

ಇಂದೋರ್: ಅನುಭವಿ ಶ್ರೇಯಸ್ ಗೋಪಾಲ್ (13ಕ್ಕೆ 5) ಮಾರಕ ಸ್ಪಿನ್ ದಾಳಿಯ ನೆರವಿನಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ದೇಶೀಯ ಟೂರ್ನಿಯ ತನ್ನ 4ನೇ ಲೀಗ್ ಪಂದ್ಯದಲ್ಲಿ ಸಿಕ್ಕಿಂ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಗೆಲುವಿನ ಲಯಕ್ಕೆ ಮರಳಿದ ಮಯಾಂಕ್ ಅಗರ್ವಾಲ್ ಪಡೆ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ತಲಾ 2 ಸೋಲು-ಗೆಲುವಿನೊಂದಿಗೆ 8 ಅಂಕ ಸಂಪಾದಿಸಿದೆ.
ಹೋಳ್ಕರ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಸಿಕ್ಕಿಂ ತಂಡ ಮೊದಲ ಬ್ಯಾಟಿಂಗ್‌ಗೆ ಇಳಿಯಿತು. ವೇಗಿ ವಿಧ್ಯಾಧರ್ ಪಾಟೀಲ್ (10ಕ್ಕೆ 3) ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ ದಾಳಿಗೆ ತತ್ತರಿಸಿದ ಸಿಕ್ಕಿಂ, 18.2 ಓವರ್‌ಗಳಲ್ಲಿ 82 ರನ್ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಸುಲಭ ಗುರಿಯ ಚೇಸಿಂಗ್‌ಗೆ ಇಳಿದ ಕರ್ನಾಟಕ ತಂಡ ಮೊದಲ ಓವರ್‌ನಲ್ಲಿಯೇ ನಾಯಕ ಮಯಾಂಕ್ ಅಗರ್ವಾಲ್ (0) ವಿಕೆಟ್ ಕಳೆದುಕೊಂಡಿತು. ಆಗ ಮತ್ತೊರ್ವ ಆರಂಭಿಕ ಮನೀಷ್ ಪಾಂಡೆ (30* ರನ್, 13 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಯುವ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ಶ್ರೀಜಿತ್ (37 ರನ್, 13 ಎಸೆತ, 4 ಬೌಂಡರಿ, 3 ಸಿಕ್ಸರ್) ನಡೆಸಿದ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಅಂತಿಮವಾಗಿ 5.4 ಓವರ್‌ಗಳಲ್ಲಿ 2 ವಿಕೆಟ್‌ಗೆ 86 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು.
ಕರ್ನಾಟಕಕ್ಕೆ 3 ರನ್ ಅಗತ್ಯವಿದ್ದಾಗ ಆರ್.ಸ್ಮರಣ್ (19*) ಸಿಕ್ಸರ್ ಸಿಡಿಸಿ ಇನ್ನು 86 ಎಸೆತ ಬಾಕಿಯಿರುವಂತೆಯೇ ಗೆಲುವು ತಂದುಕೊಟ್ಟರು. ಆರಂಭಿಕ ಚೇತನ್ ಎಲ್‌ಆರ್ ಬದಲಿಗೆ ತಂಡಕ್ಕೆ ಮರಳಿದ ಮನೀಷ್ ಪಾಂಡೆ ಆರಂಭಿಕನಾಗಿ ಕಣಕ್ಕಿಳಿದರು.
ಸಿಕ್ಕಿಂ: 18.2 ಓವರ್‌ಗಳಲ್ಲಿ 82 (ನಿಲೇಶ್ 1, ಆಶಿಶ್ 18, ಪ್ರಾಣೇಶ್ 17, ರೋಶನ್ 13, ರೋನಿತ್ ಮೊರೆ 13, ವಿಧ್ಯಾಧರ್ 10ಕ್ಕೆ 3, ಶ್ರೇಯಸ್ ಗೋಪಾಲ್ 13ಕ್ಕೆ 5, ವೈಶಾಕ್ 14ಕ್ಕೆ 2). ಕರ್ನಾಟಕ: 5.4 ಓವರ್‌ಗಳಲ್ಲಿ 2 ವಿಕೆಟ್‌ಗೆ 86 (ಮನೀಷ್ 30*, ಮಯಾಂಕ್ 0, ಶ್ರೀಜಿತ್ 37, ಸ್ಮರಣ್ 19*, ಪ್ಲಾಜೊರ್ 30ಕ್ಕೆ 1).