

ನ್ಯೂಯಾರ್ಕ್: ಪ್ರಸಕ್ತ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ಅತಿಥ್ಯ ವಹಿಸಿಕೊಂಡಿರುವ ಐಸಿಸಿ ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದಿದ್ದು, ಇದೀಗ ಸೂಪರ್ 8 ಕ್ಲ್ಯಾಶ್ನಲ್ಲಿಯೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಒಂದೆಡೆ ಭಾರತ ತಂಡ ನೀಡುತ್ತಿರುವ ಯಶಸ್ವಿ ಪ್ರದರ್ಶನಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದ್ದರೆ, ಮತ್ತೊಂದೆಡೆ ದಾಖಲೆಗಳ ಸರದಾರ, ವಿರಾಟ್ ಕೊಹ್ಲಿ ಅವರ ಪ್ರದರ್ಶನ ಕುರಿತು ವ್ಯಾಪಕ ಬೇಸರ ವ್ಯಕ್ತವಾಗಿದೆ.
ಟೀಂ ಇಂಡಿಯಾದ ಸ್ಟಾರ್ ಹಾಗೂ ಸ್ಪೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಕರ್ಷಕ ಬ್ಯಾಟಿಂಗ್ ಮಾಡುವ ಮೂಲಕ ಅತ್ಯಧಿಕ ರನ್ಗಳನ್ನು ಕಲೆಹಾಕುವುದರ ಜತೆಗೆ ಆರೆಂಜ್ ಕ್ಯಾಪ್ ಸ್ವೀಕರಿಸಿದರು. 17ನೇ ಸೀಸನ್ ಪೂರ ಆರ್ಸಿಬಿ ಪರ ಓಪನಿಂಗ್ ಆಡಿದ ವಿರಾಟ್, ತಂಡಕ್ಕೆ ಹೆಚ್ಚುವರಿ ರನ್ಗಳ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಅದೇ ಫಾರ್ಮೆಟ್ನಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿಯೂ ರೋಹಿತ್ ಶರ್ಮಾ ಜತೆ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ಕೊಹ್ಲಿ, ತಂಡಕ್ಕೆ ಉತ್ತಮ ಸ್ಟಾರ್ಟ್ ಕೊಡುವಲ್ಲಿ ಸತತವಾಗಿ ವಿಫಲರಾಗಿದ್ದಾರೆ.
ಐಪಿಎಲ್ನಲ್ಲಿ ಕಂಡ ಉತ್ತಮ ಫಾರ್ಮ್ ಅನ್ನು ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಮುಂದುವರೆಸಿಕೊಂಡು ಹೋಗದ ವಿರಾಟ್, ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ 29 ರನ್ಗಳಿಸಿದ್ದಾರೆ. ಇದು ಅವರ ಪ್ರದರ್ಶನದ ಬಗ್ಗೆ ಅಭಿಮಾನಿಗಳಲ್ಲಿ ಮತ್ತು ಮಾಜಿ ಕ್ರಿಕೆಟಿಗರಲ್ಲಿ ಭಾರೀ ಬೇಸರ ಮೂಡುವಂತೆ ಮಾಡಿದೆ. ಇನ್ನು ಈ ಕುರಿತು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಆದ ವಿಕ್ರಮ್ ರಾಥೋರ್ ಮಾತನಾಡಿದ್ದು, ನನಗೂ ಈ ವಿಷಯ ಅತೀವ ಬೇಸರ ತಂದೊಡ್ಡಿದೆ ಎಂದು ಹೇಳಿದ್ದಾರೆ.
"ಬೇಸರ ಇರುವುದು ನಿಜವೇ. ಆದ್ರೆ, ಮುಂದಿನ ಪಂದ್ಯಗಳಲ್ಲಿ ವಿರಾಟ್ ಹೆಚ್ಚು ರನ್ ಗಳಿಸಿದರೆ ಬಹಳ ಖುಷಿ ಪಡುತ್ತೇನೆ. ಕೆಲವೊಮ್ಮೆ ಸವಾಲು ಹಾಕಿದಾಗ ಅದು ಒಳ್ಳೆಯದೆ. ಭಾರತದಲ್ಲಿ ಹೆಚ್ಚು ಬ್ಯಾಟಿಂಗ್ ಮಾಡದ ಬಾಯ್ಸ್, ಇಂದು ಇಲ್ಲಿ ಉತ್ತಮ ಸ್ಕೋರ್‌ಗಳನ್ನು ಕಲೆ ಹಾಕುತ್ತಿದ್ದಾರೆ. ನಮ್ಮ ತಂಡದ ಮಧ್ಯಮ ಕ್ರಮಾಂಕವು ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದೆ. ಇದೆಲ್ಲವನ್ನು ನೋಡಲು ನಿಜಕ್ಕೂ ಖುಷಿಯಾಗುತ್ತಿದೆ" ಎಂದರು.
"ನಮ್ಮ ತಂಡವು ಬಲಿಷ್ಠವಾಗಿದೆ. ಪಿಚ್ ಕಂಡಿಷನ್ ನೋಡಿಕೊಂಡು ಎರಡು ಅಥವಾ ಮೂರು ಸ್ಪಿನ್ನರ್‌ಗಳನ್ನು ಆಡಿಸುತ್ತೇವೆ. ಹಾಗಾಗಿ ಇದು ನಮ್ಮ ಅತ್ಯುತ್ತಮ ಟೀಮ್ ಎಂಬುದರಲ್ಲಿ ಅನುಮಾನವೇ ಬೇಡ. ಅದರಲ್ಲೂ ಅಕ್ಷರ್ ಪಟೇಲ್ನಂತಹ ಆಲ್ರೌಂಡರ್ಗಳು ಎಂಟನೇ ಕ್ರಮಾಂಕದಲ್ಲಿ ಬಂದು ಆಡುವುದು ನಿಜಕ್ಕೂ ನಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ" ಎಂದು ಹೇಳಿದರು,(ಏಜೆನ್ಸೀಸ್).