

ಮೌಂಟ್ವೌಂಗನುಯಿ: ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ಸರಣಿಯ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ 7 ರನ್ಗಳಿಂದ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ.
ಈ ಗೆಲುವಿನೊಂದಿಗೆ ಭಾರತ ಹೆಗ್ಗಳಿಕೆಯೊಂದಕ್ಕೆ ಪಾತ್ರವಾಗಿದೆ. 5-0 ಅಂತರಲ್ಲಿ ಟಿ-20 ಸರಣಿ ಗೆದ್ದ ಮೊದಲ ತಂಡ ಎಂಬ ಇತಿಹಾಸವನ್ನು ಬರೆದಿದೆ. ಅದೂ ನ್ಯೂಜಿಲೆಂಡ್ ನೆಲದಲ್ಲೇ ಆ ದೇಶವನ್ನು ಬಗ್ಗು ಬಡಿಯುವ ಮೂಲಕ ಇನ್ನಷ್ಟು ಹೆಮ್ಮೆಗೆ ಪಾತ್ರವಾಗಿದೆ. ಮೊದಲ ಮೂರು ಪಂದ್ಯಗಳನ್ನು ಭಾರತ ಗೆದ್ದಾಗಲೇ ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಉಳಿದ ಎರಡು ಪಂದ್ಯಗಳಲ್ಲೂ ಸಹ ನ್ಯೂಜಿಲೆಂಡ್ನ್ನು ಸೋಲಿಸಿ ಕ್ಲೀನ್ ಸ್ವೀಪ್ ಮಾಡಿತು.
ಇಂದು ಮೊದಲು ಬ್ಯಾಟ್ ಮಾಡಿದ ಭಾರತ ಬರೀ 3 ವಿಕೆಟ್ಗಳ ನಷ್ಟಕ್ಕೆ 163 ರನ್ಗಳಿಸಿತ್ತು. ರೋಹಿತ್ ಶರ್ಮಾ (60*) ತಂಡದ ರನ್ ಜಾಸ್ತಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ನೀಡಿದ 164ರನ್ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 156 ರನ್ಗೆ ತನ್ನೆಲ್ಲ ವಿಕೆಟ್ಗಳನ್ನೂ ಕಳೆದುಕೊಂಡಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ ಹಾಗೂ ನವದೀಪ್ ಸೈನಿ ತಲಾ 2 ವಿಕೆಟ್ಗಳು ಮತ್ತು ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು.
ನ್ಯೂಜಿಲೆಂಡ್ ಪರ ರೋಸ್ ಟೇಲರ್ (53) ಮತ್ತು ಟಿಮ್ ಸೈಫರ್ಟ್ (50) ಇಬ್ಬರು ಅರ್ಧಶತಕ ಬಾರಿಸಿದ್ದು ಬಿಟ್ಟರೆ ಇನ್ಯಾರೂ ಉತ್ತಮ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. (ಏಜೆನ್ಸೀಸ್)