹೊರತುಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳು ಆತಿಥೇಯ ತಂಡದ ಬೌಲರ್​ಗಳು ಕನಿಷ್ಠ ಪ್ರತಿರೋಧ ತೋರಲು ವಿಫಲರಾದರು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (38ಕ್ಕೆ 2) ಹಾಗೂ ವೇಗಿ ನವದೀಪ್ ಶೈನಿ (18ಕ್ಕೆ 2) ಲಂಕಾ ಪತನದಲ್ಲಿ ಪ್ರಮುಖ ಪಾತ್ರವಹಿಸಿದರು. ಮಧ್ಯಮ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಇನಿಂಗ್ಸ್​ನ 19ನೇ ಓವರ್​ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಗಮನಸೆಳೆದರು. ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಧನಂಜಯ್ ಡಿ ಸಿಲ್ವಾ (17) 2ನೇ ಎಸೆತದಲ್ಲಿ ಮಿಡ್​ಆಫ್​ನಲ್ಲಿದ್ದ ಶಿವಂ ದುಬೆಗೆ ಕ್ಯಾಚ್ ನೀಡಿದರೆ, 5ನೇ ಹಾಗೂ 6ನೇ ಎಸೆತದಲ್ಲಿ ಕ್ರಮವಾಗಿ ಇಸುರು ಉದಾನ (1) ಹಾಗೂ ನಾಯಕ ಲಸಿತ್ ಮಾಲಿಂಗ (0) ವಿಕೆಟ್ ಕಬಳಿಸಿದರು. ಇದರೊಂದಿಗೆ ಓವರ್ ಹ್ಯಾಟ್ರಿಕ್ ಅವಕಾಶ ಉಳಿಸಿಕೊಂಡರು.

ಶ್ರೀಲಂಕಾ: ವಿಕೆಟ್​ಗೆ 142

ಧನುಷ್ಕ ಗುಣತಿಲಕ ಬಿ ಸೈನಿ 20

ಆವಿಷ್ಕ ಫೆರ್ನಾಂಡೋ ಸಿ ಸೈನಿ ಬಿ ವಾಷಿಂಗ್ಟನ್ 22

ಕುಸಲ್ ಪೆರೇರಾ ಸಿ ಧವನ್ ಬಿ ಕುಲದೀಪ್ 34

ಒಶದ ಫೆರ್ನಾಂಡೊ ಸ್ಟಂಪ್ಡ್ ಪಂತ್ ಬಿ ಕುಲದೀಪ್ 10

ಭಾನುಕ ರಾಜಪಕ್ಷ ಸಿ ಪಂತ್ ಬಿ ಸೈನಿ 9

ದಸುನ್ ಶನಕ ಬಿ ಬುಮ್ರಾ 7

ಧನಂಜಯ ಡಿ ಸಿಲ್ವಾ ಸಿ ದುಬೆ ಬಿ ಶಾರ್ದೂಲ್ 17

ವಾನಿಂದು ಹಸರಂಗ ಔಟಾಗದೆ 16

ಇಸುರು ಉದಾನ ಸಿ ಸೈನಿ ಬಿ ಶಾರ್ದೂಲ್ 1

ಲಸಿತ್ ಮಾಲಿಂಗ ಸಿ ಕುಲದೀಪ್ ಬಿ ಶಾರ್ದೂಲ್ 0

ಲಹಿರು ಕುಮಾರ ಔಟಾಗದೆ 0

ಇತರ: 6. ವಿಕೆಟ್ ಪತನ: 1-38, 2-54, 3-82, 4-97, 5-104, 6-117, 7-128, 8-130, 9-130. ಬೌಲಿಂಗ್: ಜಸ್​ಪ್ರೀತ್ ಬುಮ್ರಾ 4-0-32-1, ಶಾರ್ದೂಲ್ ಠಾಕೂರ್ 4-0-23-3, ನವದೀಪ್ ಸೈನಿ 4-0-18-2, ವಾಷಿಂಗ್ಟನ್ ಸುಂದರ್ 4-0-29-1, ಕುಲದೀಪ್ ಯಾದವ್ 4-0-38-2.

ಭಾರತ: 17.3 ಓವರ್​ಗಳಲ್ಲಿ

3 ವಿಕೆಟ್​ಗೆ 144

ಕೆಎಲ್ ರಾಹುಲ್ ಬಿ ಹಸರಂಗ 45

ಶಿಖರ್ ಧವನ್ ಎಲ್​ಬಿಡಬ್ಲ್ಯು ಬಿ ಹಸರಂಗ 32

ಶ್ರೇಯಸ್ ಅಯ್ಯರ್ ಸಿ ಶನಕ ಬಿ ಲಹಿರು 34

ವಿರಾಟ್ ಕೊಹ್ಲಿ ಔಟಾಗದೆ 30

ರಿಷಭ್ ಪಂತ್ ಔಟಾಗದೆ 1

ಇತರ: 2. ವಿಕೆಟ್ ಪತನ: 1-71, 2-86, 3-137. ಬೌಲಿಂಗ್: ಲಸಿತ್ ಮಾಲಿಂಗ 4-0-41-0, ಲಹಿರು ಕುಮಾರ 3.2-0-30-1, ಧನಂಜಯ 2-0-15-0, ದಸುನ್ ಶನಕ 4-0-26-0, ಹಸರಂಗ 4-0-30-2.

ಪಂದ್ಯಶ್ರೇಷ್ಠ: ನವದೀಪ್ ಸೈನಿ

ಅಂತಿಮ ಟಿ20 ಪಂದ್ಯ

ಯಾವಾಗ: ಜನವರಿ 10, ಶುಕ್ರವಾರ

ಎಲ್ಲಿ: ಪುಣೆ ಆರಂಭ: ರಾ.7ಕ್ಕೆ

ಜಸ್​ಪ್ರೀತ್ ಬುಮ್ರಾ ಕಮ್ ಬ್ಯಾಕ್​

ಬೆನ್ನು ನೋವಿಗೆ ತುತ್ತಾಗಿ ಕಳೆದ ನಾಲ್ಕು ತಿಂಗಳು ತಂಡದಿಂದ ಹೊರಗಿದ್ದ ಜಸ್​ಪ್ರೀತ್ ಬುಮ್ರಾ ಆಡಿದ ಮೊದಲ ಪಂದ್ಯದಲ್ಲೇ ಕೊಂಚ ದುಬಾರಿಯಾದರು. ಬುಮ್ರಾ ಎಸೆದ ಇನಿಂಗ್ಸ್​ನ ಕೊನೇ ಓವರ್​ನ ಕಡೇ ಮೂರು ಎಸೆತಗಳನ್ನು ವಾನಿಂದು ಹಸರಂಗ ಬೌಂಡರಿಗಟ್ಟಿದರು. 4 ಓವರ್ ಎಸೆದ ಬುಮ್ರಾ 32 ರನ್ ನೀಡಿ 1 ವಿಕೆಟ್ ಪಡೆದರು. ದುಬಾರಿ ನಡುವೆಯೂ ಎಂದಿನ ಯಾರ್ಕರ್ ಎಸೆತಗಳಿಂದ ಗಮನಸೆಳೆದರು.

ಜಸ್​ಪ್ರೀತ್ ಬುಮ್ರಾ, ಟಿ20 ಕ್ರಿಕೆಟ್​ನಲ್ಲಿ 52 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್ ಕಬಳಿಸಿದ ಭಾರತೀಯ ಬೌಲರ್​ಗಳ ಪೈಕಿ ಜಂಟಿ ಅಗ್ರಸ್ಥಾನ ಪಡೆದರು. ಆರ್.ಅಶ್ವಿನ್, ಯಜುವೇಂದ್ರ ಚಾಹಲ್ ಜತೆಗೂಡಿ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಜತೆಗೆ ಅತಿಹೆಚ್ಚು ವಿಕೆಟ್ ಪಡೆದ ಭಾರತೀಯ ವೇಗಿ ಎನಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net