ಆಗಸ್ಟ್​ನಲ್ಲಿ ಟಿ20 ವಿಶ್ವಕಪ್ ಭವಿಷ್ಯ; ತೂಗುಯ್ಯಾಲೆಯಲ್ಲಿ ಪ್ರತಿಷ್ಠಿತ ಟೂರ್ನಿ,ಗುರುವಾರ ಐಸಿಸಿ ಸಿಇಸಿ ಸಭೆ

page 10 4
Published on

ಮುಂಬೈ: ಕರೊನಾ ವೈರಸ್ ಭೀತಿಯಿಂದಾಗಿ ಇಡೀ ಜಾಗತಿಕ ಕ್ರೀಡಾಲೋಕವೇ ಸಂಪೂರ್ಣ ಸ್ತಬ್ಧಗೊಂಡಿದೆ. 2020ರಲ್ಲಿ ನಿಗದಿಯಾಗಿದ್ದ ಬಹುತೇಕ ಪ್ರತಿಷ್ಠಿತ ಕ್ರೀಡಾಕೂಟಗಳು ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿವೆ. ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಗೂ ಇದೀಗ ಕಾಮೋಡ ಕವಿದಿದೆ. ಚುಟುಕು ಕ್ರಿಕೆಟ್ ಸಮರವೂ ಮುಂದೂಡಿಕೆಯಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ ಮುಂದಿನ

ಆಗಸ್ಟ್​ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಿಳಿಸಿದೆ. ಇದಕ್ಕೂ ಮೊದಲು ಮೇ ತಿಂಗಳಲ್ಲೇ ಟೂರ್ನಿ ಮುಂದೂಡಿಕೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು. ಸದ್ಯ ಪರಿಸ್ಥಿತಿಯಲ್ಲಿ ಎಲ್ಲರ ಆರೋಗ್ಯ ಮುಖ್ಯ. ಮುಂದಿನ ಪರಿಸ್ಥಿತಿ ಅವಲೋಕಿಸಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಐಸಿಸಿ ಹೇಳಿದೆ. ಮುಂದಿನ ಎರಡು ತಿಂಗಳು ಪರಿಸ್ಥಿತಿ ಅವಲೋಕಿಸಲಾಗುವುದು. ಆಗಸ್ಟ್​ನಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ಐಸಿಸಿ ಮೂಲಗಳು ಸ್ಪಷ್ಟಪಡಿಸಿವೆ. ಟೂರ್ನಿ ಮುಂದೂಡುವ ಪ್ರಸ್ತಾಪ ಕೂಡ ಐಸಿಸಿ ಮುಂದಿಲ್ಲ. ಕರೊನಾ ವೈರಸ್ ಅಟ್ಟಹಾಸ ಕಡಿಮೆಯಾದರಷ್ಟೇ ಟೂರ್ನಿ ನಡೆಸಲು ಐಸಿಸಿ ಚಿಂತನೆ ನಡೆಸಿದೆ.

‘ನಿಗದಿಯಂತೆ ಯೋಜನೆಗಳು ಮುಂದುವರಿಯಲಿದ್ದು, ಟೂರ್ನಿಯೂ ನಿಗದಿತ ವೇಳೆಯಲ್ಲೇ ನಡೆಯುವ ಸಾಧ್ಯತೆಗಳಿವೆ. ಆಯೋಜಕರು ಹಾಗೂ ಐಸಿಸಿಯ ಸ್ಥಳೀಯ ಆಯೋಜಕರು ಸಿದ್ಧತೆ ಕಡೆಗೆ ಗಮನಹರಿಸಿದ್ದಾರೆ’ ಎಂದು ಐಸಿಸಿ ವಕ್ತಾರರೊಬ್ಬರು ಮಾಹಿತಿ ನೀಡಿದರು. ಎಲ್ಲದಕ್ಕೂ ಮೊದಲು ಆಸ್ಟ್ರೇಲಿಯಾ ಸರ್ಕಾರ ಟೂರ್ನಿ ನಡೆಸಲು ಅನುಮತಿ ನೀಡಬೇಕಿದೆ. ಟೂರ್ನಿ ನಡೆಸಲು ಸ್ಥಳೀಯ ಸರ್ಕಾರದ ಬೆಂಬಲ ಅತ್ಯಗತ್ಯ ಎಂದರು. ಜತೆಗೆ ಆಟಗಾರರ, ಕೋಚ್​ಗಳ, ತಂಡದ ಸಿಬ್ಬಂದಿ ವರ್ಗದವರ ಹಾಗೂ ಕ್ರೀಡಾಭಿಮಾನಿಗಳ ಹಿತರಕ್ಷತೆ ಮುಖ್ಯ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಕ್ತಾರರು ತಿಳಿಸಿದರು.

ಗುರುವಾರ ಐಸಿಸಿ ಸಿಇಸಿ ಸಭೆ: ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿ (ಸಿಇಸಿ) ಸಭೆಯೂ ಗುರುವಾರ ವಿಡಿಯೋ ಕಾನ್ಪೆರೆನ್ಸ್ ಮೂಲಕ ನಡೆಯಲಿದೆ. ಈ ವೇಳೆ ಕಾರ್ಯದರ್ಶಿ ಜೈ ಷಾ ಬಿಸಿಸಿಐ ಪ್ರತಿನಿಧಿಸಲಿದ್ದಾರೆ. ಪ್ರಸಕ್ತ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ ಸಾಕಷ್ಟು ತೊಂದರೆಯಲ್ಲಿದ್ದು, ಫ್ಯೂಚರ್ ಟೂರ್ಸ್ ಪ್ರೋಗ್ರಾಂ (ಎಫ್​ಟಿಪಿ) ಕುರಿತು ಚರ್ಚೆ ನಡೆಯಲಿದೆ. ಪ್ರಮುಖವಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ (ಡಬ್ಲ್ಯುಟಿಸಿ) ಹಾಗೂ ಏಕದಿನ ಲೀಗ್ ವೇಳಾಪಟ್ಟಿ ಕುರಿತು ರ್ಚಚಿಸಲಾಗುತ್ತಿದೆ. ‘ಈಗಾಗಲೇ ಡಬ್ಲ್ಯುಟಿಸಿ ಅರ್ಧದಾರಿ ಸವೆದಿದ್ದು, ಸೂಪರ್ ಲೀಗ್ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಮಾರ್ಚ್ 2021ರೊಳಗೆ ಲೀಗ್ ಹಂತ ಮುಕ್ತಾಯಗೊಳಿಸಬೇಕು. ಜೂನ್ ತಿಂಗಳಲ್ಲಿ ಫೈನಲ್ ಆಯೋಜಿಸಬೇಕಿದೆ. ಒಂದು ವೇಳೆ ಯಾವುದಾದರೂ ಟೆಸ್ಟ್ ಸರಣಿ ರದ್ದುಗೊಳಿಸಿದರೂ ಡಬ್ಲ್ಯುಟಿಸಿಯಲ್ಲಿ ಸಾಕಷ್ಟು ವ್ಯತ್ಯಾಸ ಕಾಣಬೇಕಾಗುತ್ತದೆ’ ಎಂದು ಐಸಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಕೇವಲ ಆರಂಭಿಕ ಹಂತವಷ್ಟೇ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಭೆಗಳು ನಡೆಯಲಿವೆ ಎಂದು ವಕ್ತಾರರು ತಿಳಿಸಿದ್ದಾರೆ.

ಲಂಕಾ ಪ್ರವಾಸ ಮುಂದೂಡಿದ ದ.ಆಫ್ರಿಕಾ: ಕೋವಿಡ್-19 ಭೀತಿಯಿಂದಾಗಿ ಜೂನ್ ತಿಂಗಳಲ್ಲಿ ನಿಗದಿಯಾಗಿದ್ದ ಶ್ರೀಲಂಕಾ ಪ್ರವಾಸವನ್ನು ದಕ್ಷಿಣ ಆಫ್ರಿಕಾ ಮುಂದೂಡಿದೆ. ಪೂರ್ವನಿಗದಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3 ಏಕದಿನ, 3 ಟಿ20 ಪಂದ್ಯಗಳನ್ನಾಡಬೇಕಿತ್ತು. ‘ಲಾಕ್​ಡೌನ್ ಪರಿಸ್ಥಿತಿಯಿಂದಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರಿಗೂ ಆರೋಗ್ಯಮುಖ್ಯ. ಪರಿಸ್ಥಿತಿ ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹಂಗಾಮಿ ಸಿಇಒ ಡಾ.ಜಾಕ್ಸ್ ಫೌಲ್ ತಿಳಿಸಿದ್ದಾರೆ.

ಪ್ರೇಕ್ಷಕರಿಲ್ಲದೆ ಟೂರ್ನಿ!: ಟಿ20 ವಿಶ್ವಕಪ್​ಗೆ ಇನ್ನು 6 ತಿಂಗಳು ಸಮಯವಿದ್ದು, ಆ ವೇಳೆಗೆ ಕೋವಿಡ್- 19 ಮಹಾಮಾರಿ ನಿಯಂತ್ರಣಕ್ಕೆ ಬಂದರೂ ಖಾಲಿ ಸ್ಟೇಡಿಯಂನಲ್ಲಿ ಟೂರ್ನಿ ಸಂಘಟಿಸಲು ಐಸಿಸಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಹಲವು ಬಗೆಯ ಆಯಾಮಗಳ ಕುರಿತು ಐಸಿಸಿ ಚರ್ಚೆ ನಡೆಸುತ್ತಿದೆ. ಆದರೆ, ಟೂರ್ನಿಯೇ ಅನಿಶ್ಚಿತತೆಯಲ್ಲಿರುವ ಕಾರಣ ಐಸಿಸಿ ತೀರ್ವನಕ್ಕಾಗಿ ಆಗಸ್ಟ್​ವರೆಗೂ ಕಾಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net