VIDEO| ಫುಟ್​ಬಾಲ್​ ಪಂದ್ಯದಲ್ಲಿ ಸೋಲು; ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನದಂದಂತೆ ಥಳಿಸಿದ ಶಿಕ್ಷಕ

PT Teacher
Published on

ಚೆನ್ನೈ: ಆಟ ಎಂದರೆ ಸೋಲು, ಗೆಲುವು ಸಹಜ. ಒಂದು ತಂಡ ಗೆದ್ದಾಗ ಅಥವಾ ಸೋತಾಗ ಆಟಗಾರರು, ಕೋಚ್​ ಹೇಗೆ ವರ್ತಿಸುತ್ತಾರೆ ಎಂಬುದು ಅವರ ಕ್ರೀಡಾ ಮನೋಭಾವಕ್ಕೆ ಸಾಕ್ಷಿಯಾಗಿರುತ್ತದೆ. ಆದರೆ, ಇಲ್ಲೊಬ್ಬ ಕೋಚ್​ ತಂಡ ನಿರೀಕ್ಷಿತ ಪ್ರದರ್ಶನ ನೀಡದೆ ಸೋತಿದ್ದಕ್ಕೆ ಕುಪಿತಗೊಂಡು ಆಟಗಾರರನ್ನು ಮನಬಂದಂತೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ತಮಿಳುನಾಡಿನ ಸೇಲಂನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆ ಮಾಡಿದ ಶಿಕ್ಷಕನ ಹೆಸರು ಅಣ್ಣಾಮಲೈ ಎಂದು ತಿಳಿದು ಬಂದಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಂಗಗಿರಿ ಜಿಲ್ಲಾ ಶಿಕ್ಷಣಾಧಿಕಾರಿ ತನಿಖೆ ಆರಂಭಿಸಿದ್ದು, ಅಣ್ಣಾಮಲೈ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಖಾಸಗಿ ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಸೋಲಿನ ಬಳಿಕ ಹತಾಶೆಯಿಂದ ಮೈದಾನದಲ್ಲಿ ತಲೆತಗ್ಗಿಸಿ ಕುಳಿತಿರುವ ವಿದ್ಯಾರ್ಥಿಗಳ ಬಳಿ ಹೋಗುವ ಶಿಕ್ಷಕ ಅಣ್ಣಾಮಲೈ ಅವರನ್ನು ನಿಂದಿಸುತ್ತಾ ಕಪಾಳಕ್ಕೆ ಹೊಡೆಯಲು ಶುರು ಮಾಡುತ್ತಾನೆ. ಗೋಲ್​ ಕೀಪರ್​ ವಿದ್ಯಾರ್ಥಿಗೆ ನೀನು ಗಂಡಸಾ ಅಥವಾ ಹೆಂಗಸಾ ಎಂದು ಬೈದು ಎಲ್ಲರ ಮುಂದೆ ಹೊಡೆದು ಅವಮಾನಿಸುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ವಿಡಿಯೋ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಇದಲ್ಲದೆ ಶಿಕ್ಷಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ನೆಟ್ಟಿಗರು ಆಗ್ರಹಿಸಿದ್ದು, ಮುಂದೆ ಯಾರು ಕೂಡ ವಿದ್ಯಾರ್ಥಿಗಳಿಗೆ ಈ ರೀತಿ ಮಾಡಬಾರದು ಎಂದು ಕಮೆಂಟ್​ ಹಾಕಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net