

ಹೈದರಾಬಾದ್: ನಿರ್ಣಾಯಕ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮೇಲುಗೈ ಸಾಧಿಸಿದ ಹಾಲಿ ಚಾಂಪಿಯನ್ ಬೆಂಗಳೂರು ರ‍್ಯಾಪ್ಟರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಪುಣೆ 7 ಏಸಸ್ ತಂಡವನ್ನು 43 ರಿಂದ ಮಣಿಸಿ ಸತತ 3ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು.
ಶನಿವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯ ಅಂತಿಮ ಹಣಾಹಣಿವರೆಗೂ ಕುತೂಹಲ ಕಾಯ್ದುಕೊಳ್ಳಲು ಯಶಸ್ವಿಯಾಯಿತು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನಾರ್ಥ್ ಈಸ್ಟರ್ನ್ ವಾರಿಯರ್ಸ್ ತಂಡವನ್ನು ಎದುರಿಸಲಿದೆ.
ಪಂದ್ಯದ ಮೊದಲು ನಾಲ್ಕು ಹಣಾಹಣಿ ವೇಳೆಗೆ ಉಭಯ ತಂಡಗಳು 3-3 ರಿಂದ ಸಮಬಲ ಸಾಧಿಸಿದ್ದವು. 5ನೇ ಹಾಗೂ ಅಂತಿಮ ಹಣಾಹಣಿ ಮಿಶ್ರಡಬಲ್ಸ್ನಲ್ಲಿ ಬೆಂಗಳೂರು ತಂಡ ಜಯ ದಾಖಲಿಸಿತು. ಇದಕ್ಕೂ ಮೊದಲು ಪಂದ್ಯದ ಮೊದಲ ಹಣಾಹಣಿ ಪುರುಷರ ಡಬಲ್ಸ್ ವಿಭಾಗವನ್ನು ಟ್ರಂಪ್ ಘೋಷಣೆಯೊಂದಿಗೆ ಆಡಿದ ಪುಣೆ ತಂಡ ಸುಲಭ ಗೆಲುವು ದಾಖಲಿಸಿತು. ಇದರಿಂದ ಬೆಂಗಳೂರು ತಂಡ 0-2 ರಿಂದ ಆರಂಭಿಕ ಹಿನ್ನಡೆ ಅನುಭವಿಸಿತು.
ಪುರುಷರ ಸಿಂಗಲ್ಸ್ನ ಮೊದಲ ಹಣಾಹಣಿಯಲ್ಲಿ ಬೆಂಗಳೂರು ತಂಡದ ಬ್ರಿಸ್ ಲೆವೆರ್ಡೆಜ್ 15-14, 9-15, 15-6 ರಿಂದ ಬೆಂಗಳೂರು ಮೂಲದ ಆಟಗಾರ ಮಿಥುನ್ ಮಂಜುನಾಥ್ ಅವರನ್ನು ಮಣಿಸಿ ಪುಣೆ ತಂಡಕ್ಕೆ ತಿರುಗೇಟು ನೀಡಿದರು. ಬಹುನಿರೀಕ್ಷಿತ ಹಣಾಹಣಿಯಲ್ಲಿ ನಾಯಕ ಸಾಯಿ ಪ್ರಣೀತ್ 11-15, 13-15 ರಿಂದ ಜಪಾನ್ನ ಕಜುಮಸಾ ಸಕಾಯಿ ಎದುರು ನಿರಾಸೆ ಅನುಭವಿಸಿದರು.
ಪ್ರಣೀತ್ ಸೋಲಿನಿಂದ 1-3 ರಿಂದ ಬೆಂಗಳೂರು ಹಿನ್ನಡೆ ಕಂಡಿತು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಟ್ರಂಪ್ ಘೋಷಣೆಯೊಂದಿಗೆ ಆಡಿದ ಮಾಜಿ ವಿಶ್ವ ನಂ.1 ಚೀನಾ ತೈಪೆಯ ತೈ ಜು ಯಿಂಗ್ 15-12, 15-12 ನೇರ ಗೇಮ್ಳಿಂದ ರಿತುಪರ್ಣಾ ದಾಸ್ರನ್ನು ಮಣಿಸಿ ಬೆಂಗಳೂರು ತಂಡಕ್ಕೆ ಜೀವ ತುಂಬಿದರು.