ಕರ್ನಾಟಕದ ಈಜುಪಟುಗಳಾದ ಶ್ರೀಹರಿ, ಧಿನಿಧಿಗೆ ಒಲಿಂಪಿಕ್ಸ್​ ಟಿಕೆಟ್​

web swim
Published on

ಬೆಂಗಳೂರು: ಕರ್ನಾಟಕದ ಈಜುಪಟುಗಳಾದ ಶ್ರೀಹರಿ ನಟರಾಜ್​ ಮತ್ತು ಧಿನಿಧಿ ದೇಸಿಂಘು ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ಅವಕಾಶ ಸಂಪಾದಿಸಿದ್ದಾರೆ. ವಿಶ್ವವಿದ್ಯಾಲಯ ಕೋಟಾ ಸ್ಥಾನದಡಿಯಲ್ಲಿ ಇವರಿಬ್ಬರಿಗೆ ಒಲಿಂಪಿಕ್ಸ್​ ಟಿಕೆಟ್​ ಲಭಿಸಿದೆ.

ವಿಶ್ವವಿದ್ಯಾಲಯ ಕೋಟಾದಡಿಯಲ್ಲಿ, ಒಲಿಂಪಿಕ್ಸ್​ಗೆ ಯಾವುದೇ ಈಜುಪಟುಗಳು ಅರ್ಹತೆ ಪಡೆಯದ ದೇಶಕ್ಕೆ ಇಬ್ಬರು ಅಗ್ರ ಈಜುಪಟುಗಳ ಹೆಸರನ್ನು ಶಿಫಾರಸು ಮಾಡುವ ಅವಕಾಶ ನೀಡಲಾಗುತ್ತದೆ. ಇದರನ್ವಯ ಭಾರತೀಯ ಈಜು ಒಕ್ಕೂಟ (ಎಸ್​ಎಫ್​ಐ) ಶ್ರೀಹರಿ ಮತ್ತು ಧಿನಿಧಿ ಹೆಸರು ಸೂಚಿಸಿದ್ದು, ಅಂತಾರಾಷ್ಟ್ರೀಯ ಈಜು ಒಕ್ಕೂಟ ಇದನ್ನು ಅಂಗೀಕರಿಸಿದೆ.

ಈ ಬಾರಿ ಭಾರತದ ಯಾವುದೇ ಈಜುಪಟುಗಳು ಒಲಿಂಪಿಕ್ಸ್​ಗೆ ನೇರ ಅರ್ಹತೆ ಸಂಪಾದಿಸಿಲ್ಲ. ಹೀಗಾಗಿ ಭಾರತಕ್ಕೆ ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ ಯುನಿವರ್ಸಿಟಿ ಕೋಟಾ ಲಭಿಸಿದೆ ಎಂದು ಎಸ್​ಎಫ್​ಐ ಪ್ರಧಾನ ಕಾರ್ಯದರ್ಶಿ ಮೋನಲ್​ ಚೋಕ್ಸಿ ತಿಳಿಸಿದ್ದಾರೆ. ಒಲಿಂಪಿಕ್ಸ್​ ಅರ್ಹತೆ ಒಲಿಸಿಕೊಳ್ಳಲು ಜೂನ್​ 23 ಕೊನೇ ದಿನವಾಗಿತ್ತು.

ಪುರುಷರ ವಿಭಾಗದ ವಿಶ್ವ ಈಜು ಅಂಕಪಟ್ಟಿಯಲ್ಲಿ ಬೆಂಗಳೂರಿನ 23 ವರ್ಷದ ಶ್ರೀಹರಿ ನಟರಾಜ್​ 849 ಅಂಕಗಳೊಂದಿಗೆ ಅಗ್ರ ಭಾರತೀಯರೆನಿಸಿದ್ದಾರೆ. ಶ್ರೀಹರಿ ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲೂ ಸ್ಪರ್ಧಿಸಿದ್ದರು. ಆಗ ಅವರಿಗೆ 100 ಮೀ. ಬ್ಯಾಕ್​ಸ್ಟ್ರೊಕ್​ನಲ್ಲಿ ಎ ಅರ್ಹತೆ ಲಭಿಸಿತ್ತು. ಪ್ಯಾರಿಸ್​ನಲ್ಲೂ ಅವರು ಇದೇ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ರಾಷ್ಟ್ರೀಯ ಗೇಮ್ಸ್​ನಲ್ಲಿ ಸ್ವರ್ಣ ಗೆದ್ದ ಅತಿ ಕಿರಿಯ ಈಜುಪಟು ಎನಿಸಿದ್ದ ಬೆಂಗಳೂರಿನ 14 ವರ್ಷದ ಧಿನಿಧಿ, 749 ಅಂಕಗಳೊಂದಿಗೆ ಭಾರತದ ಅಗ್ರ ಮಹಿಳಾ ಈಜುಪಟು ಎನಿಸಿದ್ದು, ಒಲಿಂಪಿಕ್ಸ್​ನಲ್ಲಿ 200 ಮೀ. ಫ್ರೀಸ್ಟೈಲ್​ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net