

ನವದೆಹಲಿ: ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಸೆಮಿಫೈನಲ್ ಹಂತಕ್ಕೇರಿದರೆ, ಜೂನ್ 27ರಂದು ಗಯಾನಾದಲ್ಲಿ ಆಡಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ವೀಸಲು ಅನುಕೂಲಕರವಾದ ಸಮಯದಲ್ಲಿ ಪಂದ್ಯ ಆಯೋಜಿಸುವ ಸಲುವಾಗಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಟಿ20 ವಿಶ್ವಕಪ್ನಲ್ಲಿ ಜೂನ್ 26ರಂದು ಟ್ರಿನಿಡಾಡ್ನಲ್ಲಿ ಮೊದಲ ಸೆಮಿಫೈನಲ್ ನಡೆಯಲಿದೆ. ಆದರೆ ಈ ಪಂದ್ಯ ಸ್ಥಳಿಯ ಕಾಲಮಾನ ರಾತ್ರಿ 8.30ಕ್ಕೆ ಆರಂಭಗೊಳ್ಳಲಿದ್ದು, ಭಾರತದಲ್ಲಿ ಜೂನ್ 27ರ ಬೆಳಗ್ಗೆ 6 ಗಂಟೆಗೆ ಶುರುವಾಗಲಿದೆ. ಜೂನ್ 27ಕ್ಕೆ ಗಯಾನಾದಲ್ಲಿ ನಿಗದಿಯಾಗಿರುವ 2ನೇ ಸೆಮಿಫೈನಲ್ ಸ್ಥಳಿಯ ಕಾಲಮಾನ ಬೆಳಗ್ಗೆ 10.30ಕ್ಕೆ ಶುರುವಾಗಲಿದೆ. ಈ ಪಂದ್ಯ ಭಾರತದಲ್ಲಿ ರಾತ್ರಿ 8ರಿಂದ ನೇರಪ್ರಸಾರ ಕಾಣಲಿದ್ದು, ಇದು ಭಾರತೀಯ ಕ್ರಿಕೆಟ್ ಪ್ರೇಮಿಗಳ ವೀಕ್ಷಣೆಗೆ ಅನುಕೂಲಕರ ಸಮಯವೆನಿಸಿದೆ.
ಜೂನ್ 29ರಂದು ಬ್ರಿಜ್ಟೌನ್ನಲ್ಲಿ (ಬಾರ್ಬಡೋಸ್) ನಿಗದಿಯಾಗಿರುವ ಫೈನಲ್ ಪಂದ್ಯವೂ ಹಗಲಿನಲ್ಲಿ ನಡೆಯಲಿದ್ದು, ಸ್ಥಳಿಯ ಕಾಲಮಾನ ಬೆಳಗ್ಗೆ 10 ಅಂದರೆ ಭಾರತದಲ್ಲಿ ರಾತ್ರಿ 7.30ರಿಂದ ನೇರಪ್ರಸಾರ ಕಾಣಲಿದೆ.
ಇದರೊಂದಿಗೆ ಪ್ಲೇಯಿಂಗ್ ಕಂಡೀಷನ್ನಲ್ಲಿ ಮೊದಲ ಸೆಮಿಫೈನಲ್ ಮತ್ತು ಫೈನಲ್ಗೆ ಮಾತ್ರ ಮೀಸಲು ದಿನ ನಿಗದಿಪಡಿಸಲಾಗಿದೆ. 2ನೇ ಸೆಮಿಫೈನಲ್ಗೆ 4 ಗಂಟೆ, 10 ನಿಮಿಷಗಳ ಹೆಚ್ಚುವರಿ ಸಮಯವನ್ನಷ್ಟೇ ನೀಡಲಾಗಿದೆ. 2ನೇ ಸೆಮಿಫೈನಲ್ ಮತ್ತು ಫೈನಲ್ ನಡುವೆ 1 ದಿನದ ಅಂತರ ಮಾತ್ರ ಇರುವುದರಿಂದ 2ನೇ ಸೆಮೀಸ್ಗೆ ಮೀಸಲು ದಿನ ನಿಗದಿಯಾಗಿಲ್ಲ. ಇದರೊಂದಿಗೆ ನಾಕೌಟ್ ಪಂದ್ಯಗಳಲ್ಲಿ ಫಲಿತಾಂಶ ನಿರ್ಧಾರಕ್ಕೆ ಕನಿಷ್ಠ ತಲಾ 10 ಓವರ್ಗಳ ಪಂದ್ಯ ಆಡುವುದು ಅಗತ್ಯ ಎಂದೂ ಐಸಿಸಿ ಸ್ಪಷ್ಟಪಡಿಸಿದೆ.
9ನೇ ಆವೃತ್ತಿಯ ಟಿ20 ವಿಶ್ವಕಪ್ಗೆ ಜೂನ್ 1ರಂದು ಚಾಲನೆ ಸಿಗಲಿದೆ. ಭಾರತ ತಂಡ ಜೂನ್ 5ರಂದು ನ್ಯೂಯಾರ್ಕ್ನಲ್ಲಿ ಐರ್ಲೆಂಡ್ ವಿರುದ್ಧ ಅಭಿಯಾನ ಆರಂಭಿಸಲಿದೆ.