ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20: ಕರ್ನಾಟಕಕ್ಕೆ ಸೌರಾಷ್ಟ್ರ ಶಾಕ್​, ನಾಕೌಟ್​ ಹಾದಿ ಕಠಿಣ

web smat kar
Published on

ಇಂದೋರ್​: ಬೌಲಿಂಗ್​ ವಿಭಾಗದ ನೀರಸ ನಿರ್ವಹಣೆಯಿಂದ ಕರ್ನಾಟಕ ತಂಡ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯ ತನ್ನ 3ನೇ ಲೀಗ್​ ಪಂದ್ಯದಲ್ಲಿ ಸೌರಾಷ್ಟ್ರ ಎದುರು 5 ವಿಕೆಟ್​ಗಳಿಂದ ಪರಾಭವಗೊಂಡಿದೆ. ಟೂರ್ನಿಯಲ್ಲಿ ತನ್ನ 2ನೇ ಸೋಲು ಕಂಡ ಕರ್ನಾಟಕ ತಂಡ ಬಿ ಗುಂಪಿನ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದ್ದು, ನಾಕೌಟ್​ ಪ್ರವೇಶದ ಹಾದಿ ಕಠಿಣಗೊಂಡಿದೆ. ಕರ್ನಾಟಕ ಇನ್ನು ಉಳಿದ 4 ಪಂದ್ಯಗಳಲ್ಲಿ ಗೆದ್ದರೂ ನಾಕೌಟ್​ ಪ್ರವೇಶಕ್ಕೆ ಇತರ ಪಂದ್ಯಗಳ ಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.

ಹೋಳ್ಕರ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ ತಂಡ, 16 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ನಂತರ ವಿಕೆಟ್​ ಕೀಪರ್​&ಬ್ಯಾಟರ್​ ಕೆಎಲ್​ ಶ್ರೀಜಿತ್​ (31), ಶ್ರೇಯಸ್​ ಗೋಪಾಲ್​ (36) ಮತ್ತು ಶುಭಾಂಗ್​ ಹೆಗ್ಡೆ (43) ಉಪಯುಕ್ತ ಕೊಡುಗೆಯಿಂದ 8 ವಿಕೆಟ್​ಗೆ 171 ರನ್​ ಪೇರಿಸಿತು. ಆದರೆ ಹಾರ್ವಿಕ್​ ದೇಸಾಯಿ (60) ಅರ್ಧಶತಕ ಬಾರಿಸಿ ಸೌರಾಷ್ಟ್ರಕ್ಕೆ ಆಸರೆಯಾದರು. ಅಂತಿಮವಾಗಿ ಸೌರಾಷ್ಟ್ರ 18.1 ಓವರ್​ಗಳಲ್ಲಿ 5 ವಿಕೆಟ್​ಗೆ 173 ರನ್​ ಪೇರಿಸಿ ಜಯ ದಾಖಲಿಸಿತು. ಕರ್ನಾಟಕ ಪರ ಶ್ರೇಯಸ್​ ಗೋಪಾಲ್​ ಹೊರತಾಗಿ ಇತರ ಬೌಲರ್​ಗಳೆಲ್ಲ ಪ್ರತಿ ಓವರ್​ಗೆ 8ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್​ಬಿಟ್ಟುಕೊಟ್ಟರು.

ಕರ್ನಾಟಕದ ಅನುಭವಿ ಬ್ಯಾಟರ್​ ಹಾಗೂ ಉಪನಾಯಕ ಮನೀಷ್​ ಪಾಂಡೆ ಗಾಯದ ಸಮಸ್ಯೆಯಿಂದಾಗಿ ಈ ಪಂದ್ಯದಲ್ಲೂ ಕಣಕ್ಕಿಳಿಯಲಿಲ್ಲ. ವಿ. ಕೌಶಿಕ್​ ಬದಲಿಗೆ ಮನ್ವಂತ್​ ಕುಮಾರ್​ ಅವಕಾಶ ಪಡೆದರು. ಮನ್ವಂತ್​ ಕುಮಾರ್​ ಕರ್ನಾಟಕ ಪರ ರಾಷ್ಟ್ರೀಯ ಟಿ20 ಪಂದ್ಯ ಆಡಿದ 71ನೇ ಆಟಗಾರ ಎನಿಸಿದರು. ಶ್ರೇಯಸ್​ ಗೋಪಾಲ್​ ಕರ್ನಾಟಕ ಪರ ಟಿ20ಯಲ್ಲಿ 50 ವಿಕೆಟ್​ ಕಬಳಿಸಿದ 5ನೇ ಬೌಲರ್​ ಎನಿಸಿದರು. 39 ಪಂದ್ಯಗಳಲ್ಲೇ ಈ ಸಾಧನೆ ಮಾಡಿ ರಾಜ್ಯದ ಅತಿವೇಗದ ಸಾಧಕ ಎನಿಸಿದರು.

ಕರ್ನಾಟಕ: 8 ವಿಕೆಟ್​ಗೆ 171 (ಮಯಾಂಕ್​ 4, ಶ್ರೀಜಿತ್​ 31, ಸ್ಮರಣ್​ 6, ಶ್ರೇಯಸ್​ 36, ಅಭಿನವ್​ 14, ಶುಭಾಂಗ್​ 43, ಭಾಂಡಗೆ 24, ಉನಾದ್ಕತ್​ 17ಕ್ಕೆ 2, ಚಿರಾಗ್​ ಜಾನಿ 38ಕ್ಕೆ 2, ಪ್ರೇರಕ್​ 29ಕ್ಕೆ 2), ಸೌರಾಷ್ಟ್ರ: 18.1 ಓವರ್​ಗಳಲ್ಲಿ 5 ವಿಕೆಟ್​ಗೆ 173 (ಹಾರ್ವಿಕ್​ 60, ಪ್ರೇರಕ್​ 25, ವಿಶ್ವರಾಜ್​ 18*, ಗೋಹಿತ್​ 15*, ವಿದ್ಯಾಧರ್​ 39ಕ್ಕೆ 2, ವೈಶಾಕ್​ 41ಕ್ಕೆ 1, ಶ್ರೇಯಸ್​ 23ಕ್ಕೆ 1). ಪಂದ್ಯಶ್ರೇಷ್ಠ: ಹಾರ್ವಿಕ್​ ದೇಸಾಯಿ.

*ಕರ್ನಾಟಕಕ್ಕೆ ಮುಂದಿನ ಪಂದ್ಯ

ಯಾವಾಗ: ನವೆಂಬರ್​ 29

ಎದುರಾಳಿ: ಸಿಕ್ಕಿಂ

ಆರಂಭ: ಸಂಜೆ 4.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net