ತಲೈವಾಸ್‌ ಆರ್ಭಟಕ್ಕೆ ಮಂಕಾದ ಯೋಧಾಸ್: ನರೇಂದರ್‌ ಸೂಪರ್‌ 10 ಸಾಹಸ

New-Project-14
Published on

‌ನವದೆಹಲಿ: ನರೇಂದರ್‌ (10 ಅಂಕ) ಮತ್ತು ಸಾಹಿಲ್‌ ಗುಲಿಯಾ (6 ಅಂಕ) ಅವರ ಅದ್ಭುತ ಆಟದ ಬಲದಿಂದ ತಮಿಳ್‌ ತಲೈವಾಸ್‌ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 108ನೇ ಪಂದ್ಯದಲ್ಲಿಯು.ಪಿ. ಯೋಧಾಸ್‌ ವಿರುದ್ಧ 7 ಅಂಕಗಳ ಭರ್ಜರಿ ಜಯ ದಾಖಲಿಸಿದೆ. ತ್ಯಾಗರಾಜ್‌ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ತಲೈವಾಸ್‌ ತಂಡ 32-25 ಅಂಕಗಳಿಂದ ಯೋಧಾಸ್‌ಗೆ ಸೋಲುಣಿಸಿತು. ಇದರೊಂದಿಗೆ ಸತತ ಎರಡು ಸೋಲುಗಳ ನಂತರ ಗೆಲುವಿನ ಹಳಿಗೆ ಮರಳಿದ ತಲೈವಾಸ್‌ ಟೂರ್ನಿಯಲ್ಲಿ8ನೇ ಜಯ ದಾಖಲಿಸಿದ್ದು, ಒಟ್ಟಾರೆ 45 ಅಂಕಗಳನ್ನು ಕಲೆಹಾಕಿದೆ.

ಅತ್ತ 13ನೇ ಸೋಲಿಗೆ ಗುರಿಯಾದ ಯೋಧಾಸ್‌, ಮತ್ತೆ ಸೋಲಿನ ಹಾದಿ ಹಿಡಿಯುವ ಮೂಲಕ ಮುಂದಿನ ಹಂತದ ಸ್ಪರ್ಧೆಯಿಂದ ಹೊರಬಿದ್ದಿತು. ಯೋಧಾಸ್‌ ಪ್ರಸ್ತುತ 18 ಪಂದ್ಯಗಳಿಂದ ಕೇವಲ 29 ಅಂಕಗಳನ್ನು ಹೊಂದಿದೆ. ಮೊದಲ ಅವಧಿಯ ಮುನ್ನಡೆಯ ಆತ್ಮವಿಶ್ವಾಸದೊಂದಿಗೆ ದ್ವಿತೀಯಾರ್ಧ ಆರಂಭಿಸಿದ ತಲೈವಾಸ್‌, ರಕ್ಷ ಣಾತ್ಮಕ ಆಟಕ್ಕೆ ಒತ್ತು ನೀಡಿದರು. ಅಂತೆಯೇ ಯೋಧಾಸ್‌ ತಂಡದ ಪ್ರತಿ ಹೋರಾಟಕ್ಕೆ ಗಗನ, ಮಹಿಪಾಲ್‌ ಮತ್ತು ಅನಿಲ್‌ ಸಾಥ್‌ ನೀಡಿದರು.

25ನೇ ನಿಮಿಷಕ್ಕೆ 19-24ರಲ್ಲಿಹೋರಾಟ ಸಂಘಟಿಸಿದ ಯೋಧಾಸ್‌, ಹಿನ್ನಡೆ ತಗ್ಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಿತು. ಆದರೆ ಲೆಫ್ಟ್‌ ಕಾರ್ನರ್‌ ಡಿಫೆಂಡರ್‌ ಹಾಗೂ ನಾಯಕ ಸಾಹಿಲ್‌ ಗುಲಿಯಾ ಹಾಗೂ ರೇಡರ್‌ ನರೇಂದರ್‌ ಅವರ ಆರ್ಭಟದಿಂದಾಗಿ ತಲೈವಾಸ್‌ ತನ್ನ ಮುನ್ನಡೆಯನ್ನು 30ನೇ ನಿಮಿಷದ ವೇಳೆಗೆ 26-20ರಲ್ಲಿಕಾಯ್ದುಕೊಂಡಿತು.

ಪಂದ್ಯ ಮುಕ್ತಾಯಕ್ಕೆ ಕೊನೆಯ ಹತ್ತು ನಿಮಿಷಗಳು ಬಾಕಿ ಇದ್ದಾಗ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿತು. ಇತ್ತಂಡಗಳು ಡು ಆರ್‌ ಡೈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನೆರದಿದ್ದ ಪ್ರೇಕ್ಷ ಕರನ್ನು ರಂಜಿಸಿದರು. ಪಂದ್ಯದ ಕೊನೆಯ ಘಟ್ಟದವರೆಗೂ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಂಡ ತಲೈವಾಸ್‌ ಆಟಗಾರರು, 6 ಅಂಕಗಳ ಅಂತರವನ್ನು ವಿಸ್ತರಿಸಿಕೊಳ್ಳುವ ಮೂಲಕ ಗೆಲುವಿಗೆ ಸನಿಹಗೊಂಡರು. ಮತ್ತೊಂದೆಡೆ ಸೋಲು ತಪ್ಪಿಸಲು ಯೋಧಾಸ್‌ ಆಟಗಾರರು ಹೋರಾಟ ನಡೆಸಿದರೂ ಯಾವುದೇ ಪ್ರತಿಫಲ ಸಿಗಲಿಲ್ಲ. ಸತತ ನಾಲ್ಕನೇ ಬಾರಿ ಸೂಪರ್‌ 10 ಸಾಹಸ ಮಾಡಿದ ನರೇಂದರ್‌ ತಲೈವಾಸ್‌ ತಂಡದ ಗೆಲುವಿನ ರೂವಾರಿಯೆನಿಸಿದರು.

ಆರಂಭಿಕ ಹಿನ್ನಡೆಯ ಹೊರತಾಗಿಯೂ ನರೇಂದರ್‌ ಅವರ ಅದ್ಭುತ ರೇಡಿಂಗ್‌ ಬಲದಿಂದ ತಮಿಳ್‌ ತಲೈವಾಸ್‌ ತಂಡ ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ 21-16ರಲ್ಲಿಮೇಲುಗೈ ಸಾಧಿಸುವ ಮೂಲಕ ಎದುರಾಳಿ ಯು.ಪಿ. ಯೋಧಾಸ್‌ ಮೇಲೆ ಒತ್ತಡ ಹೇರುವಲ್ಲಿ ಸಫಲಗೊಂಡಿತು. ಪಂದ್ಯದ ಮೊದಲ ಐದು ನಿಮಿಷಗಳಲ್ಲಿ1-4ರಲ್ಲಿ ಹಿನ್ನಡೆ ಅನುಭವಿಸಿದ್ದ ತಲೈವಾಸ್‌ ಆಟಗಾರರು, ಹತ್ತು ನಿಮಿಷದ ವೇಳೆಗೆ 9-10ರಲ್ಲಿ ಪ್ರತಿರೋಧ ಒಡ್ಡಿದರು. ನಂತರ 11 -11ರಲ್ಲಿಸಮಬಲ ಸಾಧಿಸಿದ ತಲೈವಾಸ್‌ ತಂಡ, ಆಲ್‌ರೌಂಡ್‌ ಆಟದ ಮೂಲಕ ಎದುರಾಳಿ ತಂಡದ ಮೇಲೆ ಮತ್ತಷ್ಟು ಒತ್ತಡ ಹೇರಿತು. 15ನೇ ನಿಮಿಷದಲ್ಲಿಯೋಧಾಸ್‌ ತಂಡವನ್ನು ಆಲೌಟ್‌ ಮಾಡಿದ ತಮಿಳ್‌ ತಂಡ 5 ಅಂಕಗಳ ಮುನ್ನಡೆ ಕಂಡುಕೊಳ್ಳುವಲ್ಲಿಯಶಸ್ವಿಯಾಯಿತು. ಸಮನ್ವಯತೆ ಕೊರತೆ ಎದುರಿಸಿದ ಯೋಧಾಸ್‌ ಆಟಗಾರರು ಹಿನ್ನಡೆ ತಗ್ಗಿಸಲು ಹರಸಾಹಸ ನಡೆಸಿದರೂ ವಿರಾಮಕ್ಕೆ 5 ಅಂಕಗಳ ಹಿನ್ನಡೆ ಅನುಭವಿಸಬೇಕಾಯಿತು.

ಫೆಬ್ರವರಿ 7ರಂದು ಬೆಂಗಳೂರು ಬುಲ್ಸ್‌ ಮತ್ತು ಪುಣೇರಿ ಪಲ್ಟನ್‌ ಹಾಗೂ ದಬಾಂಗ್‌ ದಿಲ್ಲಿಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net