

ಲೌಡೆರ್ಹಿಲ್ (ಫ್ಲಾರಿಡಾ): ಸತತ 3 ಗೆಲುವಿನೊಂದಿಗೆ ಸೂಪರ್-8 ಪ್ರವೇಶವನ್ನು ಈಗಾಗಲೆ ಖಾತ್ರಿಪಡಿಸಿಕೊಂಡಿರುವ ಟೀಮ್ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಶನಿವಾರ ಕೆನಡಾ ತಂಡವನ್ನು ಎದುರಿಸಲಿದೆ. ಮೊದಲ 3 ಪಂದ್ಯಗಳನ್ನು ನ್ಯೂಯಾರ್ಕ್ನಲ್ಲಿ ಆಡಿದ್ದ ಭಾರತ ಈಗ ಅಮೆರಿಕದ ಮತ್ತೊಂದು ಕ್ರಿಕೆಟ್ ತಾಣವಾದ ಲೌಡೆರ್ಹಿಲ್ನಲ್ಲೂ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿ ಕಾಡುತ್ತಿದ್ದು, ಒಂದೂ ಎಸೆತ ಕಾಣದೆ ರದ್ದಾಗುವ ಸಾಧ್ಯತೆ ಹೆಚ್ಚಿದೆ.
ಭಾರತಕ್ಕೆ ಅಮೆರಿಕದಲ್ಲಿ ಇದು ಕೊನೇ ಪಂದ್ಯವಾಗಿದ್ದು, ಸೂಪರ್-8ನಿಂದ ಎಲ್ಲ ಪಂದ್ಯಗಳನ್ನು ವೆಸ್ಟ್ ಇಂಡೀಸ್ ನೆಲದಲ್ಲೇ ಆಡಲಿದೆ. ಭಾರತಕ್ಕೆ ಹೊಸ ಆರಂಭಿಕ ಜೋಡಿ ಕೈಕೊಡುತ್ತಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಉಪಯುಕ್ತ ಕೊಡುಗೆಗಳನ್ನು ನೀಡಿದ್ದಾರೆ. ಬೌಲರ್ಗಳು ಅದರಲ್ಲೂ ಪ್ರಮುಖವಾಗಿ ವೇಗದ ಬೌಲರ್ಗಳು ನ್ಯೂಯಾರ್ಕ್ನ ಬೌಲಿಂಗ್ ಸ್ವರ್ಗದಲ್ಲಿ ಪ್ರಾಬಲ್ಯವನ್ನೇ ಮೆರೆದಿದ್ದರು. ಜಸ್ಪ್ರೀತ್ ಬುಮ್ರಾ (5 ವಿಕೆಟ್), ಹಾರ್ದಿಕ್ ಪಾಂಡ್ಯ (7) ಮತ್ತು ಅರ್ಷದೀಪ್ ಸಿಂಗ್ (7) ನ್ಯೂಯಾರ್ಕ್ನಲ್ಲಿ ಹೆಚ್ಚಿನ ಯಶ ಕಂಡಿದ್ದರು.
ಟೀಮ್ ನ್ಯೂಸ್:
ಭಾರತ: ಔಪಚಾರಿಕ ಪಂದ್ಯದಲ್ಲಿ ಭಾರತ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ಗೆ ಅವಕಾಶ ಕಲ್ಪಿಸಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಜೈಸ್ವಾಲ್ ತಂಡದೊಳಗೆ ಬಂದರೆ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಭಾರತ ಟೂರ್ನಿಯಲ್ಲಿ ಮೊದಲ ಬಾರಿಗೆ ತಜ್ಞ ಸ್ಪಿನ್ ಬೌಲರ್ ಅನ್ನು ಕಣಕ್ಕಿಳಿಸುವುದೇ ಎಂಬ ಕುತೂಹಲವೂ ಇದೆ. ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಹೆಚ್ಚು ಪರಿಣಾಮಕಾರಿ ಎನಿಸಿಲ್ಲ. ಹೀಗಾಗಿ ಕುಲದೀಪ್ ಯಾದವ್ ಅಥವಾ ಯಜುವೇಂದ್ರ ಚಾಹಲ್ ಅವರಲ್ಲಿ ಒಬ್ಬರು ಆಡಬಹುದು.
ಕೆನಡಾ: ಹಿಂದಿನ 3 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿರುವ ಕೆನಡಾ, ಭಾರತಕ್ಕೆ ನಿಟಕ ಪೈಪೋಟಿ ನೀಡುವ ತವಕದಲ್ಲಿದೆ. ಆರಂಭಿಕ ಆರನ್ ಜಾನ್ಸನ್ ಭರ್ಜರಿ ಫಾರ್ಮ್ ತಂಡಕ್ಕೆ ಬಲ ತುಂಬಿದೆ. ಭಾರತದ ಬಲಿಷ್ಠ ಬೌಲಿಂಗ್ ವಿಭಾಗಕ್ಕೆ ಕೆನಡಾ ಯಾವ ರೀತಿ ಪ್ರತಿರೋಧ ತೋರುವುದು ಎಂಬ ಕೌತುಕವಿದೆ. ದಾವಣಗೆರೆಯ ಶ್ರೇಯಸ್ ಮೋವಾ ತಂಡದ ವಿಕೆಟ್ ಕೀಪರ್ ಆಗಿದ್ದಾರೆ.
ಆರಂಭ: ರಾತ್ರಿ 8.00
ನೇರಪ್ರಸಾರ: ಸ್ಟಾರ್ ಸ್ಪೋಟ್ಸ್, ಹಾಟ್ ಸ್ಟಾರ್.
ಕೊಹ್ಲಿ ಫಾರ್ಮ್ ಕಳವಳ
ಐಪಿಎಲ್ನಲ್ಲಿ ಸರ್ವಾಧಿಕ ರನ್ಸ್ಕೋರರ್ ಎನಿಸಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ನಲ್ಲಿ ರನ್ ಗಳಿಸುವುದನ್ನೇ ಮರೆತಿದ್ದಾರೆ. ಮೊದಲ 3 ಪಂದ್ಯಗಳಲ್ಲಿ ಎರಡಂಕಿ (1, 4, 0) ತಲುಪಲು ವಿಲರಾಗಿರುವ ಕೊಹ್ಲಿ, ಟೀಮ್ ಇಂಡಿಯಾ ಪರ ಆರಂಭಿಕ ಪಾತ್ರದಲ್ಲೂ ವೈಲ್ಯ ಕಂಡಿದ್ದಾರೆ. ಇದರಿಂದ ಅವರು ಮತ್ತೆ 3ನೇ ಕ್ರಮಾಂಕದಲ್ಲೇ ಆಡಬೇಕೆಂಬ ಒತ್ತಾಯಗಳೂ ಶುರುವಾಗಿವೆ. ಆದರೆ ಕೊಹ್ಲಿ ಈ ಬಾರಿ ಆರಂಭಿಕನಾಗಿ ಇನ್ನೊಂದು ಅವಕಾಶ ಲಭಿಸುವ ಸಾಧ್ಯತೆ ಹೆಚ್ಚಿದೆ. ಸೂಪರ್-8 ಹಂತಕ್ಕೆ ಮುನ್ನ ಕೆನಡಾ ಎದುರು ವಿರಾಟ್ ಕೊಹ್ಲಿ ಲಯ ಕಂಡುಕೊಳ್ಳುವ ನಿರೀೆಯೂ ಹರಡಿದೆ.
ಪಿಚ್ ರಿಪೋರ್ಟ್
ನ್ಯೂಯಾರ್ಕ್ನಿಂದ 1,850 ಕಿಮೀ ದೂರದಲ್ಲಿರುವ ಫ್ಲಾರಿಡಾದ ಬ್ರೋವರ್ಡ್ ಕೌಂಟಿ ಸ್ಟೇಡಿಯಂನ ಪಿಚ್, ನಾಸೌ ಸ್ಟೇಡಿಯಂನಂತೆ ಬ್ಯಾಟಿಂಗ್ಗೆ ಕಠಿಣವಲ್ಲ. ಹೀಗಾಗಿ ಭಾರತೀಯ ಬ್ಯಾಟರ್ಗಳು ಇಲ್ಲಿ ನಿರಾಳವಾಗಿ ಬ್ಯಾಟಿಂಗ್ ನಡೆಸುವ ನಿರೀೆ ಇದೆ. ಸೂಪರ್-8ಕ್ಕೆ ಮುನ್ನ ಬ್ಯಾಟರ್ಗಳಿಗೆ ಲಯ ಕಂಡುಕೊಳ್ಳಲು ಪಿಚ್ ನೆರವಾದರೆ ಅಚ್ಚರಿ ಇಲ್ಲ.
ಮಳೆ ಅಡಚಣೆ ಸಾಧ್ಯತೆ
ಫ್ಲಾರಿಡಾದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ರಸ್ತೆಯಲ್ಲೆಲ್ಲಾ ನೀರು ತುಂಬಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಕ್ರಿಕೆಟ್ ಪಂದ್ಯ ಆಡುವುದು ಬಹುತೇಕ ಕನಸಿನ ಮಾತು ಎನ್ನಲಾಗುತ್ತಿದೆ. ಶುಕ್ರವಾರ ನಿಗದಿಯಾಗಿದ್ದ ಭಾರತ ತಂಡದ ಅಭ್ಯಾಸ ಅವಧಿಯೂ ಮಳೆಯಿಂದಾಗಿ ರದ್ದುಗೊಂಡಿದೆ.
ವಿಂಡೀಸ್ನಲ್ಲಿ ಆಡದಿರುವ ಹಿನ್ನಡೆ
ಭಾರತ ತಂಡ ಲೀಗ್ ಹಂತದ ಎಲ್ಲ 4 ಪಂದ್ಯಗಳನ್ನು ಅಮೆರಿಕದಲ್ಲೇ ಆಡಿದ್ದರೆ, ಸೂಪರ್&8 ಹಂತದಲ್ಲಿ ಭಾರತಕ್ಕೆ ಎದುರಾಳಿಯಾಗಲಿರುವ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೆಲಿಯಾ ತಂಡಗಳು ವಿಂಡೀಸ್ನಲ್ಲೇ ಹೆಚ್ಚಿನ ಪಂದ್ಯಗಳನ್ನು ಆಡಿವೆ. ಇದು ಸೂಪರ್-8 ಹಂತದಲ್ಲಿ ಭಾರತಕ್ಕೆ ಹಿನ್ನಡೆಯಾಗುವ ಭೀತಿ ಇದೆ. ಅಲ್ಲದೆ ಭಾರತ ತಂಡ ಸೂಪರ್-8 ಹಂತದಲ್ಲಿ 3 ಪಂದ್ಯಗಳನ್ನು 5 ದಿನಗಳ ಅಂತರದಲ್ಲಿ ಆಡಲಿದೆ. ಭಾರತ&ಆಸೀಸ್ ನಡುವಿನ ಪಂದ್ಯ ಸೇಂಟ್ ಲೂಸಿಯಾದಲ್ಲಿ ನಡೆಯಲಿದ್ದು, ಆಸೀಸ್ ಇಲ್ಲಿ ಈಗಾಗಲೆ ಆಡಿರುವುದು ಅದಕ್ಕೆ ಅನುಕೂಲಕರ ಎನಿಸಿದೆ.
*8: ಭಾರತ ತಂಡ ಫ್ಲಾರಿಡಾದಲ್ಲಿ ಈ ಹಿಂದೆ 8 ಟಿ20 ಪಂದ್ಯಗಳನ್ನು ಆಡಿದೆ. ವಿಂಡೀಸ್ ವಿರುದ್ಧದ ಈ ಕಾದಾಟಗಳಲ್ಲಿ 5ರಲ್ಲಿ ಗೆದ್ದಿದ್ದು, 2ರಲ್ಲಿ ಸೋತಿದೆ. 1 ಪಂದ್ಯ ರದ್ದುಗೊಂಡಿದೆ.