ಗಾಯದಿಂದ ಬಳಲುತ್ತಿರುವ ರೋಹಿತ್​ ಪಾಕ್​ ವಿರುದ್ಧದ ಹೈವೋಲ್ಟೇಜ್​ ಪಂದ್ಯಕ್ಕೆ ಲಭ್ಯವಾಗ್ತಾರಾ? ಇಲ್ಲಿದೆ ಉತ್ತರ…

Rohit Sharma (1)
Published on

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿಯಾಗಿ ಆಯೋಜಿಸಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಕಂಡಿದೆ. ಬುಧವಾರ (ಜೂನ್​ 05) ನ್ಯೂಯಾರ್ಕ್​ನ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್​ಗಳ ಅಂತರದಲ್ಲಿ ಸುಲಭ ಜಯ ಗಳಿಸಿ ವಿಶ್ವಕಪ್ ಬೇಟೆ ಆರಂಭಿಸಿತು. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ತಮ್ಮ ಸೂಪರ್ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದರು.

ಕೇವಲ 97 ರನ್‌ಗಳ ಗುರಿಯನ್ನು ವೇಗವಾಗಿ ಮುಟ್ಟುವ ಸಲುವಾಗಿ ಆಕ್ರಮಣಕಾರಿ ಬ್ಯಾಟಿಂಗ್‌ ಆಡಿದ ರೋಹಿತ್​, 37 ಎಸೆತಗಳಲ್ಲಿ 52 ರನ್ ಗಳಿಸಿ ಫಾರ್ಮ್‌ಗೆ ಮರಳಿದರು. ರೋಹಿತ್ ಫಾರ್ಮ್ ಜತೆಗೆ ಟೀಮ್​ ಇಂಡಿಯಾ ವಿಶ್ವಕಪ್ ಗೆಲುವಿನೊಂದಿಗೆ ಶುಭಾರಂಭ ಮಾಡಿದರೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ವಿಷಯ ಶಾಕ್ ನೀಡಿದೆ. ಅದೇನೆಂದರೆ ರೋಹಿತ್ ಶರ್ಮ ಗಾಯಗೊಂಡಿದ್ದು.

ನಾಯಕ ರೋಹಿತ್ ಶರ್ಮ, ಭಾರತೀಯ ಬ್ಯಾಟಿಂಗ್ ಲೈನ್ ಅಪ್‌ನಲ್ಲಿ ಪ್ರಮುಖ ಬ್ಯಾಟ್ಸ್‌ಮನ್. ಅವರು ತಂದುಕೊಡುವ ಉತ್ತಮ ಆರಂಭದಿಂದ ಟೀಮ್​ ಇಂಡಿಯಾ ಬೃಹತ್ ಸ್ಕೋರ್ ಮಾಡಬಲ್ಲದು. ಮೇಲಾಗಿ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ಅವರ ಫಾರ್ಮ್ ತುಂಬಾ ಮಹತ್ವದ್ದಾಗಿದೆ. ಆದರೆ, ರೋಹಿತ್​ ಗಾಯಗೊಂಡಿರುವುದು ಟೀಮ್​ ಇಂಡಿಯಾ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ತಾನು ತೋಳು ನೋವಿನಿಂದ ಬಳಲುತ್ತಿರುವುದಾಗಿ ರೋಹಿತ್​ ಸಹ ಬಹಿರಂಗಪಡಿಸಿದ್ದಾರೆ.

ಕೈ ನೋವಿನಿಂದಲೇ ಕಣಕ್ಕಿಳಿದ ರೋಹಿತ್ ಶರ್ಮ, ಅರ್ಧಶತಕ ಬಾರಿಸಿ ಮಿಂಚಿದರು. ನೋವು ಹೆಚ್ಚಾಗಿ ಅರ್ಧದಲ್ಲಿ ಹೊರ ನಡೆದರು. ಇದೀಗ ಕಾಡುತ್ತಿರುವ ಪ್ರಶ್ನೆ ಏನೆಂದರೆ, ರೋಹಿತ್ ಮುಂದಿನ ಪಂದ್ಯಗಳಿಗೆ ಲಭ್ಯರಾಗುತ್ತಾರಾ ಎಂಬುದು. ಈ ವಿಚಾರದಲ್ಲಿ ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ. ಏಕೆಂದರೆ, ಸ್ವತಃ ರೋಹಿತ್​ ಶರ್ಮ ಗುಡ್​ ನ್ಯೂಸ್​ ನೀಡಿದ್ದಾರೆ. ಅದೇನೆಂದರೆ, ತಾನು ಸಣ್ಣ ಪ್ರಮಾಣದ ಗಾಯದಿಂದ ಬಳಲುತ್ತಿರುವಾಗಿ ಹೇಳಿದ್ದಾರೆ. ಮುಂದಿನ ಪಂದ್ಯಕ್ಕೆ ರೋಹಿತ್​ ಲಭ್ಯವಾಗಲಿದ್ದಾರೆ.

ರೋಹಿತ್ ಶರ್ಮಾ ಜತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬೇಕಿದ್ದ ಯಶಸ್ವಿ ಜೈಸ್ವಾಲ್ ಫಾರ್ಮ್‌ನಲ್ಲಿಲ್ಲ. ಅಲ್ಲದೆ, ಸಂಜು ಸ್ಯಾಮ್ಸನ್ ಅವರನ್ನು ಅಭ್ಯಾಸ ಪಂದ್ಯದಲ್ಲಿ ಆರಂಭಿಕನಾಗಿ ಆಗಿ ಆಡಿಸಲಾಯಿತು. ಆದರೆ, ಅವರು ಕೂಡ ವಿಫಲರಾದರು. ಇದೇ ವೇಳೆ ವಿರಾಟ್ ಕೊಹ್ಲಿಯನ್ನು ಓಪನರ್ ಆಗಿ ಕಣಕ್ಕೆ ಇಳಿಸಿದರೆ ಅದೂ ಕೂಡ ಉತ್ತಮ ಫಲಿತಾಂಶ ನೀಡಲಿಲ್ಲ. ಆದರೆ, ಒಂದೇ ಪಂದ್ಯದಿಂದ ಕೊಹ್ಲಿಯನ್ನು ಅಂದಾಜಿಸಲು ಸಾಧ್ಯವಿಲ್ಲ, ಆದರೆ ರೋಹಿತ್‌ಗೆ ಇನ್ನೂ ಸರಿಯಾದ ಜೋಡಿ ಸಿಕ್ಕಿಲ್ಲ. ಇಂತಹ ಸಮಯದಲ್ಲಿ ರೋಹಿತ್ ಕೂಡ ನೋವಿನಿಂದ ನರಳುತ್ತಿದ್ದು, ಖಂಡಿತಾ ಟೀಮ್​ ಇಂಡಿಯಾಗೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯಗಳಿವೆ.

ಮೇಲಾಗಿ ಟೀಮ್​ ಇಂಡಿಯಾ ಜೂನ್​ 9ರಂದು ಪಾಕಿಸ್ತಾನ ವಿರುದ್ಧ ಪಂದ್ಯವನ್ನಾಡಬೇಕಿದೆ. ಈ ಪಂದ್ಯದವರೆಗೂ ರೋಹಿತ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಕ್ರಿಕೆಟ್ ಅಭಿಮಾನಿಗಳು ಬಯಸುತ್ತಿದ್ದಾರೆ. ಇದರ ನಡುವೆ ರೋಹಿತ್​ ಕೊಟ್ಟಿರುವ ಹೇಳಿಕೆ ಅಭಿಮಾನಿಗಳಲ್ಲಿ ಸಮಾಧಾನವನ್ನು ತಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net