

ನವದೆಹಲಿ: ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಈಗಾಗಲೆ ಅರ್ಜಿ ಆಹ್ವಾನಿಸಿದ್ದು, ಮೇ 27ರ ಗಡುವು ನಿಗದಿಪಡಿಸಿದೆ. ಆದರೆ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮರು ಅರ್ಜಿ ಸಲ್ಲಿಸದೆ, ವೈಯಕ್ತಿಕ ಜೀವನದತ್ತ ಹೆಚ್ಚಿನ ಗಮನಹರಿಸಲು ಬಯಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಜೂನ್ನಲ್ಲಿ ಅಮೆರಿಕ&ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯೇ ಕನ್ನಡಿಗ ದ್ರಾವಿಡ್ಗೆ ಕೊನೇ ಸವಾಲು ಆಗಿರಲಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್ನಲ್ಲಿ ನಿರಾಸೆ ಅನುಭವಿಸಿದ ಬಳಿಕ, ಟಿ20 ವಿಶ್ವಕಪ್ನಲ್ಲಾದರೂ ಅವರು ಸೀನಿಯರ್ ತಂಡದ ಕೋಚ್ ಆಗಿ ಐಸಿಸಿ ಟ್ರೋಫಿ ಗೆಲ್ಲದ ಕೊರತೆ ನೀಗಿಸಿಕೊಳ್ಳುವರೇ ಎಂಬ ಕುತೂಹಲ ಹರಡಿದೆ.
ಟಿ20 ವಿಶ್ವಕಪ್ ನಂತರ ಕುಟುಂಬದ ಜತೆಗೆ ಹೆಚ್ಚಿನ ಸಮಯ ಕಳೆಯಲು 51 ವರ್ಷದ ದ್ರಾವಿಡ್ ಬಯಸಿದ್ದಾರೆ. ಬಿಸಿಸಿಐ ಅಧಿಕಾರಿಗಳಿಗೂ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
2021ರ ನವೆಂಬರ್ನಲ್ಲಿ ಕೋಚ್ ಆಗಿ ನೇಮಕಗೊಂಡಿದ್ದ ದ್ರಾವಿಡ್, 2023ರ ಏಕದಿನ ವಿಶ್ವಕಪ್ವರೆಗೆ ಅವಧಿ ಹೊಂದಿದ್ದರು. ನಂತರ ಟಿ20 ವಿಶ್ವಕಪ್ವರೆಗೆ ಅವರ ಅವಧಿ ವಿಸ್ತರಿಸಲ್ಪಟ್ಟಿತ್ತು. ಇದೀಗ ಹುದ್ದೆಯಲ್ಲಿ ಇನ್ನಷ್ಟು ಸಮಯ ಮುಂದುವರಿಯದಿರಲು ಅವರು ಬಯಸಿದ್ದಾರೆ.
ಭಾರತ ತಂಡದ ಕೆಲ ಹಿರಿಯ ಆಟಗಾರರು ಟೆಸ್ಟ್ ತಂಡದ ಜತೆಗಾದರೂ ಕನಿಷ್ಠ ಒಂದು ವರ್ಷ ಅಂದರೆ, 2025ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ವರೆಗಾದರೂ (ಭಾರತ ಅರ್ಹತೆ ಪಡೆದರೆ) ದ್ರಾವಿಡ್ ಮುಂದುವರಿಯಬೇಕೆಂದು ಬಯಸಿದ್ದರು. ಆದರೆ ದ್ರಾವಿಡ್ ಇದಕ್ಕೂ ಸಮ್ಮತಿಸಲಿಲ್ಲ. ಒಂದು ವೇಳೆ ದ್ರಾವಿಡ್ ಒಪ್ಪಿಕೊಂಡಿದ್ದರೆ ಬಿಸಿಸಿಐ, ಟೆಸ್ಟ್ ಮತ್ತು ಸೀಮಿತ ಓವರ್ ತಂಡಕ್ಕೆ ಪ್ರತ್ಯೇಕ ಕೋಚ್ ನೇಮಿಸುವ ಬಗ್ಗೆ ಪರಿಗಣಿಸುತ್ತಿತ್ತು ಎನ್ನಲಾಗಿದೆ.
ದ್ರಾವಿಡ್ ಉತ್ತರಾಧಿಕಾರಿಯಾಗಿ ಸದ್ಯ ಮತ್ತೋರ್ವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೆಸರು ಮುಂಚೂಣಿಯಲ್ಲಿದೆ. ಈ ಹಿಂದೆ ದ್ರಾವಿಡ್ ಬಿಡುವು ಪಡೆದುಕೊಂಡಾಗ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್, ಪೂರ್ಣಪ್ರಮಾಣದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಭಾರತ ತಂಡದ ಕೆಲ ಹಿರಿಯ ಆಟಗಾರರು ವಿದೇಶಿ ಕೋಚ್ ತರುವಂತೆ ಬಿಸಿಸಿಐಯನ್ನು ಕೇಳಿಕೊಂಡಿದ್ದಾರೆ. ಇದರಿಂದಾಗಿ ಬಿಸಿಸಿಐ, ಐಪಿಎಲ್ನಲ್ಲಿ ಕೆಲ ತಂಡಗಳ ಮುಖ್ಯ ಕೋಚ್ ಆಗಿ ಹೆಚ್ಚಿನ ಅನುಭವ ಪಡೆದುಕೊಂಡಿರುವ ಕೆಲ ವಿದೇಶಿಯರನ್ನು ಸಂಪರ್ಕಿಸಿದ್ದರೂ, ಅವರು ಹೆಚ್ಚಿನ ಆಸಕ್ತಿ ತೋರಿಲ್ಲ ಎನ್ನಲಾಗಿದೆ.