

ಫಗ್ವಾರಾ: ಇಲ್ಲಿ ನಡೆದ ಮೂರನೇ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನ 15 ವಯೋಮಿತಿ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಕರ್ನಾಟಕದ ಅಗ್ರ ಶ್ರೇಯಾಂಕಿತ ಆಟಗಾರ್ತಿ ತನಿಷ್ಕಾ ಕಾಲಭೈರವ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ ಮೂರನೇ ಶ್ರೇಯಾಂಕಿತ ಆಟಗಾರ್ತಿ ಮೈರಾ ಸಾಂಗೆಲ್ಕರ್ ಅವರನ್ನು 3-0 ನೇರ ಗೇಮ್‌ಗಳಿಂದ ಮಣಿಸಿದ 13 ವರ್ಷದ ತನಿಷ್ಕಾ ಪ್ರಶಸ್ತಿಗೆ ಮುತ್ತಿಕ್ಕಿದರು.
ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಬೆಳಗಾವಿಯ ಪ್ರತಿಭೆ ತನಿಷ್ಕಾ ಮೊದಲ ಗೇಮ್ ಅನ್ನು 11-5 ಅಂತರದಿಂದ ಗೆದ್ದುಕೊಂಡರು. ನಂತರದ ಎರಡು ಗೇಮ್‌ಗಳಲ್ಲೂ ತಮ್ಮ ಪ್ರಾಬಲ್ಯ ಮುಂದುವರಿಸಿದ ಅವರು 11-7 ಹಾಗೂ 11-8 ಅಂತರದಲ್ಲಿ ಜಯ ಸಾಧಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಈ ಗೆಲುವಿನೊಂದಿಗೆ ತನಿಷ್ಕಾ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದರು.