

ಟೆಕ್ಸಾಸ್: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಜಂಟಿ ಆತಿಥೇಯ ಅಮೆರಿಕದ 15 ಆಟಗಾರರ ತಂಡ ಪ್ರಕಟಗೊಂಡಿದ್ದು, ಭಾರತ ಮೂಲದ 7 ಆಟಗಾರರು ಸ್ಥಾನ ಸಂಪಾದಿಸಿದ್ದಾರೆ. ಗುಜರಾತ್ನ ವಿಕೆಟ್ ಕೀಪರ್&ಬ್ಯಾಟರ್ ಮೊನಾಂಕ್ ಪಟೇಲ್ ತಂಡದ ನಾಯಕರಾಗಿ ನೇಮಕಗೊಂಡಿದ್ದರೆ, 2018-19ರ ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್ಸ್ಕೊರರ್ ಆಗಿದ್ದ ದೆಹಲಿಯ ಬ್ಯಾಟರ್ ಮಿಲಿಂದ್ ಕುಮಾರ್, ಮುಂಬೈನ ಎಡಗೈ ಸ್ಪಿನ್ನರ್ ಹಮೀರ್ತ್ ಸಿಂಗ್, ಮುಂಬೈ ವೇಗಿ ಸೌರಭ್ ನೇತ್ರವಲ್ಕರ್ ಸ್ಥಾನ ಪಡೆದಿದ್ದಾರೆ.
ಅಹಮದಾಬಾದ್ ಮೂಲದ ನಿಸರ್ಗ್ ಪಟೇಲ್, ಪಂಜಾಬ್ ಮೂಲದ ಜೆಸ್ಸಿ ಸಿಂಗ್ ಮತ್ತು ಕರ್ನಾಟಕದ ಚಿಕ್ಕಮಗಳೂರು ಮೂಲದ ನೋಶ್ತುಷ್ ಕೆಂಜಿಗೆ ಇತರ ಮೂವರು. ಅಮೆರಿಕ ಪರವಾಗಿ ಆಡುವ ಸಲುವಾಗಿಯೇ ಭಾರತದಿಂದ ವಲಸೆ ಹೋಗಿದ್ದ 2012ರ 19 ವಯೋಮಿತಿ ತಂಡದ ನಾಯಕ ಉನ್ಮುಕ್ ಚಂದ್ ಮತ್ತು ವಿಕೆಟ್ ಕೀಪರ್ ಸ್ಮಿತ್ ಪಟೇಲ್ ಸ್ಥಾನ ಸಂಪಾದಿಸುವಲ್ಲಿ ವಿಲರಾಗಿದ್ದಾರೆ. ನ್ಯೂಜಿಲೆಂಡ್ ಮೂಲದ ಆಲ್ರೌಂಡರ್ ಕೋರಿ ಆಂಡರ್ಸನ್ ಸ್ಥಾನ ಪಡೆದಿದ್ದಾರೆ. ಅವರು 2014, 2016ರ ಟಿ20 ವಿಶ್ವಕಪ್ನಲ್ಲಿ ಕಿವೀಸ್ ಪರ ಆಡಿದ್ದರು. ಪಾಕಿಸ್ತಾನ ಮೂಲದ ವೇಗಿ ಅಲಿ ಖಾನ್ ಕೂಡ ತಂಡದಲ್ಲಿದ್ದಾರೆ.
ತಂಡ: ಮೊನಾಂಕ್ ಪಟೇಲ್ (ನಾಯಕ), ಆರನ್ ಜೋನ್ಸ್, ಆಂಡ್ರಿಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹಮೀರ್ತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನೊಶ್ತುಷ್ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಶೇಡ್ಲೆ ವಾನ್, ಸ್ಟೀವನ್ ಟೇಲರ್, ಶಯನ್ ಜಹಾಂಗೀರ್.