

ನವದೆಹಲಿ: ಕಳೆದ 2016ರ ರಿಯೋ ಒಲಿಂಪಿಕ್ಸ್ಗೆ ಕೆಲವೇ ದಿನಗಳು ಬಾಕಿ ಇದ್ದಾಗ ಭಾರತದ ಕ್ರೀಡಾ ವಲಯದಲ್ಲಿ ಬಹುದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಅದುವೇ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರ ಉದ್ದೀಪನ ಪ್ರಕರಣ. ಅವಳಿ ಒಲಿಂಪಿಕ್ಸ್ ಪದಕ ವಿಜೇತ ಪೈಲ್ವಾನ್ ಸುಶೀಲ್ ಕುಮಾರ್ ಅವರನ್ನು ಹಿಮ್ಮೆಟ್ಟಿಸಿ ರಿಯೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದ ನರಸಿಂಗ್ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಇದರಿಂದ ಅವರು ವಾಡಾದಿಂದ 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಹೀಗಾಗಿ ರಿಯೋ ಒಲಿಂಪಿಕ್ಸ್ ಅರ್ಹತೆ ಕೈತಪ್ಪಿದ್ದು ಮಾತ್ರವಲ್ಲದೆ 2020ರ ಟೋಕಿಯೊ ಒಲಿಂಪಿಕ್ಸ್ನಲ್ಲೂ ಸ್ಪರ್ಧಿಸುವ ಅವರ ಕನಸು ಕೂಡ ಭಗ್ನಗೊಂಡಿತ್ತು. ಆದರೆ ಇದೀಗ ಕರೊನಾ ಮಹಾಮಾರಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವೇ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವುದರಿಂದ ನರಸಿಂಗ್ ಕ್ರೀಡಾ ಜೀವನದಲ್ಲಿ ಹೊಸ ಬೆಳಕು ಮೂಡಿದೆ.
30 ವರ್ಷದ ನರಸಿಂಗ್ ಯಾದವ್ ನಿಷೇಧ ಶಿಕ್ಷೆ ಮುಂದಿನ ಜುಲೈನಲ್ಲಿ ಅಂತ್ಯಗೊಳ್ಳಲಿದೆ. ಇದೇ ವರ್ಷ ಜುಲೈ-ಆಗಸ್ಟ್ ನಲ್ಲಿ ಒಲಿಂಪಿಕ್ಸ್ ನಡೆದಿದ್ದರೆ ನರಸಿಂಗ್ಗೆ ಸ್ಪರ್ಧಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ 2024ರ ವೇಳೆಗೆ 34ನೇ ವಯಸ್ಸಿನಲ್ಲಿ ಮತ್ತೆ ಅಖಾಡಕ್ಕೆ ಇಳಿಯುವುದು ಕೂಡ ಕಷ್ಟಕರವಾಗುತ್ತಿತ್ತು. ಆದರೆ ಈಗ ಮುಂದಿನ ವರ್ಷದ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶವಿದ್ದು, ಅವರ ಪ್ರಯತ್ನಕ್ಕೆ ನಾವು ಅಡ್ಡ ಬರುವುದಿಲ್ಲ ಎಂದು ಭಾರತೀಯ ಕುಸ್ತಿ ಒಕ್ಕೂಟವೂ ಸ್ಪಷ್ಟಪಡಿಸಿದೆ.
ನರಸಿಂಗ್ 74 ಕೆಜಿ ವಿಭಾಗದ ಸ್ಪರ್ಧಿಯಾಗಿದ್ದು, ಈ ವಿಭಾಗದಿಂದ ಭಾರತ ಇನ್ನಷ್ಟೇ ಒಲಿಂಪಿಕ್ಸ್ ಅರ್ಹತೆ ಖಚಿತಪಡಿಸಿ ಕೊಳ್ಳಬೇಕಿದೆ. ಹಿಂದೆ ಈ ವಿಭಾಗದಲ್ಲಿ ಸುಶೀಲ್ ಕುಮಾರ್ ಪ್ರಾಬಲ್ಯ ಸಾಧಿಸುತ್ತಿದ್ದರು. ಆದರೆ ಈಗ ಅವರ ಫಾಮ್ರ್ ಕುಗ್ಗಿರುವುದರಿಂದ ನರಸಿಂಗ್ ಫಿಟ್ ಆಗಿ ಅಖಾಡಕ್ಕಿಳಿದರೆ ಮತ್ತೊಮ್ಮೆ ಅವರನ್ನು ಹಿಮ್ಮೆಟ್ಟಿಸಿ ಒಲಿಂಪಿಕ್ಸ್ ಅರ್ಹತೆ ಪಡೆಯುವ ಅವಕಾಶವಿದೆ. ‘ನಾನು ಯಾವತ್ತೂ ತಪು್ಪ ಮಾಡಿಲ್ಲ. ನನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವೆ. ಆದರೆ ಯಾವಾಗಲೂ ಸತ್ಯಕ್ಕೆ ಗೆಲುವಿದೆ ಎಂದು ನಂಬಿದ್ದೇನೆ. ಈ ಅವಕಾಶ ನನಗೆ ವರದಾನವಾಗಿ ಬಂದಿದೆ. ಈಗ ಪುನರಾಗಮನ ಮತ್ತು ಟೋಕಿಯೊ ಗೇಮ್ಸ್ನಲ್ಲಿ ಪದಕ ಗೆಲುವಿನತ್ತ ಗಮನ ಹರಿಸಿರುವೆ’ ಎಂದು ನರಸಿಂಗ್ ತಿಳಿಸಿದ್ದಾರೆ. ಅವರು ಈಗ ಮುಂಬೈನಲ್ಲಿ ಕೋಚ್ ಜಗ್ಮಲ್ ಸಿಂಗ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ನರಸಿಂಗ್ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಾಗ, ಕುತಂತ್ರದಿಂದ ಅವರ ಆಹಾರದಲ್ಲಿ ಉದ್ದೀಪನ ಸೇರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ನಾಡಾ ಅವರ ಮೇಲೆ ನಿಷೇಧ ಹೇರದಿದ್ದರೂ, ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಪ್ರವೇಶಿಸಿದ್ದ ವಾಡಾ, ರಿಯೋ ಒಲಿಂಪಿಕ್ಸ್ ಸ್ಪರ್ಧೆಗೆ ಕೆಲವೇ ಗಂಟೆಗಳಿರುವಾಗ ನಿಷೇಧ ಶಿಕ್ಷೆ ವಿಧಿಸಿತ್ತು. ಸುಶೀಲ್ ಕುಮಾರ್ ಅವರೇ ಕುತಂತ್ರದಿಂದ ನರಸಿಂಗ್ರನ್ನು ಉದ್ದೀಪನದಲ್ಲಿ ಸಿಲುಕಿಸಿದ್ದರು ಎಂದು ದೂರಲಾಗಿದ್ದರು, ಈ ಬಗ್ಗೆ ನಡೆದ ತನಿಖೆಯಲ್ಲಿ ಏನೂ ಸ್ಪಷ್ಟವಾಗಿರಲಿಲ್ಲ. -ಪಿಟಿಐ
ನಾನು ಕಳೆದ 4 ವರ್ಷಗಳಿಂದ ಸ್ಪರ್ಧೆ ನಡೆಸಿಲ್ಲ. ಆದರೆ ಸಂಪೂರ್ಣ ಬದ್ಧತೆಯಿಂದ ತರಬೇತಿ ಪಡೆದಿದ್ದೇನೆ. 2015ರ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು ಗೆದ್ದು ರಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದೆ. ಈ ಬಾರಿ ಒಲಿಂಪಿಕ್ಸ್ ಅರ್ಹತೆ ಪಡೆಯುವುದು ಮಾತ್ರವಲ್ಲದೆ ಪದಕ ವೇದಿಕೆ ಏರುವ ವಿಶ್ವಾಸವಿದೆ. | ನರಸಿಂಗ್ ಪಂಚಮ್ ಯಾದವ್ ಕುಸ್ತಿಪಟು