

ಮೌಂಟ್ವೌಂಗನುಯಿ: ಸತತ ಎರಡು ಸೂಪರ್ ಓವರ್ ಜಯದೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ 4-0 ಮುನ್ನಡೆ ಸಂಪಾದಿಸಿರುವ ಭಾರತ ತಂಡ ಇದೀಗ ಕ್ಲೀನ್ಸ್ವೀಪ್ ಸಾಧಿಸುವ ತವಕದಲ್ಲಿದೆ. ಭಾನುವಾರ ಬೇ ಓವಲ್ ಮೈದಾನದಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲೂ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸುವ ವಿಶ್ವಾಸವನ್ನು ಭಾರತ ತಂಡ ಹೊಂದಿದೆ. ಇದು ಐಪಿಎಲ್ಗೆ ಮುನ್ನ ಭಾರತ ತಂಡ ಆಡಲಿರುವ ಕೊನೆಯ ಟಿ20 ಪಂದ್ಯವಾಗಿದೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ 5 ಪಂದ್ಯಗಳ ಸರಣಿಯಲ್ಲಿ ಯಾವ ತಂಡವೂ 5-0 ಕ್ಲೀನ್ಸ್ವೀಪ್ ಸಾಧಿಸಿದ್ದಿಲ್ಲ. ಈ ಐತಿಹಾಸಿಕ ಸಾಧನೆ ಅವಕಾಶ ಭಾರತದ ಮುಂದಿದ್ದರೆ, ನ್ಯೂಜಿಲೆಂಡ್ ತಂಡ ಹಿಂದೆಂದೂ ತವರಿನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಟಿ20 ಪಂದ್ಯಗಳ ದ್ವಿಪಕ್ಷೀಯ ಸರಣಿಯ ಎಲ್ಲ ಪಂದ್ಯ ಸೋತ ದೃಷ್ಟಾಂತವಿಲ್ಲ. 2008ರಲ್ಲೊಮ್ಮೆ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ 0-2ರಿಂದ ಸೋತಿತ್ತು. ವೈಟ್ವಾಷ್ ಮುಖಭಂಗದಿಂದ ಪಾರಾಗಲೂ ಕಿವೀಸ್ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುವುದು ನಿಶ್ಚಿತ. ಕ್ಲೀನ್ಸ್ವೀಪ್ ಆಸೆಯ ನಡುವೆಯೂ ಭಾರತ ತಂಡ ಟಿ20 ವಿಶ್ವಕಪ್ ಪೂರ್ವಸಿದ್ಧತೆಯ ದೃಷ್ಟಿಯಿಂದ ಅಂತಿಮ ಪಂದ್ಯದಲ್ಲೂ ಕೆಲ ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆಗಳಿವೆ. ಸಂಜು ಸ್ಯಾಮ್ಸನ್, ಶಿವಂ ದುಬೆ ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ದು, ಅಂತಿಮ ಪಂದ್ಯದಲ್ಲಿ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ. 4ನೇ ಪಂದ್ಯದ ಹೀರೋ ಮನೀಷ್ ಪಾಂಡೆ 6ನೇ ಕ್ರಮಾಂಕಕ್ಕೂ ಸೈ ಎನಿಸಿಕೊಂಡಿದ್ದಾರೆ. -ಪಿಟಿಐ/ಏಜೆನ್ಸೀಸ್
ರ‍್ಯಾಂಕಿಂಗ್ ಪ್ರಗತಿ ಸದ್ಯಕ್ಕಿಲ್ಲ!
ಭಾರತ ತಂಡ 5-0 ಕ್ಲೀನ್ಸ್ವೀಪ್ ಸಾಧಿಸಿದರೂ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ 5ನೇ ಸ್ಥಾನದಲ್ಲಿ ಉಳಿಯಲಿರುವುದು ವಿಪರ್ಯಾಸ. ಭಾರತ ಕ್ಲೀನ್ಸ್ವೀಪ್ ಸಾಧಿಸಿದರೆ ಅಂಕ ಗಳಿಕೆ 261ಕ್ಕೆ ಏರಲಿದೆ. ಮುಂಬರುವ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಸರಣಿ ಗೆದ್ದಾಗ ಅಥವಾ ದಕ್ಷಿಣ ಆಫ್ರಿಕಾ 3-0 ಕ್ಲೀನ್ಸ್ವೀಪ್ ಸಾಧಿಸಿದಾಗ 4ನೇ ಸ್ಥಾನಕ್ಕೇರುವ ಅವಕಾಶ ಭಾರತಕ್ಕಿರುತ್ತದೆ.
ಪಿಚ್ ರಿಪೋರ್ಟ್
ಮೌಂಟ್ ಮೌಂಗನುಯಿ ಸ್ಥಳದ ಹೆಸರೇ ಹೇಳುವಂತೆ ಇದು ಬೆಟ್ಟದ ಮೇಲೆ ನಿರ್ವಿುಸ ಲಾಗಿರುವ ಕ್ರೀಡಾಂಗಣ. ಹೀಗಾಗಿ ಚೆಂಡಿನ ಸ್ವಿಂಗ್ ಮೇಲೆ ಗಾಳಿ ಪರಿಣಾಮ ಬೀರಲಿದೆ. ಗಾಳಿಗೆ ಎದುರಾಗಿ ಓಡಿಬಂದು ಬೌಲಿಂಗ್ ಮಾಡುವುದು ಕೂಡ ಬೌಲರ್ಗಳಿಗೆ ಸವಾಲಾಗಲಿದೆ. ಪಿಚ್ ಉತ್ತಮ ಬೌನ್ಸ್ ಹೊಂದಿದೆ. ಬೇ ಓವಲ್ನಲ್ಲಿ ನಡೆದ 5 ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡದ ಸರಾಸರಿ ಮೊತ್ತ 199 ರನ್. ಹೀಗಾಗಿ ಮತ್ತೊಮ್ಮೆ ರನ್ ಪ್ರವಾಹದ ನಿರೀಕ್ಷೆ ಇಡಬಹುದು.
ಭಾರತ: ಮುಂಬರುವ ಏಕದಿನ, ಟೆಸ್ಟ್ ಸರಣಿಯ ಸವಾಲಿಗೆ ಮುನ್ನ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ಕಳೆದ ಪಂದ್ಯದಿಂದ ಹೊರಗುಳಿದಿದ್ದ ಆರಂಭಿಕ ರೋಹಿತ್ ಶರ್ಮ ಹಂಗಾಮಿ ನಾಯಕರಾಗಿ ಮರಳಬಹುದು. ವಿಕೆಟ್ ಕೀಪರ್ ಆಗಿ ತಂಡಕ್ಕೆ ಹೆಚ್ಚಿನ ಸಮತೋಲನ ತಂದಿರುವ ಕೆಎಲ್ ರಾಹುಲ್ಗೆ, ಏಕದಿನ ಸರಣಿಗೆ ಪೂರ್ವಭಾವಿಯಾಗಿ ವಿಶ್ರಾಂತಿ ನೀಡಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ ಪ್ರವಾಸದಲ್ಲಿ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ. ಇನ್ನು ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ, ಮೊಹಮದ್ ಶಮಿ ಅವರನ್ನು ಮರಳಿ ಕಣಕ್ಕಿಳಿಸಬಹುದು. ಯಜುವೇಂದ್ರ ಚಾಹಲ್ ಬದಲಿಗೆ ಕುಲದೀಪ್ ಕಣಕ್ಕಿಳಿಯಬಹುದು.
ನ್ಯೂಜಿಲೆಂಡ್: ಫೀಲ್ಡಿಂಗ್ ವೇಳೆ ಕಗಿಲಿನ್ಗೆ ಡಿಕ್ಕಿ ಹೊಡೆದಿದ್ದ ಕಾರಣ ಆರಂಭಿಕ ಮಾರ್ಟಿನ್ ಗುಪ್ಟಿಲ್ ವೆಲ್ಲಿಂಗ್ಟನ್ನಲ್ಲಿ ಸೂಪರ್ ಓವರ್ನಲ್ಲಿ ಬ್ಯಾಟಿಂಗ್ಗೆ ಬಂದಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಅನುಮಾನವಿದೆ. ಇನ್ನು ನಾಯಕ ಕೇನ್ ವಿಲಿಯಮ್ಸನ್ ಭುಜದ ನೋವಿನ ಬಗ್ಗೆಯೂ ಪರಿಷ್ಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಏಕದಿನ, ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಕೇನ್ಗೆ ಈ ಪಂದ್ಯದಿಂದಲೂ ವಿರಾಮ ನೀಡಬಹುದು. ಕಾಲಿನ್ ಮನ್ರೊ ಫಾಮರ್್ಗೆ ಮರಳಿರುವುದು ಕಿವೀಸ್ಗೆ ನೆಮ್ಮದಿಯ ವಿಚಾರ.