ಟೀಮ್ ಇಂಡಿಯಾ ಕಠಿಣ ಅಭ್ಯಾಸ

teem india
Published on

ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಬಹುಮುಖ್ಯ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬುಧವಾರ ಟೀಮ್ ಇಂಡಿಯಾ ಕಠಿಣ ಅಭ್ಯಾಸ ನಡೆಸಿತು. ಅಭ್ಯಾಸದ ನಡುವೆ ಸುದ್ದಿಗೋಷ್ಠಿಗೆ ಆಗಮಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಶುಕ್ರವಾರ ಆರಂಭವಾಗಲಿರುವ ವೆಲ್ಲಿಂಗ್ಟನ್ ಟೆಸ್ಟ್​ನಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮ ಹಾಗೂ ಯುವ ಆರಂಭಿಕ ಆಟಗಾರ ಪೃಥ್ವಿ ಷಾ ಆಡುವ ಬಳಗದಲ್ಲಿ ಇರುವ ಸೂಚನೆ ನೀಡಿದ್ದಾರೆ.

ಅಭ್ಯಾಸ ಅವಧಿಯನ್ನು ಪರಿಗಣನೆ ಮಾಡುವುದಾದರೆ, ವಿಕೆಟ್ ಕೀಪರ್ ಆಗಿ ವೃದ್ಧಿಮಾನ್ ಸಾಹ ಮುಂದುವರಿಯುವ ಸಾಧ್ಯತೆ ಇದೆ. ಪ್ರವಾಸದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ನಂ.6 ಬ್ಯಾಟ್ಸ್​ಮನ್ ಆಗಿರುವ ಹನುಮ ವಿಹಾರಿ ಐದನೇ ಬೌಲರ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಮೊಹಮದ್ ಶಮಿ, ಇಶಾಂತ್ ಶರ್ಮ ಹಾಗೂ ಜಸ್​ಪ್ರೀತ್ ಬುಮ್ರಾ ವೇಗಿಗಳಾಗಿ ಕಣಕ್ಕಿಳಿಯಲಿದ್ದರೆ, ಸ್ಪಿನ್ ಬೌಲಿಂಗ್​ನ ಜವಾಬ್ದಾರಿಯನ್ನು ಅಶ್ವಿನ್ ನಿರ್ವಹಿಸಲಿದ್ದಾರೆ.

‘ಪೃಥ್ವಿ ಪ್ರತಿಭಾವಂತ ಆಟಗಾರ. ತಮ್ಮ ಎಂದಿನ ಸ್ಪೋಟಕ ಆಟವನ್ನು ಅವರು ಆಡಬೇಕು ಎಂದು ನಾವು ಬಯಸುತ್ತೇವೆ. ಯಾವುದೇ ಒತ್ತಡವಿಲ್ಲದೆ ಆಟವಾಡುವ ಅವಕಾಶ ಇವರಿಗಿದೆ. 2018-19ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಮಯಾಂಕ್ ಅಗರ್ವಾಲ್ ಗಮನಸೆಳೆಯುವ ಆಟವಾಡಿದ್ದರು. ಅದೇ ರೀತಿಯ ಆಟ ಪೃಥ್ವಿಯಿಂದ ನ್ಯೂಜಿಲೆಂಡ್​ನಲ್ಲಿ ಬರುವ ಸಾಧ್ಯತೆ ಇದೆ’ ಎಂದು ಕೊಹ್ಲಿ ಹೇಳಿದ್ದಾರೆ.

ಎಲ್ಲ ಮಾದರಿಯಲ್ಲೂ ಆಡುತ್ತೇನೆ: ವರ್ಕ್​ಲೋಡ್ ನಿಭಾಯಿಸುವ ಕುರಿತಾಗಿ ಚರ್ಚೆಗಳಿದ್ದರೂ ಮುಂದಿನ ಮೂರೂ ವರ್ಷ ಎಲ್ಲ ಮೂರೂ ಮಾದರಿಯ ಕ್ರಿಕೆಟ್​ನಲ್ಲೂ ಆಡುವುದನ್ನು ಮುಂದುವರಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಈ ಮೂರು ವರ್ಷದ ಅವಧಿಯಲ್ಲಿ ಎರಡು ಟಿ20 ವಿಶ್ವಕಪ್ ಹಾಗೂ ಒಂದು ಏಕದಿನ ವಿಶ್ವಕಪ್ ನಡೆಯಲಿದೆ. ಅದರ ಬಳಿಕ ಯಾವುದಾದರೂ ಎರಡು ಮಾದರಿಯಲ್ಲಿ ಆಡುವ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net