ಜರ್ಮನಿಯ ಟಟ್ಜನಾ ಮರಿಯಾಗೆ ಬೆಂಗಳೂರು ಐಟಿಎಫ್​ ಟೆನಿಸ್​ ಪ್ರಶಸ್ತಿ

web tennis bng
Published on

ಬೆಂಗಳೂರು: ಅಗ್ರ ಶ್ರೇಯಾಂಕಿತೆ ಜರ್ಮನಿಯ ಟಟ್ಜನಾ ಮರಿಯಾ ಉದ್ಯಾನನಗರಿಯಲ್ಲಿ ನಡೆದ ಕೆಪಿಬಿ ಟ್ರಸ್ಟ್​ ವುಮೆನ್ಸ್​ ಓಪನ್​ ಮಹಿಳಾ ಐಟಿಎಫ್​ ಟೆನಿಸ್​ ಟೂರ್ನಿಯ ಸಿಂಗಲ್ಸ್​ ವಿಭಾಗದಲ್ಲಿ ಚಾಂಪಿಯನ್​ ಪಟ್ಟವೇರಿದರು. ಒಂದು ಸೆಟ್​ ಹಿನ್ನಡೆಯಿಂದ ಪುಟಿದೆದ್ದ ಅನುಭವಿ ಆಟಗಾರ್ತಿ ಮರಿಯಾ, ಫ್ರಾನ್ಸ್​ನ ಲಿಯೊಲಿಯಾ ಜೀನ್​ಜೀನ್​ಗೆ ಸೋಲುಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಕೆಎಸ್​ಎಲ್​ಟಿಎ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಟೂರ್ನಿಯ ಫೈನಲ್​ನಲ್ಲಿ 37 ವರ್ಷದ ಮರಿಯಾ 6-7, 6-3, 6-4ರಿಂದ ಲಿಯೊಲಿಯಾ ಎದುರು ಗೆಲುವು ದಾಖಲಿಸಿದರು. ಎರಡು ಗಂಟೆ 41 ನಿಮಿಷಗಳ ಕಾಲ ಸಾಗಿದ ಪ್ರಶಸ್ತಿ ಹೋರಾಟದಲ್ಲಿ ಎರಡು ಹೆಣ್ಣು ಮಕ್ಕಳ ತಾಯಿ ಮರಿಯಾ ಗೆಲುವು ಒಲಿಸಿಕೊಂಡರು.

ಒಟ್ಟು 86.21 ಲಕ್ಷ ರೂ. ಬಹುಮಾನ ಮೊತ್ತ ಒಳಗೊಂಡ ದೇಶದ ಅತಿದೊಡ್ಡ ಐಟಿಎಫ್​ ಟೂರ್ನಿಯಲ್ಲಿ ಮರಿಯಾ ಟ್ರೋಫಿಯೊಂದಿಗೆ 13.13 ಲಕ್ಷ ರೂ. ಮತ್ತು 100 ಡಬ್ಲ್ಯುಟಿಎ ರ್ಯಾಂಕಿಂಗ್​ ಅಂಕ ಗಳಿಸಿದರು. 29 ವರ್ಷದ ಲಿಯೊಲಿಯಾ 7.02 ಲಕ್ಷ ರೂ. ಮತ್ತು 65 ರ್ಯಾಂಕಿಂಗ್​ ಅಂಕಗಳಿಗೆ ತೃಪ್ತಿಪಟ್ಟರು. ಕಳೆದ ವರ್ಷ ಪುಣೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಮರಿಯಾಗೆ ಇದು ಭಾರತದಲ್ಲಿ 2ನೇ ಪ್ರಶಸ್ತಿ ಜಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net