ಪ್ರವಾಸಿ ಬಾಂಗ್ಲಾದೇಶ ತಂಡಕ್ಕೆ ರೆಡ್​ ಪಿಚ್​ ಖೆಡ್ಡಾ ಸಿದ್ಧಪಡಿಸಿದೆ ಟೀಮ್​ ಇಂಡಿಯಾ!

web BAN
Published on

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್​ 19ರಿಂದ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯಕ್ಕೆ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕೆಂಪು ಮಣ್ಣಿನ ಪಿಚ್​ ಸಿದ್ಧಪಡಿಸಲಾಗುತ್ತಿದೆ. ಈ ಮೂಲಕ ಆತಿಥೇಯ ಭಾರತ ತಂಡದ ಮೇಲುಗೈಗೆ ಅನುಕೂಲಕರ ಎನಿಸುವಂಥ ಪಿಚ್​ ನಿರ್ಮಿಸಲಾಗುತ್ತಿದೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ 2-0 ಅಂತರದಿಂದ ಗೆದ್ದು ಬೀಗಿರುವ ಬಾಂಗ್ಲಾದೇಶ ತಂಡ ಆತ್ಮವಿಶ್ವಾಸದಿಂದ ಭಾರತಕ್ಕೆ ಆಗಮಿಸುತ್ತಿದೆ. ಆದರೆ ಬಾಂಗ್ಲಾ ತಂಡ ತವರಿನಲ್ಲಿ ಕಪ್ಪು ಮಣ್ಣಿನ ಪಿಚ್​ನಲ್ಲಿ ಹೆಚ್ಚು ಆಡಿದ ಅನುಭವ ಹೊಂದಿದೆ. ಹೀಗಾಗಿ ಕೆಂಪು ಮಣ್ಣಿನ ಪಿಚ್​ಗೆ ಹೊಂದಿಕೊಳ್ಳುವುದು ಬಾಂಗ್ಲಾ ಪಾಲಿಗೆ ಸವಾಲೆನಿಸಲಿದೆ. ಮೊದಲ ಟೆಸ್ಟ್​ ಪಂದ್ಯಕ್ಕೆ ಇನ್ನೂ 5 ದಿನ ಬಾಕಿ ಇದ್ದು, ಸದ್ಯಕ್ಕೆ ಪಿಚ್​ ಹಸಿರು ಹುಲ್ಲಿನಿಂದ ಮುಚ್ಚಿದಂತಿದೆ. ಪಿಚ್​ಅನ್ನು ಬಿಸಿಲಿಗೆ ತೆರೆದಿಟ್ಟರೆ ಬಿರುಕು ಮೂಡುವ ಭೀತಿ ಇದಕ್ಕೆ ಕಾರಣವಾಗಿದ್ದು, ಪಂದ್ಯದ ದಿನ ಸಮೀಪಿಸುತ್ತಿದ್ದಂತೆ ಹುಲ್ಲು ಕತ್ತರಿಸಲಾಗುವುದು ಎನ್ನಲಾಗಿದೆ.

ಕಪು$್ಪ ಮಣ್ಣಿನ ಪಿಚ್​ ಮೊದಲ ದಿನದಿಂದಲೇ ಸ್ಪಿನ್​ ಸ್ನೇಹಿಯಾಗಿ ವರ್ತಿಸಿದರೆ, ಕೆಂಪು ಮಣ್ಣಿನ ಪಿಚ್​ ಮೊದಲಿಗೆ ವೇಗದ ಬೌಲರ್​ಗಳಿಗೆ ಹೆಚ್ಚಿನ ನೆರವು ಒದಗಿಸುತ್ತದೆ. ಕೆಂಪು ಮಣ್ಣಿನಲ್ಲಿ ಕಡಿಮೆ ಆವೆ ಅಂಶ ಇರುವುದರಿಂದ ಆರಂಭಿಕ ದಿನಗಳಲ್ಲಿ ಹೆಚ್ಚಿನ ಬೌನ್ಸ್​ ಲಭಿಸುತ್ತದೆ ಮತ್ತು ವೇಗಿಗಳು ಮೇಲುಗೈ ಸಾಧಿಸಬಹುದು. ನಂತರ ಪಿಚ್​ನಲ್ಲಿ ಬಿರುಕು ಕಾಣಿಸಿಕೊಂಡ ಬಳಿಕವಷ್ಟೇ ಸ್ಪಿನ್ನರ್​ಗಳಿಗೆ ಪಿಚ್​ ನೆರವಾಗುತ್ತದೆ.

ಬಾಂಗ್ಲಾದೇಶ ತಂಡ 2019ರಲ್ಲಿ ಭಾರತ ಪ್ರವಾಸ ಕೈಗೊಂಡಾಗಲೂ ಇಂದೋರ್​, ಕೋಲ್ಕತದಲ್ಲಿ ವೇಗದ ಬೌಲರ್​ಗಳಿಗೆ ನೆರವಾಗುವಂಥ ಪಿಚ್​ ನಿರ್ಮಿಸಲಾಗಿತ್ತು. ಆಗ 2 ಪಂದ್ಯಗಳಲ್ಲಿ ಉರುಳಿದ ಬಾಂಗ್ಲಾದ ಒಟ್ಟು 40 ವಿಕೆಟ್​ಗಳಲ್ಲಿ 5 ವಿಕೆಟ್​ಗಳಷ್ಟೇ ಸ್ಪಿನ್ನರ್​ಗಳ ಪಾಲಾಗಿದ್ದವು. ಹೀಗಾಗಿ ಭಾರತ ಈ ಸಲವೂ ಅದೇ ಕಾರ್ಯತಂತ್ರ ಮುಂದುವರಿಸುವ ನಿರೀಕ್ಷೆ ಇದೆ.

ಅಲ್ಲದೆ ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದ ಹಿನ್ನೆಲೆಯಲ್ಲೂ ಭಾರತ ವೇಗದ ಬೌಲರ್​ಗಳ ಸಿದ್ಧತೆಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​, ಆಕಾಶ್​ದೀಪ್​, ಯಶ್​ ದಯಾಳ್​ ಒಳಗೊಂಡ ವೇಗದ ಬೌಲಿಂಗ್​ ಪಡೆ ಬಾರ್ಡರ್​&ಗಾವಸ್ಕರ್​ ಟ್ರೋಫಿಯ 5 ಪಂದ್ಯಗಳ ಸರಣಿಗೆ ಈ ಅವಕಾಶವನ್ನು ಬಳಸಿಕೊಳ್ಳಲಿದೆ. ಹೊಸ ವೇಗದ ಬೌಲಿಂಗ್​ ಕೋಚ್​ ಮಾರ್ನ್​ ಮಾರ್ಕೆಲ್​ ಮಾರ್ಗದರ್ಶನವೂ ತಂಡಕ್ಕೆ ನೆರವಾಗಲಿದೆ.

ಎಡಗೈ ಸ್ಪಿನ್ನರ್​ಗಳ ಎದುರಿಸಲು ಸಿದ್ಧತೆ

ಭಾರತ ತಂಡ ಬಾಂಗ್ಲಾವನ್ನು ಎದುರಿಸಲು ವೇಗದ ಬೌಲಿಂಗ್​ ಸ್ನೇಹಿ ಪಿಚ್​ ನಿರ್ಮಿಸುತ್ತಿರುವ ನಡುವೆ ತನ್ನ ಪೂರ್ವಸಿದ್ಧತಾ ಶಿಬಿರದಲ್ಲಿ ಕಪು$್ಪ ಮಣ್ಣಿನ ಪಿಚ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದೆ. ಸ್ಪಿನ್ನರ್​ಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬೇಕಾಗಿರುವುದು ಇದಕ್ಕೆ ಕಾರಣ. ಬಾಂಗ್ಲಾ ತಂಡ ಶಕೀಬ್​ ಅಲ್​ ಹಸನ್​, ತೈಜುಲ್​ ಇಸ್ಲಾಂರಂಥ ಪ್ರಮುಖ ಎಡಗೈ ಸ್ಪಿನ್ನರ್​ಗಳನ್ನು ಹೊಂದಿದ್ದರೆ, ನಂತರದ ಸರಣಿಯಲ್ಲಿ ಎದುರಾಗಲಿರುವ ನ್ಯೂಜಿಲೆಂಡ್​ ತಂಡವೂ ಅಜಾಜ್​ ಪಟೇಲ್​, ಮಿಚೆಲ್​ ಸ್ಯಾಂಟ್ನರ್​, ರಚಿನ್​ ರವೀಂದ್ರರಂಥ ಸ್ಪಿನ್ನರ್​ಗಳನ್ನು ಹೊಂದಿದೆ. ಹೀಗಾಗಿ ಭಾರತ ತಂಡ ತನ್ನ ಎಡಗೈ ಸ್ಪಿನ್ನರ್​ಗಳಾದ ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​ ಜತೆಗೆ ತಮಿಳುನಾಡಿನ ಅಜಿತ್​ ರಾಮ್​, ಎಂ. ಸಿದ್ಧಾರ್ಥ್​, ಪಿ. ವಿಘ್ನೇಶ್​ರಂಥ ಎಡಗೈ ಸ್ಪಿನ್ನರ್​ಗಳನ್ನು ನೆಟ್ಸ್​ನಲ್ಲಿ ಎದುರಿಸುತ್ತಿದೆ. ಇನ್ನು ಆ್​ ಸ್ಪಿನ್​ ಬೌಲಿಂಗ್​ನಲ್ಲಿ ಅಶ್ವಿನ್​ ಜತೆಗೆ ಅವರಂತೆ ಬೌಲಿಂಗ್​ ಮಾಡುವ ಮುಂಬೈನ ಹಿಮಾಂಶು ಸಿಂಗ್​ ಮತ್ತು ತಮಿಳುನಾಡಿನ ಲಕ್ಷ$್ಯ ಜೈನ್​ ಕೂಡ ನೆಟ್ಸ್​ನಲ್ಲಿ ನೆರವಾಗುತ್ತಿದ್ದಾರೆ. ಭಾರತೀಯ ಬ್ಯಾಟರ್​ಗಳು ಸ್ಪಿನ್ನರ್​ಗಳ ಎದುರು ಕಾಲನ್ನು ಸಮರ್ಥವಾಗಿ ಬಳಸಿ ಸ್ವೀಪ್​, ರಿವರ್ಸ್​ ಸ್ವೀಪ್​ ಹೊಡೆತಗಳನ್ನು ಬಾರಿಸಲು ಅಭ್ಯಾಸ ನಡೆಸುತ್ತಿದ್ದಾರೆ.

ನಹಿದ್​ ಎದುರಿಸಲು ತಂತ್ರ

ಬಾಂಗ್ಲಾದ 6.3 ಅಡಿ ಎತ್ತರದ ಯುವ ವೇಗಿ ನಹಿದ್​ ರಾಣಾ ಇತ್ತೀಚೆಗೆ ರಾವಲ್ಪಿಂಡಿ ಟೆಸ್ಟ್​ನಲ್ಲಿ 5 ವಿಕೆಟ್​ ಕಬಳಿಸಿ ಆತಿಥೇಯ ಪಾಕಿಸ್ತಾನ ತಂಡವನ್ನು ಕಂಗೆಡಿಸಿದ್ದರು. ಹೀಗಾಗಿ ಭಾರತ ತಂಡವೂ ನಹಿದ್​ರನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಪಂಜಾಬ್​ನ 6.45 ಅಡಿ ಎತ್ತರದ ವೇಗಿ ಗುರ್​ನೂರ್​ ಬ್ರಾರ್​ ಎದುರು ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದೆ. ಕೇವಲ 5 ಪ್ರಥಮ ದರ್ಜೆ ಪಂದ್ಯವನ್ನಷ್ಟೇ ಆಡಿರುವ 24 ವರ್ಷದ ಗುರ್​ನೂರ್​, ಕಳೆದ ಐಪಿಎಲ್​ ವೇಳೆ ಪಂಜಾಬ್​ ಕಿಂಗ್ಸ್​ ತಂಡದಲ್ಲಿದ್ದರು. ತನ್ನ ಎತ್ತರದಿಂದಾಗಿ ಹೆಚ್ಚಿನ ಬೌನ್ಸ್​ ದಾಳಿ ನಡೆಸುವ ಅವರ ಸಾಮರ್ಥ್ಯ, ನಹಿದ್​ ದಾಳಿಯನ್ನೂ ಎದುರಿಸಲು ನೆರವಾಗಲಿದೆ.

ಇಂದು ಬಾಂಗ್ಲಾ ಆಗಮನ

ಬಾಂಗ್ಲಾದೇಶ ತಂಡ ಭಾನುವಾರ ಚೆನ್ನೆ$ಗೆ ಆಗಮಿಸಲಾಗಿದೆ. ಹಿಂದುಗಳ ಮೇಲಿನ ದಾಳಿಯ ನಂತರ ಬಾಂಗ್ಲಾದ ವಿರುದ್ಧ ಭಾರತದಲ್ಲಿ ಹೆಚ್ಚಿನ ಆಕ್ರೋಶವಿದೆ. ಹೀಗಾಗಿ ಬಾಂಗ್ಲಾ ತಂಡಕ್ಕೆ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ತಂಡಕ್ಕೆ ಸೂಕ್ತ ಭದ್ರತೆ ಒದಗಿಸುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಈಗಾಗಲೆ ಬಾಂಗ್ಲಾ ಕ್ರಿಕೆಟ್​ ಮಂಡಳಿ ಮುಖ್ಯಸ್ಥ ಫಾರುಖ್​ ಅಹ್ಮದ್​ಗೆ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net