ಫ್ರೆಂಚ್ ಓಪನ್‌ನಲ್ಲಿ ಫೆಡರರ್ ಶುಭಾರಂಭ, ಸ್ವಿಯಾಟೆಕ್ ಜನ್ಮದಿನಕ್ಕೆ ಗೆಲುವಿನ ಗಿಫ್ಟ್​

tennis web
Published on

ಪ್ಯಾರಿಸ್: ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಗೆಲುವಿನ ಆರಂಭವನ್ನು ಕಾಣುವ ಮೂಲಕ 20ನೇ ಜನ್ಮದಿನದ ಸಂಭ್ರಮವನ್ನು ದ್ವಿಗುಣಗೊಳಿಸಿದ್ದಾರೆ. 6ನೇ ಶ್ರೇಯಾಂಕಿತೆ ಕೆನಡ ಬೆಡಗಿ ಬಿಯಾಂಕಾ ಆಂಡ್ರೆಸ್ಕು ಮೊದಲ ಸುತ್ತಿನಲ್ಲೇ ಆಘಾತ ಎದುರಿಸಿದರು. ಪುರುಷರ ವಿಭಾಗದಲ್ಲಿ ದಿಗ್ಗಜ ರೋಜರ್ ಫೆಡರರ್, 2ನೇ ಶ್ರೇಯಾಂಕಿತ ಡೆನಿಲ್ ಮೆಡ್ವೆಡೇವ್, ಅಮೆರಿಕದ ಜಾನ್ ಇಸ್ನರ್ ಶುಭಾರಂಭ ಕಂಡ ಪ್ರಮುಖರು.

8ನೇ ಶ್ರೇಯಾಂಕಿತೆ ಪೋಲೆಂಡ್‌ನ ಸ್ವಿಯಾಟೆಕ್ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಲೊವಾಕಿಯಾದ ಕಜಾ ಜುವಾನ್ ವಿರುದ್ಧ 6-0, 7-5 ನೇರಸೆಟ್‌ಗಳಿಂದ ಜಯಿಸಿದರು. ಆತ್ಮಿಯ ಗೆಳೆತಿಯೂ ಆದ ಜುವಾನ್ ವಿರುದ್ಧ ಸಾಧಿಸಿದ ಈ ಜಯದೊಂದಿಗೆ ಸ್ವಿಯಾಟೆಕ್ ಅಜೇಯ ಓಟವನ್ನು ಸತತ 7ನೇ ವಾರಕ್ಕೆ ವಿಸ್ತರಿಸಿದರು. ಕಳೆದ ತಿಂಗಳು ಅವರು ರೋಮ್ ಪ್ರಶಸ್ತಿ ಜಯಿಸಿ ಟೂರ್ನಿಗೆ ಉತ್ತಮ ಸಿದ್ಧತೆ ನಡೆಸಿದ್ದರು. 2019ರ ಯುಎಸ್ ಓಪನ್ ಚಾಂಪಿಯನ್ ಬಿಯಾಂಕಾ ಆಂಡ್ರೆಸ್ಕು ಸ್ಲೊವೇನಿಯಾದ ಟಮರ ಜಿದಾನ್‌ಸೆಕ್‌ಗೆ 7-6, 6-7, 7-9ರಿಂದ ಶರಣಾಗಿ ಹೊರಬಿದ್ದರು.

ರಷ್ಯಾ ಆಟಗಾರ ಮೆಡ್ವೆಡೇವ್ 6-3, 6-3, 7-5ರಿಂದ ಕಜಾಕಿಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ವಿರುದ್ಧ ಜಯಿಸಿದರು. ಜಾನ್ ಐಸ್ನರ್ ಆಲ್ ಅಮೆರಿಕನ್ ಕಾದಾಟದಲ್ಲಿ ಸ್ಯಾಮ್ ಕ್ವೆರ‌್ರಿಗೆ 7-2, 6-3, 6-4ರಿಂದ ಸೋಲುಣಿಸಿದರು.

ಫೆಡರರ್‌ಗೆ ಸುಲಭ ಗೆಲುವು
ಸ್ವಿಸ್ ದಿಗ್ಗಜ ಆಟಗಾರ ರೋಜರ್ ಫೆಡರರ್ ಮೊದಲ ಸುತ್ತಿನ ಪಂದ್ಯದಲ್ಲಿ 6-2, 6-4, 6-3ರಿಂದ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೋಮಿನ್ ವಿರುದ್ಧ ಸುಲಭ ಜಯ ಸಾಧಿಸಿದರು. 2020ರ ಆಸ್ಟ್ರೇಲಿಯನ್ ಓಪನ್ ಬಳಿಕ ಅಂದರೆ 487 ದಿನಗಳ ನಂತರ ಫೆಡರರ್ ಗ್ರಾಂಡ್ ಸ್ಲಾಂ ಪಂದ್ಯವಾಡಿದರು.

ಅಜರೆಂಕಾಗೆ ಜಯ
ಮಾಜಿ ನಂ. 1 ವಿಕ್ಟೋರಿಯಾ ಅಜರೆಂಕಾ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಅನುಭವಿ ಆಟಗಾರ್ತಿ ಸ್ವೆಟ್ಲಾನಾ ಕುಜ್ನೆತ್ಸೋವಾ ಅವರಿಂದ ಭಾರಿ ಪ್ರತಿರೋಧವನ್ನು ಎದುರಿಸಿದರೂ, ಅಂತಿಮವಾಗಿ 6-4, 2-6, 6-3 ಸೆಟ್‌ಗಳಿಂದ ಜಯಿಸಿದರು. ಯುಎಸ್ ಓಪನ್‌ನಲ್ಲಿ ಫೈನಲ್‌ಗೇರುವ ಮೂಲಕ 2020ಕ್ಕೆ ಉತ್ತಮ ವಿದಾಯ ಹೇಳಿದ್ದ , ಬೆಲಾರಸ್ ತಾರೆ ಅಜರೆಂಕಾ, ಇತ್ತೀಚೆಗೆ ಬೆನ್ನು ನೋವಿನ ಸಮಸ್ಯೆಯಿಂದ ಚೇತರಿಸಿಕೊಂಡು ಟೆನಿಸ್ ಕೋರ್ಟ್‌ಗೆ ಮರಳಿದ್ದಾರೆ. ಮ್ಯಾಡಿಸನ್ ಕೀಯ್ಸ 6-3, 3-6, 6-1ರಿಂದ ಫ್ರಾನ್ಸ್‌ನ ಒಸಿಯನ್ ಡೊಡಿನ್ ವಿರುದ್ಧ ಜಯಿಸಿದರು.

ಸಿಸಿಪಾಸ್ ಮುನ್ನಡೆ
ಪುರುಷರ ಸಿಂಗಲ್ಸ್‌ನಲ್ಲಿ ಗ್ರೀಸ್ ಆಟಗಾರ ಸ್ಟೆಾನೋಸ್ ಸಿಸಿಪಾಸ್ ಫ್ರಾನ್ಸ್‌ನ ಜೆರೆಮಿ ಚಾರ್ಡಿ ವಿರುದ್ಧ 7-6, 6-3, 6-1ರಿಂದ ಗೆದ್ದು 2ನೇ ಸುತ್ತಿಗೇರಿದರು. ಆರನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್ ಕೂಡ ಮುನ್ನಡೆ ಸಾಧಿಸಿದರು. ಜಪಾನ್‌ನ ಕೀ ನಿಶಿಕೋರಿ 6-4, 6-7, 6-3, 4-6, 6-4ರಿಂದ ಇಟಲಿಯ ಅಲೆಸಾಂಡ್ರೊ ಗಿಯಾನೆಸಿ ವಿರುದ್ಧ ಪ್ರಬಲ ಸವಾಲು ಹಿಮ್ಮೆಟ್ಟಿಸಿ 2ನೇ ಸುತ್ತಿಗೇರುವಲ್ಲಿ ಸಲರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net