ಇಂದಿನಿಂದ ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್: ಕ್ಲೀನ್‌ಸ್ವೀಪ್‌ನತ್ತ ಶುಭಮಾನ್ ಗಿಲ್ ಪಡೆ ಚಿತ್ತ

New Project (2) (1)
Published on

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ನಾಲ್ಕನೇ ಆವೃತ್ತಿಯ ತವರಿನ ಋತುವಿನಲ್ಲಿ ಗೆಲುವಿನ ಆರಂಭ ಕಂಡಿರುವ ಭಾರತ ತಂಡ, ಸರಣಿ ಕ್ಲೀನ್‌ಸ್ವೀಪ್‌ನೊಂದಿಗೆ ಪೂರ್ಣ ಅಂಕ ಕಲೆಹಾಕುವ ಗುರಿ ಹೊಂದಿದೆ. ಶುಭಮಾನ್ ಗಿಲ್ ಬಳಗ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯಲಿದೆ. ಏಕದಿನ ನಾಯಕತ್ವವೂ ಸಿಕ್ಕ ಬಳಿಕ ಶುಭಮಾನ್ ಗಿಲ್ ಆಡಲಿರುವ ಮೊದಲ ಪಂದ್ಯವೂ ಇದಾಗಿದೆ.

ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಹಾಗೂ 140 ರನ್‌ಗಳ ಗೆಲುವಿನ ಬಳಿಕ ತವರಿನಲ್ಲಿ ಪ್ರಾಬಲ್ಯವನ್ನು ಮರುಸ್ಥಾಪಿಸುವತ್ತ ಸಾಗಿರುವ ಶುಭಮಾನ್ ಗಿಲ್ ಪಡೆ, ಅಹಮದಬಾದ್ ಟೆಸ್ಟ್ ಲಿತಾಂಶವನ್ನು ಪುನರಾವರ್ತಿಸುವ ತವಕದಲ್ಲಿದೆ. ವಿಂಡೀಸ್‌ನ ವೈಭವದ ದಿನಗಳನ್ನು ಮರಳಿ ತರಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೊಸ ಯೋಜನೆ ರೂಪಿಸಿದೆ. ಆ ಮಿಷನ್‌ನ ಅಡಿಯಲ್ಲಿ ದಿಗ್ಗಜರಾದ ವಿವಿ ರಿಚರ್ಡ್ಸ್, ಬ್ರಿಯಾನ್ ಲಾರಾ ಹಾಗೂ ರಿಚಿ ರಿಚರ್ಡ್ಸ್‌ನ್ ಅವರಂಥ ತಾರೆಯರು ಎರಡನೇ ಟೆಸ್ಟ್‌ಗೂ ಮುನ್ನ ವಿಂಡೀಸ್ ಆಟಗಾರರೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಿಂದ ರೋಸ್ಟನ್ ಚೇಸ್ ಬಳಗದಿಂದ ಸ್ಪರ್ಧಾತ್ಮಕ ಆಟದ ನಿರೀಕ್ಷೆ ಇದೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯ ಪ್ರದರ್ಶನ ವಿಂಡೀಸ್ ಮಂಡಳಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ ಎನ್ನಲಾಗಿದೆ. ಅಹಮದಾಬಾದ್‌ನಲ್ಲಿ ವಿಂಡೀಸ್‌ನ ಯಾವೊಬ್ಬ ಬ್ಯಾಟರ್ ಸಹ ಕನಿಷ್ಠ 40 ರನ್ ದಾಟಲಿಲ್ಲ. ಜತೆಗೆ ದೀರ್ಘ ಇನಿಂಗ್ಸ್ ಆಡುವ ಕಾರ್ಯತಂತ್ರದ ಲಕ್ಷಣವೂ ಇರಲಿಲ್ಲ. ಆದ್ದರಿಂದ ಭಾರತ ತಂಡವೇ ಮತ್ತೊಮ್ಮೆ ಫೇವರಿಟ್ ಆಗಿ ಕಣಕ್ಕಿಳಿಯಲಿದೆ. ಹಾಲಿ ತಂಡದ ಕೋಚ್ ಡರೇನ್ ಸ್ಯಾಮ್ಮಿ ಜನಿಸಿದ ವರ್ಷ ಅಂದರೆ, 1983ರಲ್ಲಿ ವಿಂಡೀಸ್ ಕೊನೆಯದಾಗಿ ಭಾರತದಲ್ಲಿ ಸರಣಿ ಜಯಿಸಿತ್ತು. ಆದರೆ ಈಗ ಕೇವಲ ಸಮಬಲ ಸಾಧಿಸುವ ಅವಕಾಶ ಮಾತ್ರ ಹೊಂದಿದೆ.

ಫಾರ್ಮ್‌ನಲ್ಲಿ ಆತಿಥೇಯರು

ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಹೊರತುಪಡಿಸಿ ಪೂರ್ಣ ಸಾಮರ್ಥ್ಯ ಹೊಂದಿರುವ ಭಾರತ ತಂಡ ಸದ್ಯ ಭರ್ಜರಿ ಫಾರ್ಮ್‌ನಲ್ಲಿದೆ. ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಉತ್ತಮ ಲಯದಲ್ಲಿದ್ದು, ರಾಹುಲ್ ತನ್ನ ಕೊನೆಯ ಆರು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕ ಗಳಿಸಿ ಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದ ಬಳಿಕ ಶುಭಮಾನ್ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್‌ಗಳಿಸಿರುವ ಬ್ಯಾಟರ್ ಎನಿಸಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶದಲ್ಲಿ ಧ್ರುವ ಜುರೆಲ್ ಬ್ಯಾಟಿಂಗ್ ಸಾಮರ್ಥ್ಯ ಅನಾವರಣಗೊಳಿಸಿದ್ದಾರೆ.

ರವೀಂದ್ರ ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ದೆಹಲಿಯ ನಿಧಾನಗತಿಯ ಪಿಚ್‌ನಲ್ಲಿ ಮಧ್ಯಮ ವೇಗದ ಬೌಲಿಂಗ್ ಆಲ್ರೌಂಡರ್‌ಗಳು ನಿರ್ಣಾಯಕ ಪಾತ್ರವಹಿಸಲಿದ್ದು, ನಿತೀಶ್ ಕುಮಾರ್ ರೆಡ್ಡಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಸಿಕ್ಕರೂ ಅಚ್ಚರಿ ಇಲ್ಲ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಹಾರ್ದಿಕ್‌ಗೆ ಸರಿಸಮನಾಗಿ ನಿತೀಶ್ ರೆಡ್ಡಿರನ್ನು ಸಜ್ಜುಗೊಳಿಸುವ ಪ್ರಯತ್ನವೂ ಇದಾಗಿರಲಿದೆ. ಮೊದಲ ಟೆಸ್ಟ್‌ನಲ್ಲಿ ಕೇವಲ 4 ಓವರ್ ಬೌಲಿಂಗ್ ನಡೆಸಿದ್ದ ನಿತೀಶ್‌ಗೆ ಬ್ಯಾಟಿಂಗ್‌ಗೆ ಅವಕಾಶವೇ ದೊರೆತಿರಲಿಲ್ಲ.

ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net