ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20: ಕರ್ನಾಟಕಕ್ಕೆ ಶರಣಾದ ತಮಿಳುನಾಡು; ಮಯಾಂಕ್​ ಪಡೆ ನಾಕೌಟ್​ ಆಸೆ ಜೀವಂತ

web kar
Published on

ಇಂದೋರ್​: ವೇಗಿ ವಾಸುಕಿ ಕೌಶಿಕ್​ (10ಕ್ಕೆ 3) ಮತ್ತು ಮಧ್ಯಮ ವೇಗಿ ಮನೋಜ್​ ಭಾಂಡಗೆ (19ಕ್ಕೆ 3) ಬಿಗಿ ಬೌಲಿಂಗ್​ ಬಲದಿಂದ ಕರ್ನಾಟಕ ತಂಡ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯ ತನ್ನ 5ನೇ ಲೀಗ್​ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 7 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಮಯಾಂಕ್​ ಅಗರ್ವಾಲ್​ ಪಡೆ ನಾಕೌಟ್​ ಆಸೆ ಜೀವಂತ ಉಳಿಸಿಕೊಂಡಿದೆ.

ಎಮರಾಲ್ಡ್​ ಹೈಸ್ಕೂಲ್​ ಗ್ರೌಂಡ್​ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ತಮಿಳುನಾಡು ತಂಡ, ಕರ್ನಾಟಕದ ದಾಳಿ ಎದುರು ರನ್​ಗಳಿಸಲು ಪರದಾಡಿ ಭರ್ತಿ 20 ಓವರ್​ಗಳಲ್ಲಿ 90 ರನ್​ಗಳಿಗೆ ಸರ್ವಪತನ ಕಂಡಿತು. 61 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡು ತತ್ತರಿಸಿದ ತಮಿಳುನಾಡು ತಂಡ ಬಾಲಂಗೋಚಿ ವರುಣ್​ ಚಕ್ರವರ್ತಿ (24) ಹೋರಾಟದಿಂದ ಮೊತ್ತ ಹೆಚ್ಚಿಸಿಕೊಂಡಿತು. ಪ್ರತಿಯಾಗಿ ಕರ್ನಾಟಕ ತಂಡ 11.3 ಓವರ್​ಗಳಲ್ಲೇ 3 ವಿಕೆಟ್​ಗೆ 93 ರನ್​ ಗಳಿಸಿ ಜಯಿಸಿತು. ಆರಂಭಿಕರಾದ ಮನೀಷ್​ ಪಾಂಡೆ (42) ಮತ್ತು ನಾಯಕ ಮಯಾಂಕ್​ ಅಗರ್ವಾಲ್​ (30) ಮೊದಲ ವಿಕೆಟ್​ಗೆ 76 ರನ್​ ಜತೆಯಾಟವಾಡಿ ರಾಜ್ಯದ ಗೆಲುವಿನ ಹಾದಿ ಸುಗಮಗೊಳಿಸಿದರು.

ತಮಿಳುನಾಡು: 20 ಓವರ್​ಗಳಲ್ಲಿ 90 (ಇಂದ್ರಜಿತ್​ 5, ಶಾರುಖ್​ 19, ಶಂಕರ್​ 0, ಅಲಿ 15, ವರುಣ್​ ಚಕ್ರವರ್ತಿ 24, ಕೌಶಿಕ್​ 10ಕ್ಕೆ 3, ಭಾಂಡಗೆ 19ಕ್ಕೆ 3, ವಿದ್ಯಾಧರ್​ 20ಕ್ಕೆ 2, ವೈಶಾಕ್​ 27ಕ್ಕೆ 1, ಶ್ರೇಯಸ್​ 14ಕ್ಕೆ 1), ಕರ್ನಾಟಕ: 11.3 ಓವರ್​ಗಳಲ್ಲಿ 3 ವಿಕೆಟ್​ಗೆ 93 (ಮನೀಷ್​ 42, ಮಯಾಂಕ್​ 30, ಶ್ರೀಜಿತ್​ 9*, ಸ್ಮರಣ್​ 1, ಅಭಿನವ್​ 2*, ಗುರುಜಪ್​ನೀತ್​ 15ಕ್ಕೆ 2). ಪಂದ್ಯಶ್ರೇಷ್ಠ: ಮನೀಷ್​ ಪಾಂಡೆ.

*ಕರ್ನಾಟಕಕ್ಕೆ ಮುಂದಿನ ಪಂದ್ಯ

ಯಾವಾಗ: ಮಂಗಳವಾರ

ಎದುರಾಳಿ: ಬರೋಡ

ಆರಂಭ: ಮಧ್ಯಾಹ್ನ 1.30

ನಾಕೌಟ್​ ಲೆಕ್ಕಾಚಾರ...

ಭರ್ಜರಿ ಜಯದೊಂದಿಗೆ ಕರ್ನಾಟಕದ ರನ್​ರೇಟ್​ (2.193) ಕೂಡ ಸುಧಾರಿಸಿದ್ದು, ನಾಕೌಟ್​ ಆಸೆ ಜೀವಂತ ಉಳಿದಿದೆ. ಕರ್ನಾಟಕ ಈಗ 5 ಪಂದ್ಯಗಳಲ್ಲಿ 3 ಜಯ, 2 ಸೋಲಿನ ಸಹಿತ 12 ಅಂಕಗಳೊಂದಿಗೆ ಬಿ ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬರೋಡ, ಸೌರಾಷ್ಟ್ರ, ಗುಜರಾತ್​ (5 ಪಂದ್ಯಗಳಲ್ಲಿ 4 ಜಯ, 1 ಸೋಲು) ತಲಾ 16 ಅಂಕಗಳೊಂದಿಗೆ ಕ್ರಮವಾಗಿ ಮೊದಲ 3 ಸ್ಥಾನದಲ್ಲಿವೆ. ಕರ್ನಾಟಕ ಕೊನೇ 2 ಪಂದ್ಯಗಳಲ್ಲಿ ತನಗಿಮತ ಮೇಲಿರುವ ಬರೋಡ (ಡಿ.3), ಗುಜರಾತ್​ (ಡಿ. 5) ವಿರುದ್ಧವೇ ಆಡಲಿದ್ದು, ಇವೆರಡಲ್ಲೂ ಗೆದ್ದರೆ ನಾಕೌಟ್​ ಪ್ರವೇಶಿಸುವ ಅವಕಾಶ ಹೆಚ್ಚಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net