

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ನಾಲ್ಕನೇ ಆವೃತ್ತಿಯ ತವರಿನ ಋತುವಿನಲ್ಲಿ ಗೆಲುವಿನ ಆರಂಭ ಕಂಡಿರುವ ಭಾರತ ತಂಡ, ಸರಣಿ ಕ್ಲೀನ್ಸ್ವೀಪ್ನೊಂದಿಗೆ ಪೂರ್ಣ ಅಂಕ ಕಲೆಹಾಕುವ ಗುರಿ ಹೊಂದಿದೆ. ಶುಭಮಾನ್ ಗಿಲ್ ಬಳಗ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯಲಿದೆ. ಏಕದಿನ ನಾಯಕತ್ವವೂ ಸಿಕ್ಕ ಬಳಿಕ ಶುಭಮಾನ್ ಗಿಲ್ ಆಡಲಿರುವ ಮೊದಲ ಪಂದ್ಯವೂ ಇದಾಗಿದೆ.
ಟೀಮ್ನ್ಯೂಸ್
ಭಾರತ: ಅಭ್ಯಾಸ ಶಿಬಿರದಲ್ಲಿ ಯಾವುದೇ ಆಟಗಾರ ಗಾಯದ ಸಮಸ್ಯೆ ಎದುರಿಸಿಲ್ಲ. ಇದರಿಂದ ಗೆಲುವಿನ ಹನ್ನೊಂದರ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಕಳೆದ ಏಳು ಇನಿಂಗ್ಸ್ಗಳಲ್ಲಿ 147 ರನ್ಗಳಿಸಿರುವ ಸುದರ್ಶನ್ ಬದಲಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಆದರೆ ಕೊಹ್ಲಿ ನಿವೃತ್ತಿ ನಂತರ ತೆರವಾಗಿರುವ 4ನೇ ಕ್ರಮಾಂಕವನ್ನು ಗಿಲ್ ಸಮರ್ಥವಾಗಿ ನಿಭಾಯಿಸಿದ್ದು, ಗಿಲ್ ಹಿಂಬಡ್ತಿಯಿಂದ ತೆರವಾಗಿರುವ 3ನೇ ಕ್ರಮಾಂಕದ ಸ್ಥಾನಕ್ಕೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ಬಯಸಿರುವುದು ಸುದರ್ಶನ್ಗೆ ವರದಾನವಾಗಲಿದೆ.
ವೆಸ್ಟ್ ಇಂಡೀಸ್: ಮೊದಲ ಪಂದ್ಯದ ಎರಡು ಇನಿಂಗ್ಸ್ಗಳಲ್ಲಿ ಒಟ್ಟಾರೆ 90 ಓವರ್ ಸಹ ಬ್ಯಾಟಿಂಗ್ ನಡೆಸದ ವಿಂಡೀಸ್, ಭಾರತ ಎರಡೂ ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಆಡುವಂತೆ ಮಾಡಿದರೆ ದೊಡ್ಡ ವಿಷಯ. ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯಿಲ್ಲ. ಎಡಗೈ ವೇಗಿ ಜೆಡಿಯಾ ಬ್ಲೇಡ್ಸ್ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಪಿಚ್ ರಿಪೋರ್ಟ್
ಮೊದಲ ಟೆಸ್ಟ್ ಕೇವಲ ಎರಡೂವರೆ ದಿನಗಳಲ್ಲಿಯೇ ಮುಕ್ತಾಯ ಕಂಡಿತ್ತು. ಆದರೆ ಅರುಣ್ ಜೇಟ್ಲಿ ಕ್ರೀಡಾಂಗಣದ ಕಪ್ಪು ಮಣ್ಣಿನ ಪಿಚ್ ಭಾರತ ವಿಶಿಷ್ಟ ಟ್ರ್ಯಾಕ್ಗಲ್ಲಿ ಒಂದಾಗಿದ್ದು, ಮೊದಲ ಎರಡು ದಿನ ಬ್ಯಾಟಿಂಗ್ ನೆರವಾಗುವ ಸಾಧ್ಯತೆಗಳಿವೆ. ಮೂರನೇ ದಿನ ಪಿಚ್ನಲ್ಲಿ ಕೆಲ ಬಿರುಕು ಕಾಣಿಸಿಕೊಳ್ಳಲಿದ್ದು, ಸ್ಪಿನ್ನರ್ಗಳಿಗೆ ಹೆಚ್ಚು ಸಹಾಯಕವಾಗಲಿದೆ. ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಭಾರಿ ಮಳೆಯಾಗಿದ್ದು, ಪಂದ್ಯದಲ್ಲಿ ಪರಿಣಾಮ ಕಡಿಮೆ ಎನ್ನಲಾಗಿದೆ.
ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್ಸ್ಟಾರ್
12. ಭಾರತ ತಂಡ ದೆಹಲಿಯಲ್ಲಿ 1987ರಲ್ಲಿ ಕೊನೆಯದಾಗಿ ಟೆಸ್ಟ್ನಲ್ಲಿ ಸೋಲು ಕಂಡಿತ್ತು. ವಿಂಡೀಸ್ ಎದುರೇ ಈ ಸೋಲು ಬಂದಿತ್ತು. ನಂತರ ಆಡಿದ 13 ಟೆಸ್ಟ್ಗಳಲ್ಲಿ ಭಾರತ ತಲಾ 11-2 ಗೆಲುವು-ಡ್ರಾ ಲಿತಾಂಶ ಕಂಡಿದೆ.
10. ರವೀಂದ್ರ ಜಡೇಜಾ ಇನ್ನು 10 ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್ನಲ್ಲಿ 4 ಸಾವಿರ ಅಥವಾ ಅದಕ್ಕಿಂತ ಹೆಚ್ಚು ರನ್ ಹಾಗೂ 300 ಪ್ಲಸ್ ವಿಕೆಟ್ ಪಡೆದ ವಿಶ್ವದ 4ನೇ ಆಟಗಾರ ಎನಿಸಲಿದ್ದಾರೆ. ಇಯಾನ್ ಬೋಥಮ್, ಕಪಿಲ್ ದೇವ್, ಡೇನಿಯಲ್ ವೆಟ್ಟೋರಿ ಮೊದಲ ಮೂವರು.
2002: ವೆಸ್ಟ್ ಇಂಡೀಸ್ ತಂಡ 2002ರಲ್ಲಿ ಕೊನೆಯದಾಗಿ ಭಾರತ ತಂಡವನ್ನು ಟೆಸ್ಟ್ನಲ್ಲಿ ಮಣಿಸಿತ್ತು. ನಂತರ ಆಡಿದ 9 ಸರಣಿಗಳಲ್ಲಿ (26 ಪಂದ್ಯ) ಸೋಲು ಕಂಡಿದೆ.