ಅಫ್ಘಾನಿಸ್ತಾನದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರ ನಿಷೇಧಿಸಿದ ತಾಲಿಬಾನಿಗಳು!

taliban web
Published on

ಕಾಬೂಲ್: ಯುಇಯಲ್ಲಿ ಪುನರಾರಂಭಗೊಂಡಿರುವ ಐಪಿಎಲ್ ಹಬ್ಬವನ್ನು ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಕ್ರಿಕೆಟ್ ಪ್ರೇಮಿಗಳು ಸವಿಯುತ್ತಿದ್ದಾರೆ. ಆದರೆ ತಾಲಿಬಾನ್ ಉಗ್ರರ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದ ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರ ಈ ಭಾಗ್ಯವಿಲ್ಲ. ಐಪಿಎಲ್ ಟೂರ್ನಿ ಇಸ್ಲಾಂ ವಿರೋಧಿಯಾಗಿದೆ ಎಂಬ ಕಾರಣ ನೀಡಿ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ನಿಷೇಧಿಸಲಾಗಿದೆ.

ತಾಲಿಬಾನ್ ಉಗ್ರರಿಗೆ ಕ್ರಿಕೆಟ್ ಮೇಲೆ ಪ್ರೀತಿ ಇದ್ದರೂ, ಮಹಿಳೆಯರೂ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವುದಕ್ಕೆ ಅವರ ವಿರೋಧವಿದೆ. ಮಹಿಳೆಯರು ಕ್ರೀಡಾಂಗಣಕ್ಕೆ ತೆರಳಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಅಲ್ಲದೆ ಐಪಿಎಲ್ ಪಂದ್ಯಗಳ ವೇಳೆ ಮಹಿಳೆಯರು ಕುಣಿದಾಡುತ್ತಾರೆ. ದೇಹದ ಪೂರ್ಣಭಾಗವನ್ನು ಮುಚ್ಚಿಕೊಂಡಿರುವುದಿಲ್ಲ. ಹೀಗಾಗಿ ಐಪಿಎಲ್ ಟೂರ್ನಿ ಇಸ್ಲಾಂ ವಿರೋಧಿಯಾಗಿದೆ ಎಂಬುದು ತಾಲಿಬಾನ್ ಉಗ್ರರ ವಾದವಾಗಿದೆ.

ಅಂದ ಹಾಗೆ ಐಪಿಎಲ್‌ನಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಆಡುತ್ತಿದ್ದಾರೆ. ರಶೀದ್ ಖಾನ್, ಮೊಹಮದ್ ನಬಿ ಮತ್ತು ಮುಜೀಬ್ ಉರ್ ರೆಹಮಾನ್ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಭಾಗವಾಗಿದ್ದಾರೆ. ಮಹಿಳೆಯರು ಕ್ರೀಡೆಯಲ್ಲಿ ತೊಡಗಿಕೊಳ್ಳುವುದನ್ನು ತಾಲಿಬಾನಿಗಳು ಈಗಾಗಲೆ ಸಂಪೂರ್ಣವಾಗಿ ನಿಷೇಧಿಸಿದ್ದು, ಇದಕ್ಕಾಗಿ ಅಂತಾರಾಷ್ಟ್ರೀಯ ವಲಯದಿಂದ ತೀವ್ರ ವಿರೋಧವನ್ನೂ ಎದುರಿಸಿದ್ದಾರೆ. ಮಹಿಳೆಯರಿಗೆ ಕ್ರಿಕೆಟ್ ಸಹಿತ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಅವಕಾಶ ನೀಡದಿದ್ದರೆ ಅಫ್ಘಾನಿಸ್ತಾನದ ಜತೆ ಆಡುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಈಗಾಗಲೆ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net